ADVERTISEMENT

ಸದಸ್ಯರ ದುರ್ನಡತೆ | ಆಡಳಿತಾತ್ಮಕ ಹಿತದೃಷ್ಟಿಯಿಂದ ವಜಾಗೊಳಿಸಬಹುದು: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 16:12 IST
Last Updated 20 ಫೆಬ್ರುವರಿ 2026, 16:12 IST
<div class="paragraphs"><p>ಕರ್ನಾಟಕ ಹೈಕೋರ್ಟ್</p></div>

ಕರ್ನಾಟಕ ಹೈಕೋರ್ಟ್

   

ಬೆಂಗಳೂರು: ‘ದುರ್ನಡತೆ ಆರೋಪ ಸಾಬೀತಾಗಿದ್ದರೆ ಅಂತಹ ಸಂದರ್ಭಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ವಜಾಗೊಳಿಸಬಹುದು’ ಎಂದು ಹೈಕೋರ್ಟ್ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿದೆ.

ಈ ಮೂಲಕ, ಗದಗ-ಬೆಟಗೇರಿ ನಗರಸಭೆ ಸದಸ್ಯರಾದ ಉಷಾ ಮಹೇಶ್‌ ದಾಸರ, ಅನಿಲ ಎಂ.ಅಬ್ಬಿಗೇರಿ ಮತ್ತು ಗೂಳಪ್ಪ ಎಸ್.ಮುಶಿಗೇರಿ ಅವರನ್ನು ಸದಸ್ಯತ್ವದಿಂದ ವಜಾಗೊಳಿಸಿದ್ದ ಸರ್ಕಾರದ ಕ್ರಮವನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಎತ್ತಿಹಿಡಿದಿದೆ.

ADVERTISEMENT

ಸರ್ಕಾರದ ಪರ ಅಡ್ವೊಕೇಟ್‌ ಜನರಲ್ ಕೆ.ಶಶಿಕಿರಣ ಶೆಟ್ಟಿ ಅವರ ವಾದವನ್ನು ಪುರಸ್ಕರಿಸಿರುವ ನ್ಯಾಯಪೀಠ, ‘ನಾವು ಅಮಾಯಕರು ಎಂಬ ಆರೋಪಿಗಳ ಹೇಳಿಕೆಯನ್ನು ಕ್ರಿಮಿನಲ್ ಪ್ರಕರಗಣಗಳಲ್ಲಿ ಪರಿಗಣಿಸಬಹುದು. ಆದರೆ, ಆಡಳಿತಾತ್ಮಕ ಕ್ರಮ ಕೈಗೊಳ್ಳುವಾಗ ಈ ಹೇಳಿಕೆ ಅಡ್ಡಿಯಾಗದು. ಹೀಗಾಗಿ ಸರ್ಕಾರ, ಕರ್ನಾಟಕ ನಗರಪಾಲಿಕೆಗಳ ಕಾಯ್ದೆ–1964ರ ಕಲಂ 41ರ ಅನ್ವಯ ಸದಸ್ಯರನ್ನು ವಜಾಗೊಳಿಸಿರುವ ಕ್ರಮ ಸರಿಯಾಗಿಯೇ ಇದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. 

ಸಾರ್ವಜನಿಕ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದ ಕೆಲವು ವ್ಯಕ್ತಿಗಳ ಜತೆ ಶಾಮೀಲಾಗಿ ನಗರಸಭೆ ಪೌರಾಯುಕ್ತರ ಸಹಿಯನ್ನು ನಕಲು ಮಾಡಿ, ಸುಳ್ಳು ನಿರ್ಣಯ ಸೃಷ್ಟಿಸಿ ಒತ್ತುವರಿದಾರರಿಗೆ ಭೂ ಸ್ವಾಧೀನ ಪತ್ರ ನೀಡಿದ್ದ ಆರೋಪದ ಮೇರೆಗೆ ಅರ್ಜಿದಾರರನ್ನು ಸರ್ಕಾರ ಸದಸ್ಯತ್ವದಿಂದ ವಜಾಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಮೂವರೂ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.