ADVERTISEMENT

ವೈದ್ಯರ ಕೊರತೆ: ಸಿದ್ದರಾಮಯ್ಯ - ಶ್ರೀರಾಮುಲು ಟ್ವೀಟ್ ಸಮರ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 12:55 IST
Last Updated 6 ಡಿಸೆಂಬರ್ 2019, 12:55 IST
ಬಿ.ಶ್ರೀರಾಮುಲು ಹಾಗೂ ಸಿದ್ದರಾಮಯ್ಯ
ಬಿ.ಶ್ರೀರಾಮುಲು ಹಾಗೂ ಸಿದ್ದರಾಮಯ್ಯ    

ಬಾಗಲಕೋಟೆ: ಬಾದಾಮಿ ತಾಲ್ಲೂಕಿನ ಕೆರೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲ ಎಂಬ ವಿಚಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ಬಿ.ಶ್ರೀರಾಮುಲು ನಡುವೆ ಟ್ವೀಟ್ ಸಮರಕ್ಕೆ ಕಾರಣವಾಗಿದೆ.

ಕೆರೂರು ಪಟ್ಟಣದಲ್ಲಿ ಗುರುವಾರ ಸರ್ಕಾರಿ ಪ್ರೌಢಶಾಲೆ ಉದ್ಘಾಟನೆ ಸಮಾರಂಭದಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಈ ವೇಳೆ ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಎಂಬ ಸಂಗತಿಯನ್ನು ಸ್ಥಳೀಯರು ಗಮನಕ್ಕೆ ತಂದಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ ‘ನೀವು ಚುನಾವಣೆಯಲ್ಲಿ ಸೋಲಿಸಿ ಕಳುಹಿಸಿದ್ದ ಶ್ರೀರಾಮುಲು ಈಗ ಆರೋಗ್ಯ ಸಚಿವರಾಗಿದ್ದಾರೆ. ಅವರು ನನ್ನ ಜೊತೆ ಮಾತನಾಡುವುದಿಲ್ಲ. ಆಸ್ಪತ್ರೆಗೆ ವೈದ್ಯರನ್ನು ನಿಯೋಜಿಸುವಂತೆ ಪತ್ರ ಬರೆಯುತ್ತೇನೆ’ ಎಂದು ಹೇಳಿದ್ದರು.

ಶ್ರೀರಾಮುಲು ತಿರುಗೇಟು:ಇದಕ್ಕೆ ಶುಕ್ರವಾರ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಶ್ರೀರಾಮುಲು, ಕೆರೂರು ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಇದೆ ಎಂಬ ಕಾರಣಕ್ಕೆ ನನ್ನ ಬಗ್ಗೆ ರಾಜಕೀಯ ಟೀಕೆ ಮಾಡಿದ್ದೀರಿ. ಆ ಆಸ್ಪತ್ರೆ ನಿಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ ಎಂಬುದು ಗೊತ್ತಿರಲಿಲ್ಲವೇ? ಯಾವತ್ತಾದರೂ ಸಮಸ್ಯೆಯ ಬಗ್ಗೆ ನನ್ನ ಗಮನಕ್ಕೆ ತಂದಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ನಿಮ್ಮ ವಿರುದ್ಧ ಬಾದಾಮಿಯಲ್ಲಿ ಸೋತಿರಬಹುದು. ಆದರೆ ನೀವು ಚಾಮುಂಡೇಶ್ವರಿಯಲ್ಲಿ ಸೋತಷ್ಟು ಹೀನಾಯವಾಗಿ ಸೋತಿಲ್ಲ. ಚಾಮುಂಡೇಶ್ವರಿ ಜನರನ್ನು ನೀವು ಮರೆತಂತೆ ಬಾದಾಮಿಯ ಜನರನ್ನು ನಾನು ಮರೆತಿಲ್ಲ. ಪ್ರವಾಹ ಬಂದಾಗ ನಿಮಗಿಂತ ಮೊದಲು ಹೋಗಿ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ’ ಎಂದು ಕಾಲೆಳೆದಿದ್ದಾರೆ.

’ನಿಮ್ಮ ಸರ್ಕಾರ ಐದು ವರ್ಷ ಮತ್ತು ಮೈತ್ರಿ ಸರ್ಕಾರದಲ್ಲಿ ಒಂದುಕಾಲು ವರ್ಷದಲ್ಲಿ ನೀವೇನು ಸಾಧನೆ ಮಾಡಿದ್ದೀರಿ. ನಾನು ಸಚಿವನಾಗಿ 100 ದಿನ ಕಳೆದಿದೆ ಅಷ್ಟೆ. ವೈದ್ಯರು, ಸಿಬ್ಬಂದಿ ನೇಮಕ ಪ್ರಕ್ರಿಯೆ ಆರಂಂಭಿಸಿದ್ದೇನೆ. ನಿಮ್ಮ ಕ್ಷೇತ್ರದಲ್ಲಿ ಎಷ್ಟು ಆಸ್ಪತ್ರೆಗಳಿವೆ. ಎಷ್ಟು ವೈದ್ಯರು ಮತ್ತು ಸಿಬ್ಬಂದಿಯ ಕೊರತೆ ಇದೆ ಎಂದು ಪತ್ರ ಕಳುಹಿಸಿಕೊಡಿ. ಹುದ್ದೆಗಳನ್ನು ಭರ್ತಿ ಮಾಡೋಣ. ರಾಜಕೀಯವನ್ನು ಚುನಾವಣೆಗಷ್ಟೇ ಸೀಮಿತವಾಗಿಸೋಣ. ಬಳಿಕ ರಾಜ್ಯದ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ‘ ಎಂದು ಕಿವಿಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.