ADVERTISEMENT

ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆ ಮಂಡನೆ, ನಾಳೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 12:23 IST
Last Updated 21 ಡಿಸೆಂಬರ್ 2021, 12:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ಒತ್ತಾಯದ, ಆಮಿಷ ಒಡ್ಡಿ ನಡೆಯುವ ಮತಾಂತರಗಳನ್ನು ನಿಷೇಧಿಸುವ ಪ್ರಸ್ತಾವ ಇರುವ 'ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ– 2021' ಮಸೂದೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿದರು.

ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಮಸೂದೆ ಮಂಡಿಸಲಾಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಮಸೂದೆಯ ಪ್ರತಿಯನ್ನು ಹರಿದು ಪ್ರತಿಭಟಿಸಿದರು. ವಿಪಕ್ಷಗಳ ಸದಸ್ಯರು ಸಭಾ ತ್ಯಾಗ ಮಾಡಿದರು.

ನಿಯಮಗಳ ಪ್ರಕಾರ, ಮಸೂದೆ ಮಂಡನೆಗೆ ಅನುವು ಮಾಡಿಕೊಡಲಾಗಿದ್ದು, ನಾಳೆ ಮಸೂದೆ ಕುರಿತಂತೆ ಚರ್ಚೆಗೆ ಅವಕಾಶ ನೀಡಲಾಗಿದೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ADVERTISEMENT

ಮಸೂದೆ ಪ್ರಕಾರ, ಪರಿಶಿಷ್ಟ (ಎಸ್‌ಸಿ, ಎಸ್‌ಟಿ), ಅಪ್ರಾಪ್ತರು ಮಹಿಳೆಯರು, ಬುದ್ಧಿಮಾಂದ್ಯರನ್ನು ಮತಾಂತರ ಮಾಡಿದವನಿಗೆ ಕನಿಷ್ಠ 3 ವರ್ಷದಿಂದ 10 ವರ್ಷದವರೆಗೆ ಜೈಲು, ₹ 50 ಸಾವಿರ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಇತರ ವರ್ಗದವರನ್ನು ಮತಾಂತರ ಮಾಡಿದರೆ ಕನಿಷ್ಠ 3 ವರ್ಷದಿಂದ 5 ವರ್ಷದವರೆಗೆ ಜೈಲು ಮತ್ತು ₹ 25 ಸಾವಿರ ದಂಡ, ಸಾಮಾಹಿಕ ಮತಾಂತರ ಮಾಡಿದವನಿಗೆ 3 ವರ್ಷದಿಂದ 10 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ₹ 1 ಲಕ್ಷ ದಂಡ ವಿಧಿಸಲು ಕೂಡಾ ಅವಕಾಶವಿದೆ.

ಯಾವುದು ಕಾನೂನುಬಾಹಿರ: ಮಸೂದೆ ಪ್ರಕಾರ, ಯಾವುದೇ ರೀತಿಯ ವಸ್ತು, ಹಣದ ರೂಪದಲ್ಲಿ ಉಡುಗೊರೆ, ಯಾವುದೇ ಧರ್ಮದ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗ, ಉಚಿತ ಶಿಕ್ಷಣ, ವಿವಾಹವಾಗುವುದಾಗಿ ಆಮಿಷ ಅಥವಾ ಉತ್ತಮ ಜೀವನಶೈಲಿ, ಭಾವನಾತ್ಮಕವಾಗಿ ಸೆಳೆದು ಬಲವಂತವಾಗಿ ಮತಾಂತರ ಮಾಡುವುದು ಕಾನೂನುಬಾಹಿರ.

ಅಲ್ಲದೆ, ಶಿಕ್ಷಣ ಸಂಸ್ಥೆಗಳು, ಅನಾಥಾಶ್ರಮಗಳು, ವೃದ್ಧಾಶ್ರಮಗಳು, ಆಸ್ಪತ್ರೆ, ಧಾರ್ಮಿಕ ಮಿಷನರಿಗಳು, ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ಸೇರಿದಂತೆ ನಿರ್ದಿಷ್ಟ ಸಂಸ್ಥೆಗಳು ಇಬ್ಬರು ಅಥವಾ ಹೆಚ್ಚು ಮಂದಿಯ ಸಾಮೂಹಿಕ ಮತಾಂತರ ಪ್ರಕ್ರಿಯೆಯಲ್ಲಿ ಭಾಗಿಯಾದರೆ ಅಂಥ ಸಂಸ್ಥೆಗಳಿಗೆ ಸರ್ಕಾರದಿಂದ ಅನುದಾನ ನಿಲ್ಲಿಸುವ ಬಗ್ಗೆ ಪ್ರಸ್ತಾವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.