ADVERTISEMENT

2021ರ ಆರಂಭದಲ್ಲೇ ಲಸಿಕೆ ಲಭ್ಯವಾಗುವ ನಿರೀಕ್ಷೆ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 10:24 IST
Last Updated 27 ಅಕ್ಟೋಬರ್ 2020, 10:24 IST
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್   

ಬೆಂಗಳೂರು: ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಸ್ಟ್ರಾಜೆನೆಕಾ ಕಂಪನಿ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆ 2021ರ ಆರಂಭದ ಹಂತದಲ್ಲೇ ಭಾರತದಲ್ಲಿ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಆಸ್ಟ್ರಾಜೆನೆಕಾ ಕಂಪನಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಗಗನ್ ದೀಪ್ ಸಿಂಗ್ ಅವರೊಂದಿಗೆ ಮಂಗಳವಾರ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ‘ಆಸ್ಟ್ರಾಜೆನೆಕಾ ಕಂಪನಿ ಅಭಿವೃದ್ಧಿಪಡಿಸಿದ ಲಸಿಕೆಯ ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದೆ. ಎರಡು ಮತ್ತು ಮೂರನೇ ಹಂತದ ಪ್ರಯೋಗ ಶೀಘ್ರದಲ್ಲಿ ಆರಂಭವಾಗಲಿದೆ’ ಎಂದರು.

ಮೈಸೂರಿನ ಜೆ.ಎಸ್.ಎಸ್. ವೈದ್ಯಕೀಯ ಕಾಲೇಜು ಸೇರಿದಂತೆ ಭಾರತದ ಹಲವೆಡೆ ಲಸಿಕೆಯ ಪ್ರಯೋಗ ನಡೆದಿದೆ. ಮೊದಲ ಹಂತದಲ್ಲಿ 18ರಿಂದ 55 ವರ್ಷ ವಯಸ್ಸಿನ 1,600 ಜನರಿಗೆ ಲಸಿಕೆ ನೀಡಲಾಗಿದೆ. ಲಸಿಕೆ ಪಡೆದ 28 ದಿನಗಳ ಅವಧಿಯಲ್ಲಿ ಕೊರೊನಾ ಸೋಂಕು ಪ್ರತಿರೋಧಕ ಶಕ್ತಿ ದೇಹದಲ್ಲಿ ಕಾಣಿಸಿದೆ ಎಂದು ಅವರು ತಿಳಿಸಿದರು.

ADVERTISEMENT

ಮುಂದಿನ ಹಂತಗಳಲ್ಲಿ 5ರಿಂದ 12 ವರ್ಷ ವಯಸ್ಸಿನ ಮಕ್ಕಳು, 18ರಿಂದ 55 ವರ್ಷ ವಯಸ್ಸಿನವರು ಮತ್ತು 55 ವರ್ಷ ಮೇಲ್ಪಟ್ಟವರಿಗೆ ಮೂರು ವರ್ಗಗಳಲ್ಲಿ ವಿಂಗಡಿಸಿ ಲಸಿಕೆ ನೀಡಲಾಗುತ್ತದೆ. ಕೊರೊನಾ ಸೋಂಕಿತರಿಗೂ ಪ್ರಾಯೋಗಿಕ ಲಸಿಕೆ ನೀಡಲು ಕಂಪನಿ ಉದ್ದೇಶಿಸಿದೆ. ಕಂಪನಿಯ ಅಧಿಕಾರಿಗಳು ಈ ಎಲ್ಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಎಂದರು.

ಆಸ್ಟ್ರಾಜೆನೆಕಾ ಕಂಪನಿ ಪುಣೆಯ ಸೀರಮ್ ಇನ್ಸ್‌ಟಿಟ್ಯೂಟ್ ಜತೆ ಸೇರಿ ಭಾರತದಲ್ಲಿ ಲಸಿಕೆ ಉತ್ಪಾದಿಸಲಿದೆ. 100 ಕೋಟಿ ಜನರಿಗೆ ನೀಡಲು ಸಾಕಾಗುವಷ್ಟು ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಇದೆ ಎಂದು ಕಂಪನಿ ತಿಳಿಸಿದೆ ಎಂದರು.

ಹೈದರಾಬಾದ್‌ನ ಭಾರತ್ ಬಯೋಟೆಕ್ ಕಂಪನಿ ಕೊವ್ಯಾಕ್ಸಿನ್ ಎಂಬ ಲಸಿಕೆ ಅಭಿವೃದ್ಧಿಪಡಿಸುತ್ತಿದೆ. ಆ ಕಂಪನಿಯ ಮುಖ್ಯಸ್ಥ ಕೃಷ್ಣ ಯಲ್ಲ ಅವರೊಂದಿಗೆ ಮಾತುಕತೆಗೆ ಸಿದ್ಧತೆ ನಡೆದಿದೆ ಎಂದು ಸಚಿವರು ತಿಳಿಸಿದರು.

‘ಕೋವಿಡ್ ಪರೀಕ್ಷೆ, ಚಿಕಿತ್ಸೆ ಸೇರಿದಂತೆ ಈವರೆಗೆ ಎಲ್ಲ ವೆಚ್ಚಗಳನ್ನು ರಾಜ್ಯ ಸರ್ಕಾರ ಭರಿಸಿದೆ. ಲಸಿಕೆಯನ್ನು ಉಚಿತವಾಗಿ ನೀಡಲಾಗುವುದೋ, ದರ ನಿಗದಿ ಮಾಡಲಾಗುತ್ತದೆಯೋ ಎಂಬುದನ್ನು ಈಗಲೇ ಹೇಳಲಾಗದು. ಕೇಂದ್ರ ಸರ್ಕಾರದ ನಿರ್ದೇಶನದ ಆಧಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.