ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಸೌಲಭ್ಯ ಒದಗಿಸುವ 'ಕರ್ನಾಟಕ ಆರೋಗ್ಯ ಕುಟುಂಬ ಸಂಜೀವಿನಿ ಯೋಜನೆ'ಯ ಕೆಲವು ಅಂಶಗಳನ್ನು ಪರಿಷ್ಕರಿಸಲಾಗಿದ್ದು, ಅದಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಅಲೋಪತಿ ಮತ್ತು ಆಯುಷ್ ಚಿಕಿತ್ಸಾ ಪದ್ಧತಿಗಳನ್ನು ಒಳಗೊಂಡ ಎಲ್ಲ ಹೊರರೋಗಿ ವೈದ್ಯಕೀಯ ಚಿಕಿತ್ಸೆಗಳು, ಔಷಧೋಪಚಾರಗಳು, ಒಳರೋಗಿ ಚಿಕಿತ್ಸೆಗಳು, ವಾರ್ಷಿಕ ಆರೋಗ್ಯ ತಪಾಸಣೆ ಮುಂತಾದ ಆರೋಗ್ಯ ಸೌಲಭ್ಯಗಳನ್ನು ಒದಗಿಸಲಾಗುವುದು. ಆದರೆ, ಎಲ್ಲ ಚಿಕಿತ್ಸೆಗಳನ್ನು ಏಕಕಾಲದಲ್ಲಿ ಆರಂಭಿಸಲು ಸಾಧ್ಯವಿಲ್ಲ. ಆದ್ದರಿಂದ ಯೋಜನೆಯ ಮೊದಲ ಹಂತದಲ್ಲಿ ಅಲೋಪತಿ ಚಿಕಿತ್ಸಾ ವಿಧಾನದಲ್ಲಿ ಒಳರೋಗಿ ಚಿಕಿತ್ಸಾ ವಿಧಾನಗಳನ್ನು ಮಾತ್ರ ಆರಂಭಿಸಲು ಉದ್ದೇಶಿಸಲಾಗಿದೆ.
ವೈದ್ಯಕೀಯ ಚಿಕಿತ್ಸಾ ವಿಧಾನವನ್ನು ಸಿಜಿಎಚ್‌ಎಸ್, ಎಬಿ–ಎಆರ್‌ಕೆ, ಎನ್‌ಎಚ್‌ಎ ಪ್ರಕಟಿಸಿರುವ ಎಚ್‌ಬಿಪಿ 2022 ಯೋಜನೆಯಡಿ ಒಳಗೊಂಡ ಕೆಎಎಸ್‌ಎಸ್ ಪ್ಯಾಕೇಜ್ ಮಾಸ್ಟರ್ ಅಡಿ ಚಿಕಿತ್ಸಾ ವಿಧಾನಗಳು ಮತ್ತು ದರಗಳನ್ನು ಅಳವಡಿಸಿಕೊಳ್ಳಲು ಉದ್ದೇಶಿಸಲಾಗಿದೆ.
ಸಿಜಿಎಚ್‌ಎಸ್ ಪ್ಯಾಕೇಜ್ ಅಡಿ ಎನ್‌ಎಬಿಎಚ್ ಮಾನ್ಯತೆಯನ್ನು ಪಡೆದಿರುವ ನೋಂದಾಯಿತ ಆಸ್ಪತ್ರೆಗಳಿಗೆ ನೀಡುತ್ತಿರುವ ಶೇ 15 ಹೆಚ್ಚುವರಿ ಪ್ರೋತ್ಸಾಹ ಧನವನ್ನು ಕೆಎಎಸ್ಎಸ್‌ನಲ್ಲಿ ಒಳಗೊಂಡಿರುವ ಎಲ್ಲಾ ಪ್ಯಾಕೇಜ್‌ಗಳಿಗೂ ಅನ್ವಯಿಸಲು ಪ್ರಸ್ತಾಪಿಸಲಾಗಿದೆ.
ಕುಟುಂಬ ಪದದ ವ್ಯಾಖ್ಯೆಯಲ್ಲಿ ಸರ್ಕಾರಿ ನೌಕರನ ಮಗ/ಮಗಳು ವೈದ್ಯಕೀಯ ಚಿಕಿತ್ಸೆ ಪಡೆಯಲು ಆತ/ಆಕೆ 30 ವರ್ಷಗಳ ಗರಿಷ್ಠ ಮಿತಿಯಲ್ಲಿರಬೇಕು. ಸ್ವಂತ ಸಂಪಾದನೆ ಮಾಡುವವರೆಗೆ ಅಥವಾ ಮದುವೆಯಾಗುವವರೆಗೆ ಚಿಕಿತ್ಸೆ ಪಡೆಯಬಹುದಾಗಿದೆ. ನೌಕರನ ಮೇಲೆ ಅವಲಂಬಿತರಾಗಿರುವ ತಂದೆ–ತಾಯಿಯರ ತಿಂಗಳ ಆದಾಯ ಮಿತಿ ₹17,000 ಗಳಿಗೆ ನಿಗದಿಪಡಿಸಲಾಗಿದೆ. ಅಲ್ಲದೇ ವಿಧವೆ/ವಿಚ್ಛೇದಿತ ಮಗಳಿಗೆ ಕೂಡ ವೈದ್ಯಕೀಯ ಸೌಲಭ್ಯ ಪಡೆಯಲು ಅವಕಾಶ ನೀಡಲಾಗಿದೆ. 30 ವರ್ಷ ಮೀರಿದ ಅವಿವಾಹಿತ ಮಗ ಅಥವಾ ಮಗಳು ದೈಹಿಕ ಅಥವಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಸ್ವಂತ ಸಂಪಾದನೆ ಮಾಡಲು ಅಸಮರ್ಥರಾಗಿದ್ದರೆ ಅಂತಹವರಿಗೆ ಗರಿಷ್ಠ ಮಿತಿ ಇಲ್ಲದೆ ಚಿಕಿತ್ಸೆ ಪಡೆಯಬಹುದು.
ಮುತ್ತಯ್ಯರಿಂದ ₹2.40 ಕೋಟಿ ವಸೂಲಿಗೆ ತೀರ್ಮಾನ
ಮುತ್ತಯ್ಯ ಅವರು ಬಳ್ಳಾರಿ ಜಿಲ್ಲೆ ಡಿಎಫ್‌ಓ ಆಗಿದ್ದ ಸಂದರ್ಭದಲ್ಲಿ (2011) ಅಕ್ರಮ ಗಣಿಗಾರಿಕೆಗೆ ಸಹಕರಿಸಿ ಆರೋಪದ ಮೇಲೆ ಇಲಾಖೆ ವಿಚಾರಣೆ ನಡೆಸುವಂತೆ ಲೋಕಾಯುಕ್ತರು ಮಾಡಿದ ಶಿಫಾರಸನ್ನು ಕೈಬಿಡಲು ಸಚಿವ ಸಂಪುಟ ತೀರ್ಮಾನ ಮಾಡಿದೆ.
ಇವರಿಂದ ಸರ್ಕಾರಕ್ಕೆ ₹2.40 ಕೋಟಿ ನಷ್ಟ ಉಂಟಾಗಿದ್ದು, ಅವರ ವಿರುದ್ಧ ಸಿವಿಲ್ ದಾವೆ ಹೂಡಿ ಸರ್ಕಾರಕ್ಕೆ ಆಗಿರುವ ನಷ್ಟವನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಲು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಸೂಚಿಸಲು ತೀರ್ಮಾನಿಸಲಾಯಿತು.
ಕ್ರಮಕ್ಕೆ ನಕಾರ:
ಮಾನ್ವಿ ತಾಲ್ಲೂಕು ಪಂಚಾಯಿತಿ ಇಒ ಆಗಿದ್ದ ಪ್ರಶಾಂತ್ ಕುಮಾರ್ ಮಿಶ್ರ ಅವರ ವಿರುದ್ಧ ಲೋಕಾಯುಕ್ತ ಮಾಡಿದ್ದ ಶಿಫಾರಸನ್ನು ಕೈಬಿಡಲು, ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಎನ್ ಜಯರಾಮ್ ವಿರುದ್ಧ ಲೋಕಾಯುಕ್ತ ಮಾಡಿದ್ದ ಶಿಫಾರಸು ಕೈಬಿಡಲು ತೀರ್ಮಾನಿಸಲಾಯಿತು ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.