ADVERTISEMENT

ಪಿಯು, ಪದವಿ ತರಗತಿ ನಾಳೆಯಿಂದ ಆರಂಭ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 19:33 IST
Last Updated 14 ಫೆಬ್ರುವರಿ 2022, 19:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಇದೇ ಬುಧವಾರದಿಂದ (ಫೆ.16) ಪಿಯುಸಿಯಿಂದ ಸ್ನಾತಕೋತ್ತರ ಪದವಿವರೆಗಿನ ತರಗತಿಗಳನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಹಿಜಾಬ್‌ ಮತ್ತು ಕೇಸರಿ ಶಾಲು ವಿವಾದದ ಕಾರಣಕ್ಕೆ ಈ ಹಿಂದೆ ರಜೆ ಘೋಷಿಸಲಾಗಿತ್ತು. 9–10ನೇ ತರಗತಿಗಳಿಗೆ ಸೋಮವಾರದಿಂದ ತರಗತಿಗಳು ಶುರುವಾಗಿದ್ದವು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಾಥಮಿಕ ಮತ್ತು ಪ‍್ರೌಢಶ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌, ಗೃಹ ಸಚಿವ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮತ್ತು ಹಿರಿಯ ಅಧಿಕಾರಿಗಳ ಜತೆ ಸೋಮವಾರ ರಾತ್ರಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಬಿ.ಸಿ.ನಾಗೇಶ್‌, ಹೈಕೋರ್ಟ್‌ ಮಧ್ಯಂತರ ಆದೇಶವನ್ನು ಪಾಲಿಸಿ, ಬುಧವಾರದಿಂದ ಎಲ್ಲ ತರಗತಿಗಳನ್ನು ಪುನರಾರಂಭಿಸಲು ತೀರ್ಮಾನಿಸಲಾಗಿದೆ ಎಂದರು.

ADVERTISEMENT

ಇವತ್ತು ಶಾಲೆ ಆರಂಭಿಸಿದ ನಂತರ ನಡೆದಿರುವ ಘಟನೆಗಳ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಶಾಲೆ ಮತ್ತು ಕಾಲೇಜುಗಳೂ ಸೇರಿದಂತೆ ಎಲ್ಲರೂ ಹೈಕೋರ್ಟ್‌ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಮಾರ್ಗಸೂಚಿ ಚಿಂತನೆ:

ಹಿಜಾಬ್‌ ಮತ್ತು ಕೇಸರಿ ಶಾಲು ವಿವಾದದ ಕಾರಣ ಶಾಲಾ–ಕಾಲೇಜುಗಳಲ್ಲಿ ಸಮವಸ್ತ್ರ ಪಾಲನೆಯಲ್ಲಿರುವನೂನ್ಯತೆಗಳನ್ನು ಸರಿಪಡಿಸುವ ಮತ್ತು ಮಾರ್ಗಸೂಚಿ ರೂಪಿಸುವ ಬಗ್ಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

ಇವತ್ತು ತರಗತಿ ಆರಂಭವಾಗಿದ್ದು, ಕೆಲವು ಜಿಲ್ಲೆಗಳಲ್ಲಿ ಬೇರೆ ಬೇರೆ ರೀತಿಯ ಪ್ರಕರಣಗಳು ವರದಿಯಾಗಿವೆ. ಹೈಕೋರ್ಟ್‌ ಆದೇಶವನ್ನು ಪಾಲನೆ ಮಾಡುವ ಹೊಣೆಗಾರಿಕೆ ಶಾಲಾ ಆಡಳಿತ ಮಂಡಳಿಗಳು, ಪಾಂಶುಪಾಲರು ಹಾಗೂ ಪೋಷಕರ ಮೇಲಿದೆ. ಇದರಿಂದ ಶಾಂತಿಯುತ ವಾತಾವರಣದಲ್ಲಿ ಅಂತಿಮ ತೀರ್ಪು ನೀಡಲು ಸಾಧ್ಯವಾಗಲಿದೆ. ಅಲ್ಲಿಯವರೆಗೆ ತಾಳ್ಮೆಯಿಂದ ಕಾಯಬೇಕು ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.