ADVERTISEMENT

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳ ನಿರ್ದೇಶಕ ರಂಜಿತ್‌ ವಿರುದ್ಧದ ಪ್ರಕರಣಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2024, 23:30 IST
Last Updated 11 ಡಿಸೆಂಬರ್ 2024, 23:30 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಯುವಕನೊಬ್ಬನ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಲಯಾಳ ಚಿತ್ರರಂಗದ ಖ್ಯಾತ ನಿರ್ದೇಶಕ ರಂಜಿತ್‌ ಬಾಲಕೃಷ್ಣನ್‌ ವಿರುದ್ಧದ ಕ್ರಿಮಿನಲ್‌ ಪ್ರಕರಣಕ್ಕೆ ಹೈಕೋರ್ಟ್‌ ತಡೆ ನೀಡಿದೆ.

ಪ್ರಕರಣ ರದ್ದುಗೊಳಿಸುವಂತೆ ಕೋರಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರೂ ಆದ ಕೇರಳದ ಕೊಯಿಕ್ಕೋಡ್‌ ಜಿಲ್ಲೆ ಕರುಮಾಲ ಗ್ರಾಮದ ಖ್ಯಾತ ಸಿನಿಮಾ ನಿರ್ದೇಶಕ, ನಿರ್ಮಾಪಕ ಮತ್ತು ನಟ ರಂಜಿತ್ ಬಾಲಕೃಷ್ಣನ್‌ (60) ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಂಜಿತ್‌ ಬಾಲಕೃಷ್ಣನ್‌ ಪರ ಹಾಜರಿದ್ದ ಪದಾಂಕಿತ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ, ‘ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಭಾಗದಲ್ಲಿರುವ ಪ್ರತಿಷ್ಠಿತ ಪಂಚತಾರಾ, ತಾಜ್‌ ಹೋಟೆಲ್‌ನಲ್ಲಿ 2012ರಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ 31 ವರ್ಷದ ಪುರುಷ ಎರಡು ತಿಂಗಳ ಹಿಂದೆಯಷ್ಟೇ ರಂಜಿತ್‌ ವಿರುದ್ಧ ದೂರು ದಾಖಲಿಸಿದ್ದಾರೆ. ವಿಮಾನ ನಿಲ್ದಾಣದ ಮುಂದಿರುವ ತಾಜ್‌ ಹೋಟೆಲ್‌ ಕಾರ್ಯಾರಂಭ ಮಾಡಿರುವುದೇ 2016ರಲ್ಲಿ’ ಎಂದರು.

ADVERTISEMENT

‘ಮಲಯಾಳ ಚಿತ್ರರಂಗದ ನಟ ಮಮ್ಮೂಟಿ ಅವರು ರಂಜಿತ್‌ ಬಾಲಕೃಷ್ಣನ್‌ ಅವರಿಗೆ ನನ್ನನ್ನು ಪರಿಚಯ ಮಾಡಿಕೊಟ್ಟಿದ್ದರು ಎಂದು ದೂರುದಾರರು ಹೇಳಿದ್ದಾರೆ. ಸಿನಿಮಾದಲ್ಲಿ ನಟಿಸುವ ಹಂಬಲ ಹೊಂದಿದ್ದ ದೂರುದಾರನಿಗೆ ರಂಜಿತ್‌ ಅವಕಾಶ ನೀಡುವುದಾಗಿ ಹೇಳಿದ್ದರು. ಆದರೆ, ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ಈ ಸುಳ್ಳು ದೂರು ನೀಡಿರಬೇಕು. ಅದೂ 12 ವರ್ಷಗಳ ಬಳಿಕ ಇಂತಹ ಆಪಾದನೆ ಮಾಡಲಾಗಿದೆ. ಆದ್ದರಿಂದ, ಪ್ರಕರಣಕ್ಕೆ ತಡೆ ನೀಡಬೇಕು’ ಎಂದು ಪ್ರಭುಲಿಂಗ ನಾವದಗಿ ಕೋರಿದರು.

ವಾದ ಆಲಿಸಿದ ನ್ಯಾಯಪೀಠ, ‘ದೂರುದಾರರ ಮಾತುಮಾತಿನಲ್ಲೂ ಸುಳ್ಳಿದೆ’ ಎಂಬ ಲ್ಯಾಟಿನ್‌ ನ್ಯಾಯತತ್ವವನ್ನು ಉಲ್ಲೇಖಿಸುವ ಮೂಲಕ ಪ್ರಕರಣದ ಮುಂದಿನ ನ್ಯಾಯಿಕ ಪ್ರಕ್ರಿಯೆಗಳಿಗೆ ತಡೆ ನೀಡಿತು. ಅಂತೆಯೇ ದೂರುದಾರ ಪುರುಷನಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು 2025ರ ಜನವರಿ 17ಕ್ಕೆ ನಿಗದಿಗೊಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.