ADVERTISEMENT

ಹಿಜಾಬ್ ಪರ ವಾದಿಗಳಿಗೆ ಸರ್ಕಾರ ಮಣಿಯಲ್ಲ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 7:14 IST
Last Updated 16 ಮಾರ್ಚ್ 2022, 7:14 IST
ಅಶ್ವತ್ಥನಾರಾಯಣ
ಅಶ್ವತ್ಥನಾರಾಯಣ   

ರಾಮನಗರ: `ಹಿಜಾಬ್ ವಿಚಾರದಲ್ಲಿ ನ್ಯಾಯಾಲಯವು ತಮಗೆ ಬೇಕಾದಂತೆ ತೀರ್ಪು ಕೊಡಬೇಕಿತ್ತು ಎನ್ನುವ ಮೊಂಡು ವಾದ ಸರಿಯಲ್ಲ. ಇಂತಹ ಬೆದರಿಕೆಗಳಿಗೆಲ್ಲ ಸರ್ಕಾರ ಮಣಿಯುವುದಿಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಮಾಗಡಿ ತಾಲ್ಲೂಕಿನ ಸಂಕೀಘಟ್ಟದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಅತ್ಯಂತ ಪ್ರಜಾಸತ್ತಾತ್ಮಕ ದೇಶಗಳಲ್ಲಿ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಉಡುಪುಗಳನ್ನು ನಿಷೇಧಿಸಲಾಗಿದೆ. ಇಷ್ಟಕ್ಕೂ ಶಾಲೆಗಳಲ್ಲಿ ಸಮವಸ್ತ್ರ ನಿಯಮವನ್ನು ತಂದಿದ್ದು ಬಿಜೆಪಿಯಲ್ಲ; ಹಿಜಾಬ್ ಪರ ಮಾತನಾಡುತ್ತಿರುವವರು ನಂಬಿಕೊಂಡಿರುವ ಪಕ್ಷಗಳೇ ಇದನ್ನೆಲ್ಲ ತಂದಿದ್ದು’ ಎಂದರು.

`ನಮ್ಮಲ್ಲಿ ಯಾವುದೇ ವಿಚಾರಗಳಿಗೆ ಸಂಬಂಧಿಸಿದಂತೆ ಎಲ್ಲರೂ ಅವರವರ ಅಭಿಪ್ರಾಯ ಹೇಳಬಹುದು. ಬೇಕಿದ್ದವರು ಸುಪ್ರೀಂಕೋರ್ಟಿಗೆ ಹೋಗಲಿ. ಆದರೆ, ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

`ಸಮವಸ್ತ್ರದ ವಿಚಾರದಲ್ಲಿ ಸರ್ಕಾರವು ಹಿಜಾಬ್ ಮತ್ತು ಕೇಸರಿ ಶಾಲು ಎರಡನ್ನೂ ದೂರವಿಟ್ಟಿದೆ. ನ್ಯಾಯಾಲಯ ಕೂಡ ವಿಚಾರವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ, ವಿವೇಚನೆಯ ತೀರ್ಪು ಕೊಟ್ಟಿದೆ. ಹಿಜಾಬ್ ಕಡ್ಡಾಯವೆಂದು ಕುರಾನಿನಲ್ಲಿ ಕೂಡ ಎಲ್ಲೂ ಹೇಳಿಲ್ಲ. ಇದನ್ನು ಅರ್ಥ ಮಾಡಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯದತ್ತ ಗಮನ ಕೊಡಬೇಕು. ಜತೆಗೆ ಎಲ್ಲರೂ ಸೌಹಾರ್ದದಲ್ಲಿ ನಂಬಿಕೆ ಇಡಬೇಕು’ ಎಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.