ಪ್ರಾತಿನಿಧಿಕ ಚಿತ್ರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ, ಮೂಲ್ಕಿ, ಸುಬ್ರಹ್ಮಣ್ಯ ಪ್ರದೇಶದಲ್ಲಿ ಬುಧವಾರವೂ ಉತ್ತಮ ಮಳೆ ಸುರಿಯಿತು. ಉಡುಪಿ ಜಿಲ್ಲೆಯಲ್ಲಿ ಸಾಧಾರಣ ಮಳೆ ಸುರಿದಿದೆ.
ಮಡಿಕೇರಿಯಲ್ಲಿ ಮುಂದುವರಿದ ಭಾರಿ ಮಳೆ:
ನಗರದಲ್ಲಿ ಬುಧವಾರವೂ ಭಾರಿ ಮಳೆ ಸುರಿಯಿತು. ಬೆಳಿಗ್ಗೆ ಸುಮಾರು 3 ಗಂಟೆಗೂ ಹೆಚ್ಚು, ಮಧ್ಯಾಹ್ನದ ನಂತರ 2 ಗಂಟೆಗೂ ಹೆಚ್ಚು ಬಿರುಸಿನ ಮಳೆಯಾಯಿತು. ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮದ ನಿವಾಸಿ ಪಿ.ಎಸುಮಯ್ಯ ಎಂಬವರ ಮನೆ ಕುಸಿದು ಬಿದ್ದಿದೆ. ಭಾರಿ ಮಳೆಯ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆಯು ಗುರುವಾರ (ಜುಲೈ 17) ‘ಆರೆಂಜ್ ಅಲರ್ಟ್’ ಘೋಷಿಸಿದೆ.
ತುಂತುರು ಮಳೆ: (ದಾವಣಗೆರೆ ವರದಿ):
ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ತುಂತುರು ಮಳೆ ಸುರಿಯಿತು. ಬೆಳಗಿನ ಜಾವದಿಂದಲೇ ಆರಂಭವಾದ ಮಳೆ ಸೋನೆಯಂತೆ ಇಡೀ ದಿನ ಸುರಿಯಿತು. ಶಾಲೆ– ಕಾಲೇಜುಗಳಿಂದ ವಿದ್ಯಾರ್ಥಿಗಳು ಮನೆಗಳಿಗೆ ಮರಳುವಾಗ ಮಳೆಯಿಂದ ತೊಂದರೆ ಅನುಭವಿಸಿದರು. ವೇಗವಾಗಿ ಬೀಸುತ್ತಿದ್ದ ಗಾಳಿಯ ಜೊತೆಗೆ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.