ADVERTISEMENT

ಭ್ರಷ್ಟಾಚಾರ ಪ್ರಕರಣ | ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 15:39 IST
Last Updated 27 ಮಾರ್ಚ್ 2023, 15:39 IST
ಕೆ.ಮಾಡಾಳ್ ವಿರೂಪಾಕ್ಷಪ್ಪ
ಕೆ.ಮಾಡಾಳ್ ವಿರೂಪಾಕ್ಷಪ್ಪ   

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್‌) ನಿಯಮಿತದ ಟೆಂಡರ್‌ ಪ್ರಕ್ರಿಯೆಯಲ್ಲಿ ಲಂಚ ಪಡೆದ ಪ್ರಕರಣದಲ್ಲಿನ ಮೊದಲ ಆರೋಪಿ ಕೆ.ಮಾಡಾಳ್ ವಿರೂಪಾಕ್ಷಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ಸಂಬಂಧ ಕಾಯ್ದಿರಿಸಿದ್ದ ಕ್ರಿಮಿನಲ್ ಅರ್ಜಿಯ ಮೇಲಿನ ಆದೇಶವನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ಮೇಲ್ಮನವಿಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಕೆ.ನಟರಾಜನ್ ಸೋಮವಾರ ಮಧ್ಯಾಹ್ನ ಪ್ರಕಟಿಸಿದರು.

‘ಮಧ್ಯಂತರ ಆದೇಶ ನೀಡುವ ಸಂದರ್ಭದಲ್ಲಿ ಪ್ರಾಸಿಕ್ಯೂಷನ್‌ ಬಳಿ ಆರೋಪಿ ವಿರೂಪಾಕ್ಷಪ್ಪ ವಿರುದ್ಧ ಯಾವುದೇ ಸಾಕ್ಷ್ಯ ಇರಲಿಲ್ಲ. ಆದರೆ, ಸೂಕ್ತ ಸಾಕ್ಷ್ಯಗಳನ್ನು ಸಂಗ್ರಹಿಸಬೇಕಾದರೆ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುವ ಅವಶ್ಯಕತೆ ಇದೆ ಎಂಬುದನ್ನು ಪ್ರಾಸಿಕ್ಯೂಷನ್‌ ವಿಚಾರಣೆ ವೇಳೆ ನ್ಯಾಯಪೀಠಕ್ಕೆ ಮನದಟ್ಟು ಮಾಡಿಕೊಟ್ಟಿದೆ. ವಿರೂಪಾಕ್ಷಪ್ಪ ಅವರು ಲಂಚಕ್ಕೆ ಬೇಡಿಕೆ ಇರಿಸಿದ್ದರು ಮತ್ತು ಈ ಲಂಚದ ಹಣ ಪಡೆಯುವಲ್ಲಿ ಅವರ ಪುತ್ರ ಪ್ರಶಾಂತ್ ಪಾತ್ರ ವಹಿಸಿದ್ದಾರೆ ಎಂಬುದನ್ನು ಮನವರಿಕೆ ಮಾಡಿದೆ. ಹಾಗಾಗಿ, ಆರೋಪಿಯನ್ನು ಬಂಧಿಸಿಯೇ ವಿಚಾರಣೆ ನಡೆಸುವ ಅಗತ್ಯವಿದೆ’ ಎಂದು ನ್ಯಾಯಪೀಠ ತನ್ನ 24 ಪುಟಗಳ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ಲೋಕಾಯುಕ್ತ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಮತ್ತು ಬಿ.ಬಿ.ಪಾಟೀಲ್‌ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.