ಮಂಡ್ಯ: ‘ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ವಿವಾದ ಸೃಷ್ಟಿಯಾಗಲು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಮಂಡ್ಯ ಶಾಸಕ ಗಣಿಗ ರವಿಕುಮಾರ್ ಅವರೇ ಕಾರಣ. ವೈಯಕ್ತಿಕ ಪ್ರತಿಷ್ಠೆಗಾಗಿ ಹನುಮ ಧ್ವಜ ಇಳಿಸಿ ವಿವಾದ ಸೃಷ್ಟಿಸಿದ್ದಾರೆ’ ಎಂದು ಜೆಡಿಎಸ್ ನಾಯಕ ಸಿ.ಎಸ್.ಪುಟ್ಟರಾಜು ಗುರುವಾರ ಆರೋಪಿಸಿದರು.
‘ಜ.22ರಂದು ಅಯೋಧ್ಯೆಗೆ ತೆರಳಿದ್ದರಿಂದ, ಮಾರಗೌಡನಹಳ್ಳಿ ದೇವಾಲಯ ಉದ್ಘಾಟನೆಗೆ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಬರಲಿಲ್ಲ. ನಾವು ದೇವಾಲಯ ಉದ್ಘಾಟನೆಗೆ ತೆರಳುವಾಗ ಕೆರಗೋಡು ಗ್ರಾಮಸ್ಥರು ಧ್ವಜಸ್ತಂಭಕ್ಕೆ ಪೂಜೆ ಸಲ್ಲಿಸಲು ಆಹ್ವಾನಿಸಿದ್ದರು. ಅದನ್ನೇ ತಪ್ಪಾಗಿ ಅರ್ಥೈಸಿಕೊಂಡ ಶಾಸಕ ರವಿಕುಮಾರ್, ತಮ್ಮನ್ನು ಆಹ್ವಾನಿಸಿಲ್ಲವೆಂಬ ಸಣ್ಣತನಕ್ಕೆ ಧ್ವಜವನ್ನೇ ಕೆಳಗಿಳಿಸಿ ಗೊಂದಲ ಸೃಷ್ಟಿಸಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ಕೆರಗೋಡು ಗ್ರಾಮ ಪಂಚಾಯಿತಿಯ ನಿರ್ಣಯದಂತೆ ಹನುಮ ಧ್ವಜ ಹಾರಿಸಲಾಗಿತ್ತು. ಅಲ್ಲಿ ಮತ್ತೆ ಹನುಮ ಧ್ವಜ ಹಾರಬೇಕು, ಅದಕ್ಕಾಗಿ ಹೋರಾಡುತ್ತೇವೆ. ಸಚಿವ ಚಲುವರಾಯಸ್ವಾಮಿ ಘಟನೆಯನ್ನು ದುರುಪಯೋಗ ಮಾಡಿಕೊಂಡು ದ್ವೇಷ ಸಾಧಿಸುತ್ತಿದ್ದಾರೆ. ಜಿಲ್ಲಾಡಳಿತ ಕೂಡ ಘಟನೆಯನ್ನು ಸರಿಯಾಗಿ ನಿರ್ವಹಿಸದೆ ತಪ್ಪೆಸಗಿದೆ’ ಎಂದರು.
‘ಕುಮಾರಸ್ವಾಮಿ ಬಿಜೆಪಿಗೆ ಬೆಂಬಲ ನೀಡಿದ್ದರಿಂದ ಎಚ್.ಡಿ.ದೇವೇಗೌಡರಿಗೆ ಆರೋಗ್ಯ ಕೆಟ್ಟಿದೆ ಎಂದು ಚಲುವರಾಯಸ್ವಾಮಿ ಹೇಳಿರುವುದು ಖಂಡನೀಯ. ನೀವು ಉಂಡಮನೆಗೆ ದ್ರೋಹ ಬಗೆದು, ಅನ್ಯಾಯ ಮಾಡಿ ಅವರಿಗೆ ನೋವು ಕೊಟ್ಟಿದ್ದೀರಿ. ನಾವು ಬಿಜೆಪಿಗೆ ಹೋಗಿ ಕೇಸರಿ ಶಾಲು ಹಾಕಿಕೊಂಡಿಲ್ಲ. ಕೇಸರಿ ಬಿಜೆಪಿಯ ಸಂಕೇತವಷ್ಟೇ ಅಲ್ಲ, ರಾಮ, ಹನುಮಂತನ ಭಕ್ತಿಯ ಪ್ರತೀಕವೂ ಹೌದು’ ಎಂದರು.
‘ಧರಂ ಸಿಂಗ್ ಸರ್ಕಾರದಲ್ಲಿ ಚಲುವರಾಯಸ್ವಾಮಿ, ಜಮೀರ್ ಅಹ್ಮದ್ ಖಾನ್ ನೀವಿಬ್ಬರೂ ಸಚಿವರಾಗಿದ್ದಿರಿ. ಸಿದ್ದರಾಮಯ್ಯ ಅವರನ್ನು ಜೆಡಿಎಸ್‌ನಿಂದ ಹೊರಹಾಕಿ ಬಿಜೆಪಿಯೊಂದಿಗೆ ಸೇರಿ ಸರ್ಕಾರ ಮಾಡಲು ನೀವೇ ಪ್ರಮುಖ ಕಾರಣ. ಆಗಿನಿಂದಲೇ ಎಚ್.ಡಿ.ದೇವೇಗೌಡರ ಆರೋಗ್ಯ ಕೆಟ್ಟಿತು. ಕುಮಾರಸ್ವಾಮಿ ಅವರಿಂದ ದೇವೇಗೌಡರ ಆರೋಗ್ಯ ಕೆಟ್ಟಿಲ್ಲ’ ಎಂದರು.
ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ಮುಖಂಡರಾದ ಸುರೇಶ್‌ಗೌಡ, ಕೆ.ಅನ್ನದಾನಿ ಅವರೂ ಕಾಂಗ್ರೆಸ್ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮನೆ ಮೇಲೆ ಹನುಮ ಧ್ವಜ: ಬಿಜೆಪಿ ಮುಖಂಡರು ಶುಕ್ರವಾರದಿಂದ (ಫೆ.2) ಕೆರಗೋಡು ಗ್ರಾಮದ ಮನೆಗಳ ಮೇಲೆ ಹನುಮ ಧ್ವಜ ಹಾರಿಸುವ ಆಂದೋಲನಕ್ಕೆ ಕರೆ ನೀಡಿದ ಬೆನ್ನಲ್ಲೇ, ಕೆಲ ಗ್ರಾಮಸ್ಥರು ಗುರುವಾರವೇ ಸ್ವಯಂ ಪ್ರೇರಿತವಾಗಿ ಮನೆಗಳ ಮೇಲೆ ಧ್ವಜ ಹಾರಿಸಿ, ಜೈಶ್ರೀರಾಂ ಘೋಷಣೆ ಕೂಗಿದರು. ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು ಬಿಗುವಿನ ವಾತಾವರಣ ಮುಂದುವರಿದಿದೆ.
‘ಜಿಲ್ಲೆಯಾದ್ಯಂತ ಆಂದೋಲನ ವಿಸ್ತರಿಸಲಾಗುವುದು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಇಂದ್ರೇಶ್ ಕುಮಾರ್ ಹೇಳಿದರು. ‘ಪಾಂಡವಪುರದಲ್ಲೂ ಫೆ.3ರಿಂದ ಪ್ರತಿ ಮನೆ ಮೇಲೆ ಹನುಮ ಧ್ವಜ ಹಾರಿಸಲಾಗುವುದು’ ಎಂದು ಹಿಂದೂ ಜಾಗರಣಾ ವೇದಿಕೆಯ ಮಾರ್ಕಂಡೇಯ ತಿಳಿಸಿದ್ದಾರೆ.
ಮಂಡ್ಯಕ್ಕೆ ಕಲ್ಲಡ್ಕ, ಮುತಾಲಿಕ್ ಭೇಟಿ ನಿಷೇಧಿಸಿ; ಒತ್ತಾಯ
ಬಿಜೆಪಿ ಮುಖಂಡರು ಕೋಮುಗಲಭೆ ಎಬ್ಬಿಸುವ ಹುನ್ನಾರ ನಡೆಸಿದ್ದಾರೆ. ಹೀಗಾಗಿ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಶ್ರೀರಾಮಸೇನೆ ನಾಯಕ ಪ್ರಮೋದ್ ಮುತಾಲಿಕ್ ಅವರು ಜಿಲ್ಲೆ ಪ್ರವೇಶಿಸುವುದನ್ನು ನಿಷೇಧಿಸಲು ಕೋರಿ ಜಿಲ್ಲಾಧಿಕಾರಿಗೆ ಹಾಗೂ ನ್ಯಾಯಾಲಯಕ್ಕೆ ಮನವಿ ಸಲ್ಲಿಸಬೇಕು’ ಎಂದು, ಗುರುವಾರ ನಗರದ ಪ್ರವಾಸಿ ಮಂದಿರದ ಆವಣದಲ್ಲಿ ನಡೆದ ಪ್ರಗತಿಪರ ಸಂಘಟನೆಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು
‘ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಧ್ವಜ ಆಂದೋಲನ ಸೇರಿ ಸೂಕ್ಷ್ಮ ಧಾರ್ಮಿಕ ವಿಚಾರ
ಗಳನ್ನಿಟ್ಟಕೊಂಡು ವಿವಿಧ ಕಾರ್ಯಕ್ರಮ ನಡೆಸಲು ಬಿಜೆಪಿ ಮುಖಂಡರು ಸಜ್ಜಾಗುತ್ತಿದ್ದಾರೆ. ಪ್ರಭಾಕರ್ ಭಟ್ ಹಾಗೂ ಮುತಾಲಿಕ್ ಅವರನ್ನು ಕರೆಸುವ ಸಾಧ್ಯತೆ ಇದ್ದು, ಅದನ್ನು ವಿಫಲಗೊಳಿಸಬೇಕಾದ ಅನಿವಾರ್ಯ ಇದೆ’ ಎಂದು ಮುಖಂಡರು ಅಭಿಪ್ರಾಯಪಟ್ಟರು.
‘ಬಿಜೆಪಿ– ಜೆಡಿಎಸ್ ಪಾದಯಾತ್ರೆ ವೇಳೆ ದಾಂದಲೆ ನಡೆಸಿದ ಕಿಡಿಗೇಡಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಲಾಗುವುದು. ಜ.7ರಂದು ನಡೆಯುವ ಮಂಡ್ಯ ಬಂದ್‌ಗೆ ಬೆಂಬಲ ನೀಡುವುದಾಗಿ ಹಲವು ಸಂಘಟನೆಗಳ ಸದಸ್ಯರು ತಿಳಿಸಿದ್ದಾರೆ’ ಎಂದು ಮುಖಂಡರು ಹೇಳಿದರು.
ಪ್ರಗತಿಪರ ಸಂಘಟನೆಗಳ ಮುಖಂಡರಾದ ಗುರುಪ್ರಸಾದ್ ಕೆರಗೋಡು, ಹುಲ್ಕೆರೆ ಮಹದೇವು, ಟಿ.ಎಲ್.ಕೃಷ್ಣೇಗೌಡ, ಸಿ.ಕುಮಾರಿ, ಕೆ.ಬೋರಯ್ಯ, ಸುನಂದಾ ಜಯರಾಂ, ಯಶವಂತ್, ಎಂ.ಬಿ.ನಾಗಣ್ಣಗೌಡ, ಲೇಖಕರಾದ ಜಗದೀಶ್ ಕೊಪ್ಪ, ಜಿ.ಟಿ.ವೀರಪ್ಪ, ರಾಜೇಂದ್ರ ಪ್ರಸಾದ್, ನಿವೃತ್ತ ಐಪಿಎಸ್ ಅಧಿಕಾರಿ ಅರಕೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.