ADVERTISEMENT

ಹೆದರಿದರೆ ಜನ ಸ್ಮರಿಸುವುದಿಲ್ಲ: ನ್ಯಾ.ಮುದಗಲ್‌

ಹೈಕೋರ್ಟ್‌ ಕೊಲಿಜಿಯಂಗೆ ಕನ್ನಡಿಗರ ಕೊರತೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 0:30 IST
Last Updated 20 ಡಿಸೆಂಬರ್ 2025, 0:30 IST
ನ್ಯಾ.ಕೆ.ಎಸ್.ಮುದಗಲ್‌
ನ್ಯಾ.ಕೆ.ಎಸ್.ಮುದಗಲ್‌   

ಬೆಂಗಳೂರು: ‘ಪರಿಣಾಮಗಳಿಗೆ ಹೆದರಿ ಸರಿಯಾದ ತೀರ್ಮಾನ ಕೈಗೊಳ್ಳುವ ನಿಲುವಿನಿಂದ ಯಾವತ್ತೂ ಹಿಂದೆ ಸರಿಯಬಾರದು. ಜನರು ಸೂಕ್ತ ಸಮಯದಲ್ಲಿ ಖಂಡಿತಾ ನಮ್ಮ ತೀರ್ಮಾನಗಳನ್ನು ಸ್ಮರಿಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಕರ್ನಾಟಕ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಕೆ.ಎಸ್‌.ಮುದಗಲ್ ಅಭಿಪ್ರಾಯಪಟ್ಟರು.

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳಲ್ಲಿ ಮೂರನೇ ಸ್ಥಾನದಲ್ಲಿರುವ ಅವರು ಇದೇ 22ಕ್ಕೆ ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಮತ್ತು ‘ಬೆಂಗಳೂರು ವಕೀಲರ ಸಂಘ’ದ ವತಿಯಿಂದ ಹೈಕೋರ್ಟ್‌ನಲ್ಲಿ ಶುಕ್ರವಾರ ಅವರಿಗೆ ಪ್ರತ್ಯೇಕವಾಗಿ ಸಾಂಪ್ರದಾಯಿಕ ಬೀಳ್ಕೊಡುಗೆ ನೀಡಲಾಯಿತು.

ಈ ವೇಳೆ ಮಾತನಾಡಿದ ಅವರು, ‘ಆಡಳಿತಾತ್ಮಕ ಕೆಲಸ ನಿಭಾಯಿಸುವಾಗ ಅನೇಕ ಸಂದರ್ಭಗಳಲ್ಲಿ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಆಗುವುದಿಲ್ಲ. ಆಗೆಲ್ಲಾ ಅಗ್ನಿಪರೀಕ್ಷೆ ಎದುರಿಸಬೇಕಾಗುತ್ತದೆ. ಅನುಕೂಲಕರ ವಾತಾವರಣದಲ್ಲಿ ನಾವು ಏನನ್ನೂ ಸಾಧಿಸುವುದಿಲ್ಲ. ಬೆಂಕಿಯಲ್ಲಿ ಬೆಂದು ಸುತ್ತಿಗೆ ಏಟು ತಿನ್ನುವ ಕತ್ತರಿಯೇ ಯಾವತ್ತೂ ಹರಿತವಾಗುತ್ತದೆ’ ಎಂದು ಅವರು ವೃತ್ತಿಯ ಒತ್ತಡವನ್ನು ಬಣ್ಣಿಸಿದರು.

ADVERTISEMENT

‘1976ರಲ್ಲಿನ ಎಡಿಎಂ ಜಬಲ್‌ಪುರ್ v/s ಶಿವಕಾಂತ್‌ ಶುಕ್ಲಾ ಪ್ರಕರಣದಲ್ಲಿ ನ್ಯಾಯಮೂರ್ತಿ ಹಂಸರಾಜ್‌ ಖನ್ನಾ ಅವರು ನ್ಯಾಯದ ಪರ ನಿಂತು ಬರೆದ ಅಲ್ಪಮತದ ಆದರೆ ಭಿನ್ನ (ತುರ್ತು ಪರಿಸ್ಥಿತಿ ಸಂದರ್ಭದಲ್ಲಿನ ವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ತೀರ್ಪು) ತೀರ್ಪು ಚರಿತ್ರಾರ್ಹವಾದದ್ದು. ಅವರು ತಮ್ಮ ವೃತ್ತಿಯನ್ನು ಒತ್ತೆಯಾಗಿಟ್ಟು ಆ ತೀರ್ಪನ್ನು ಬರೆದಿದ್ದರು. 41 ವರ್ಷಗಳ ಬಳಿಕ 2017ರಲ್ಲಿ ಕೆ.ಎಸ್‌.ಪುಟ್ಟಸ್ವಾಮಿ ಮತ್ತು ಇತರರು v/s ಭಾರತ ಸರ್ಕಾರದ ಪ್ರಕರಣದಲ್ಲಿ ಆ ಐತಿಹಾಸಿಕ ಭಿನ್ನ ತೀರ್ಪನ್ನು ಎತ್ತಿ ಹಿಡಿಯಲಾಯಿತು’ ಎಂದು ಸ್ಮರಿಸಿದರು.

ಪರಿಚಯ: ಕೊಟ್ರವ್ವ ಸೋಮಪ್ಪ ಮುದಗಲ್‌ ಅವರು 1963ರ ಡಿಸೆಂಬರ್‌ 22ರಂದು ಜನಿಸಿದ್ದು, ಬಿ.ಕಾಂ, ಧಾರವಾಡ ವಿಶ್ವವಿದ್ಯಾಲಯದ ಎಲ್‌ಎಲ್‌ಬಿ ಪದವೀಧರರು. 1988ರ ಜುಲೈ 6ರಂದು ವೃತ್ತಿ ಪ್ರವೇಶಿಸಿದ ಅವರು ಧಾರವಾಡ ಮತ್ತು ಬೆಂಗಳೂರಿನಲ್ಲಿ ವಕೀಲಿಕೆ ನಡೆಸಿದರು. 1998ರ ಜೂನ್‌ 17ರಂದು ಜಿಲ್ಲಾ ನ್ಯಾಯಾಧೀರಾಗಿ ನೇಮಕಗೊಂಡ ಅವರು ವಿವಿಧ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 2016ರ ನವೆಂಬರ್ 14ರಂದು ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದರು.

ಹೈಕೋರ್ಟ್‌ನ ನ್ಯಾಯಾಂಗ ಮತ್ತು ವಿಚಕ್ಷಣಾ ವಿಭಾಗ, ರಾಜ್ಯ ಸರ್ಕಾರದ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಸರ್ಕಾರಿ ಮೇಲ್ಮನವಿ ನ್ಯಾಯಮಂಡಳಿಯ ಮೊದಲ ಮಹಿಳಾ ಮೇಲ್ವಿಚಾರಣಾ ಅಧಿಕಾರಿ ಎಂಬ ಖ್ಯಾತಿಗೆ ಭಾಜನರಾಗಿರುವ ನ್ಯಾಯಮೂರ್ತಿ ಮುದಗಲ್‌ ಅವರು ಸದ್ಯ ಹೈಕೋರ್ಟ್‌ನ ಮೂವರು ಸದಸ್ಯರ ಕೊಲಿಜಿಯಂನಲ್ಲಿರುವ ಏಕೈಕ ಕನ್ನಡತಿ ಎನಿಸಿದ್ದಾರೆ. ಇವರ ನಿವೃತ್ತಿ ನಂತರ ಕರ್ನಾಟಕ ಹೈಕೋರ್ಟ್‌ನ ಕೊಲಿಜಿಯಂ ಬಳಗದಲ್ಲಿ ಕನ್ನಡಿಗ ನ್ಯಾಯಮೂರ್ತಿಗಳ ಕೊರತೆ ತಲೆದೋರಲಿದೆ.

ನ್ಯಾಯಮೂರ್ತಿ ಮುದಗಲ್‌ ಅವರ ನಿವೃತ್ತಿ ಬಳಿಕ ಕೊಲಿಜಿಯಂ ಪುನರಚನೆಯಾಗಲಿದ್ದು, ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು, ಎರಡನೇ ಸ್ಥಾನದಲ್ಲಿರುವ ನ್ಯಾಯಮೂರ್ತಿ ಅನು ಶಿವರಾಮನ್‌ ಮತ್ತು ಜಯಂತ್‌ ಬ್ಯಾನರ್ಜಿ ಕೊಲಿಜಿಯಂನಲ್ಲಿ ಸ್ಥಾನ ಪಡೆಯಲಿದ್ದಾರೆ. ಈ ಮೂವರೂ ನ್ಯಾಯಮೂರ್ತಿಗಳು ಕ್ರಮವಾಗಿ ದೆಹಲಿ, ಕೇರಳ ಮತ್ತು ಉತ್ತರ ಪ್ರದೇಶವರಾಗಿದ್ದಾರೆ.
 

ಹೈಕೋರ್ಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.