ADVERTISEMENT

79th Independence day: ಸಿದ್ದರಾಮಯ್ಯ ಭಾಷಣದಲ್ಲಿ 'ಗ್ಯಾರಂಟಿ' ಸದ್ದು

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 6:56 IST
Last Updated 15 ಆಗಸ್ಟ್ 2025, 6:56 IST
   

ಬೆಂಗಳೂರು: 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಮಾಣಿಕ್‌ ಷಾ ಪರೇಡ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಶುಕ್ರವಾರ) ಧ್ವಜಾರೋಹಣ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಬ್ರಿಟೀಷ್ ಸಾಮ್ರಾಜ್ಯಶಾಹಿ ಆಳ್ವಿಕೆಯನ್ನು ಕಿತ್ತೆಸೆದು ಧೈರ್ಯ, ತ್ಯಾಗ, ಸ್ವರಾಜ್ಯದ ಸಂಕೇತ ಮತ್ತು ಸಮಸ್ತ ಶಕ್ತಿಯಾದ ತ್ರಿವರ್ಣ ಧ್ವಜವನ್ನು ಸಂಭ್ರಮದಿಂದ ಹಾರಿಸಲಾಯಿತು. ದೇಶವನ್ನು ದಾಸ್ಯದಿಂದ ಬಿಡುಗಡೆಗೊಳಿಸಲು ನಡೆದ ದೀರ್ಘಕಾಲದ ಹೋರಾಟದಲ್ಲಿ ಭಾಗವಹಿಸಿದ್ದ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭ ಭಾಯಿ ಪಟೇಲ್, ಮೌಲಾನಾ ಅಬುಲ್ ಕಲಾಂ ಆಜಾದ್, ಜವಾಹರ್ ಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಮುಂತಾದ ಎಲ್ಲಾ ಅಮರ ವೀರರನ್ನು ಸ್ಮರಿಸೋಣ ಎಂದು ಹೇಳಿದ್ದಾರೆ.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿತ್ತು. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ದೋಂಡಿಯಾ ವಾಘ, ಹಲಗಲಿಯ ವೀರ ಬೇಡರು, ಮೈಲಾರ ಮಹಾದೇವಪ್ಪ, ಬೂದಿ ಬಸಪ್ಪ ನಾಯಕ ಮುಂತಾದವರು ಹಾಗೂ ಶ್ರೀರಂಗಪಟ್ಟಣ, ಸುರಪುರ, ಕಿತ್ತೂರು, ಈಸೂರು, ವಿಧುರಾಶ್ವತ್ಥ, ಶಿವಪುರ, ಅಂಕೋಲ ಮುಂತಾದ ಸ್ಥಳಗಳು ಬ್ರಿಟೀಷರನ್ನು ನಡುಗಿಸಿದ್ದವು. ಲಕ್ಷಾಂತರ ಜನರು ಸಕ್ರಿಯವಾಗಿ ಭಾಗವಹಿಸಿದ್ದರಲ್ಲದೆ ಸಾವಿರಾರು ಜನರು ಜೀವ ತ್ಯಾಗ ಮಾಡಿದ್ದಾರೆ. ಅವರೆಲ್ಲರನ್ನೂ ಗೌರವಿಸೋಣ ಎಂದು ತಿಳಿಸಿದ್ದಾರೆ.

ADVERTISEMENT

ಸ್ವಾತಂತ್ರ್ಯಾನಂತರ ದೇಶದ ರಕ್ಷಣೆಗಾಗಿ ನಡೆದ ಯುದ್ಧಗಳಲ್ಲಿ, ಸಂಘರ್ಷಗಳಲ್ಲಿ ಅಸಂಖ್ಯಾತ ಸೈನಿಕರು ಹುತಾತ್ಮರಾಗಿದ್ದಾರೆ. ಪ್ರಧಾನ ಮಂತ್ರಿಗಳಾಗಿದ್ದವರು ಸಹ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ದೇಶದ ಆರ್ಥಿಕತೆಯನ್ನು ಕಟ್ಟಿ ಬೆಳೆಸುವ ಕೈಂಕರ್ಯದಲ್ಲಿ ಅಸಂಖ್ಯಾತ ಕಾರ್ಮಿಕರು, ರೈತರು, ವಿದ್ವಾಂಸರು, ವಿಜ್ಞಾನಿಗಳು, ಶಿಕ್ಷಕರು, ಹೋರಾಟಗಾರರೂ ಸೇರಿದಂತೆ ಸಮಸ್ತ ಉತ್ಪಾದಕ ವರ್ಗಗಳ ಜನರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಅವರೆಲ್ಲರನ್ನು ಈ ಸಂದರ್ಭದಲ್ಲಿ ಸ್ಮರಿಸಲೇಬೇಕಾಗಿದೆ ಎಂದರು.

ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಮಡಿದವರು ಹಾಗೂ ಆ ನಂತರದಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ಎಲ್ಲರನ್ನೂ ದೇಶವು ನೆನಪಿಡುತ್ತದೆ. ನಮ್ಮ ಹೆಮ್ಮೆಯ ನವಭಾರತದ ನಿರ್ಮಾಣದಲ್ಲಿ ತ್ಯಾಗ ಬಲಿದಾನಗಳನ್ನು ಮಾಡಿದ ಮಹಾನ್ ವ್ಯಕ್ತಿಗಳ ಮಾತುಗಳನ್ನು ನೆನಪಿಸಿಕೊಳ್ಳುವುದು ಈ ಸಂದರ್ಭದಲ್ಲಿ ಔಚಿತ್ಯಪೂರ್ಣ ಎನ್ನಿಸಿದೆ. ಪಂಡಿತ್ ಜವಾಹರ್ಲಾಲ್ ನೆಹರೂ ಅವರ ಪ್ರಕಾರ “ದೇಶ ಸೇವೆ ಎಂದರೆ ಸಂಕಷ್ಟದಲ್ಲಿರುವ ಕೋಟ್ಯಾಂತರ ಜನರ ಸೇವೆ. ಬಡತನ, ಅಜ್ಞಾನ, ರೋಗ ರುಜಿನಗಳಲ್ಲಿ ನರಳುವವರ ಬದುಕನ್ನು ನೇರ್ಪು ಮಾಡುವುದು”ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣದ ಪ್ರಮುಖ ಅಂಶಗಳು ಇಂತಿವೆ..

* ನುಡಿದಂತೆ ನಡೆಯಬೇಕು ಎಂಬುದು 12ನೇ ಶತಮಾನದ ಬಸವಾದಿ ಶರಣರ ನಿಶ್ಚಲ ನಿಲುವು. ನಮ್ಮ ಸರ್ಕಾರ ಈ ಧ್ಯೇಯ ವಾಕ್ಯದಲ್ಲಿ ನಂಬಿಕೆಯಿಟ್ಟು ರಾಜ್ಯವು ತನ್ನದೇ ಆದ ಅಭಿವೃದ್ಧಿ ಮಾದರಿಗಳನ್ನು ನಿರ್ಮಿಸಿದೆ. ಇದಕ್ಕೆ ‘ಕರ್ನಾಟಕ ಅಭಿವೃದ್ಧಿ ಮಾದರಿ’ಎಂಬ ಹೆಸರಿನಲ್ಲಿ ಮನ್ನಣೆ ದೊರೆತಿರುವುದು ಹೆಮ್ಮೆಯ ಸಂಗತಿ. ವಿಶ್ವಸಂಸ್ಥೆಯ ಮುಖ್ಯಸ್ಥರಾದ ಫಿಲೆಮಾನ್ ಯಾಂಗ್ರವರು ಕರ್ನಾಟಕಕ್ಕೆ ಬಂದು ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಈ ಮೂಲಕ ನಮ್ಮ ಯೋಜನೆಗಳು ವಿಶ್ವಮಾನ್ಯಗೊಂಡಿವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

* ದೇಶದ ಪ್ರಮುಖ ಸಂಸ್ಥೆಗಳು ಮಾಡಿರುವ ಸಮೀಕ್ಷೆಗಳ ಪ್ರಕಾರ ಶೇ.10ರಷ್ಟಿರುವ ಶ್ರೀಮಂತರ ಬಳಿ ಶೇ.80ರಷ್ಟು ಸಂಪತ್ತು ಶೇಖರಣೆಯಾಗಿದೆ. ಆದರೆ ಶೇ. 10 ಜನ ಕೇವಲ ಶೇ.3ರಷ್ಟು ಮಾತ್ರ ಜಿಎಸ್ಟಿ ಪಾವತಿಸುತ್ತಿದ್ದರೆಂದು ಅಧ್ಯಯನಗಳು ಹೇಳುತ್ತಿವೆ. ಉಳಿದ ಶೇ.90ರಷ್ಟು ಜನ ಹೊಟ್ಟೆ-ಬಟ್ಟೆಗೆ ದುಡಿಯುವವರಾದ್ದರಿಂದ ಶೇ.97 ರಷ್ಟು ಜಿಎಸ್ಟಿ ಪಾವತಿಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಯಾವ ಆರ್ಥಿಕತೆ ಮುಂದುವರೆಯಲು ಸಾಧ್ಯ? ಸಂವಿಧಾನದ ಆಶಯಗಳನ್ನು ಈಡೇರಿಸುವುದು ಹೇಗೆ? ಬೃಹದಾಕಾರವಾಗಿ ಬೆಳೆಯುತ್ತಿರುವ ಅಸಮಾನತೆಯನ್ನು ತಗ್ಗಿಸುವುದು ಹೇಗೆ? ಎಂಬ ಪ್ರಶ್ನೆಗಳು ನಮ್ಮನ್ನು ಬಾಧಿಸಲಾರಂಭಿಸಿದವು. ಈ ಬೃಹತ್ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಉದ್ದೇಶದಿಂದಲೇ ನಾವು ಗ್ಯಾರಂಟಿ ಯೋಜನೆಗಳು ಹಾಗೂ ಇನ್ನಿತರೆ ಜನ ಕಲ್ಯಾಣದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ.

* ಗ್ಯಾರಂಟಿ ಯೋಜನೆಗಳು ರಾಜ್ಯದ ಅಭಿವೃದ್ಧಿಯ ದಿಕ್ಕನ್ನೆ ಬದಲಾಯಿಸುತ್ತಿವೆ. 2023ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಆರಂಭಿಸಿದೆವು. ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಯುವನಿಧಿ ಯೋಜನೆಗಳಿಗೆ ಈ ವರೆಗೆ 96,000 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ವಿನಿಯೋಗಿಸಿದ್ದೇವೆ. ಶಕ್ತಿ ಯೋಜನೆಯಲ್ಲಿ 500 ಕೋಟಿ ಟ್ರಿಪ್ಪುಗಳ ಮೂಲಕ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದನ್ನು ಇತ್ತೀಚೆಗೆ ಆಚರಣೆ ಮಾಡಿದ್ದೇವೆ. ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಜನರಿಗೆ ತಲುಪುವ ಈ ಯೋಜನೆಗಳು ರಾಜ್ಯದ ಜನರ ತಲಾದಾಯವನ್ನು ಹೆಚ್ಚಿಸುತ್ತಿರುವುದಲ್ಲದೆ ಕಾರ್ಮಿಕ ಶಕ್ತಿಯಲ್ಲಿಮಹಿಳೆಯರ ಭಾಗವಹಿಸುವಿಕೆಯನ್ನು ಶೇ.23 ರಷ್ಟು ಹೆಚ್ಚಿಸಿವೆ ಎಂದು ಹಲವು ಅಧ್ಯಯನಗಳು ಹೇಳುತ್ತಿವೆ. ನಾವು ಶಕ್ತಿ ಯೋಜನೆಯನ್ನು ಜಾರಿಗೊಳಿಸುವುದರ ಜೊತೆಗೆ ಸಾರಿಗೆ ಇಲಾಖೆಗೆ ವಿವಿಧ ಮಾದರಿಯ ವಾಹನಗಳು ಸೇರಿದಂತೆ ಒಟ್ಟು 5,049 ಹೊಸ ಬಸ್ಸುಗಳ ಖರೀದಿ ಮತ್ತು 8,473 ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿದ್ದೇವೆ.

*. ಕರ್ನಾಟಕವು ಈಗ ತಲಾದಾಯದ ವಿಚಾರದಲ್ಲಿ ಮೊದಲ ಸ್ಥಾನದಲ್ಲಿದೆ. ತಲಾದಾಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಶೇ.101 ರಷ್ಟು ಪ್ರಗತಿಯನ್ನು ಸಾಧಿಸಿದ ರಾಜ್ಯ ನಮ್ಮ ಕರ್ನಾಟಕವಾಗಿದೆ. 2013-14 ರಲ್ಲಿ ಸ್ಥಿರ ದರಗಳಲ್ಲಿ 1,01,858 ರೂಪಾಯಿಗಳಷ್ಟಿದ್ದ ತಲಾದಾಯವು 2024-25 ರ ವೇಳೆಗೆ 2,04,605 ರೂಪಾಯಿಗಳಿಗೆ ತಲುಪಿದೆ.

*. ನಮ್ಮ ಸರ್ಕಾರವು ಗ್ಯಾರಂಟಿ ಯೋಜನೆಗಳೂ ಸೇರಿದಂತೆ ಸಹಾಯಧನ, ಪ್ರೋತ್ಸಾಹ ಧನ, ವಿದ್ಯಾರ್ಥಿವೇತನ, ಸಾಮಾಜಿಕ ಯೋಜನೆಗಳಿಗಾಗಿ ವಿನಿಯೋಗಿಸುತ್ತಿರುವ ಪಿಂಚಣಿ ಮುಂತಾದವುಗಳಿಗಾಗಿ 1.12 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ಜನ ಕಲ್ಯಾಣಕ್ಕಾಗಿ ಖರ್ಚು ಮಾಡುತ್ತಿದೆ.

*. ಬಲಾಢ್ಯರು ಮಾತ್ರ ಬದುಕಬೇಕು ಉಳಿದವರು ಗುಲಾಮರಾಗಿ ಬಲಾಢ್ಯರಿಗಾಗಿ ದುಡಿಯಬೇಕು ಎನ್ನುವ ಮನುವಾದಿ ಸಿದ್ಧಾಂತದ ಮಾದರಿಯೇ ಸಾಮಾಜಿಕ ಡಾರ್ವಿನ್ವಾದ. ಈ ಮೃಗೀಯ ಸಿದ್ಧಾಂತಕ್ಕೆ ಎದುರಾಗಿ ಅಸಹಾಯಕರಿಗೆ ಮೊದಲು ಆದ್ಯತೆ ಸಿಗಬೇಕು ಎನ್ನುವುದು ನಮ್ಮ ಸಂವಿಧಾನವಾದ. ಆದ್ದರಿಂದ ನಾವು ಸಂವಿಧಾನದ ಉಳಿವಿಗಾಗಿ ಪಣ ತೊಡೋಣ.

*. ಪ್ರೊ.ಸುಖ್ದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ರಾಜ್ಯ ಶಿಕ್ಷಣ ನೀತಿ ಆಯೋಗವು ಇತ್ತೀಚೆಗೆ ತನ್ನ ವರದಿಯನ್ನು ನೀಡಿದೆ. ಪೂರ್ಣ ಪ್ರಮಾಣದಲ್ಲಿ ರಾಜ್ಯದ್ದೆ ಆದ ಶಿಕ್ಷಣ ನೀತಿಯು ಸಿದ್ಧಪಡಿಸಲು ಕ್ರಮವಹಿಸಿರುವುದು ಇದೇ ಮೊದಲು. ವರದಿಯನ್ನು ಗಂಭೀರವಾಗಿ ಪರಿಶೀಲಿಸಿ ಅದರ ಅನುಷ್ಠಾನಕ್ಕೆ ಕ್ರಮಗಳನ್ನು ಕೈಗೊಳ್ಳುತ್ತೇವೆ.

* ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯವೆಂದು ಘೋಷಿಸಿದ್ದೇವೆ. ಹಾಗೆಯೇ ನಾವೆಲ್ಲರೂ ನಮ್ಮ ಹೆಮ್ಮೆಯ ರಾಜ್ಯವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಘೋಷಿಸಬೇಕಾಗಿದೆ. ಈ ಹೋರಾಟದಲ್ಲಿ ಪ್ರತಿ ಪ್ರಜೆಯೂ ಯೋಧರಂತೆ ಕೆಲಸ ಮಾಡಬೇಕಾಗಿದೆ. ಸರ್ಕಾರವು ಈಗಾಗಲೇ ಈ ವಿಚಾರದಲ್ಲಿ ಸಕಲ ಆಯಾಮಗಳಲ್ಲಿ ಕೆಲಸ ಮಾಡುತ್ತಿದೆ.

* ಜನರ ಬದುಕಿನ ಸ್ಥಿತಿಗತಿಗಳನ್ನು ಅರಿತುಕೊಳ್ಳಲು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಲು ತೀರ್ಮಾನಿಸಿದ್ದೇವೆ. ಸಮರ್ಪಕವಾದ ಅಂಕಿ-ಅಂಶಗಳು ಮಾತ್ರ ಜನರ ಬದುಕಿನ ಗತಿಯನ್ನು ಬದಲಾಯಿಸಲು ಕಾರಣವಾಗಬಲ್ಲವು. ನಮ್ಮ ಮೊದಲ ಆದ್ಯತೆ ಅಂಕಿ-ಅಂಶಗಳ ಸಂಗ್ರಹ. ಆ ನಂತರ ರೂಪಿಸುವ ಯೋಜನೆಗಳಲ್ಲಿ ವಿಶೇಷ ಪ್ರಾತಿನಿಧ್ಯ ಕೊಡಬೇಕಾಗುತ್ತದೆ. ಹಾಗೆ ಮಾಡದಿದ್ದರೆ ನಾವು ನಮ್ಮ ಸಂವಿಧಾನಕ್ಕೆ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ಅನ್ಯಾಯ ಮಾಡುತ್ತಿದ್ದೇವೆ ಎಂದು ಭಾವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿಯೆ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಹಾಗೂ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವಿಚಾರಗಳನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ.

*. ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿ ಮಾದರಿಗೆ 250ಕ್ಕಿಂತ ಹೆಚ್ಚಿನ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇಂಡಿಯಾ ಜಸ್ಟೀಸ್ ರಿಪೋರ್ಟ್ ವರದಿಗಳ ಪ್ರಕಾರ ನಮ್ಮ ರಾಜ್ಯವು ನ್ಯಾಯ ವ್ಯವಸ್ಥೆ, ಪೊಲೀಸು, ಕಾನೂನು ಸುವ್ಯವಸ್ಥೆ, ಕಾನೂನು ನೆರವು ಮುಂತಾದ ವಿಚಾರಗಳಲ್ಲಿ ಇಡೀ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ.

*. ರಾಜ್ಯದಲ್ಲಿ ಉತ್ತಮವಾದ ಮುಂಗಾರು ಮಳೆಯಾಗುತ್ತಿದೆ. ಅಣೆಕಟ್ಟೆಗಳು ತುಂಬಿವೆ. ರೈತರ ಮುಖದಲ್ಲಿ ಮಂದಹಾಸವಿದೆ.ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೆಚ್ಚಿನ ಭೂ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. 2024-25ರಲ್ಲಿ ಕೂಡ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ಬೆಳೆಯಲಾಗಿದೆ. ಹಿಂದಿನ ಸರ್ಕಾರವು ಎಪಿಎಂಸಿಗಳನ್ನು ಖಾಸಗೀಕರಿಸಿ ರೈತರ ಬದುಕನ್ನು ಕಾರ್ಪೊರೇಟ್ ಬಂಡವಾಳಿಗರ ಕೈಗೆ ಕೊಡಲು ಹೊರಟಿತ್ತು. ಆದರೆ, ನಮ್ಮ ಸರ್ಕಾರವು ಎಪಿಎಂಸಿಗಳನ್ನು ಬಲಿಷ್ಠಗೊಳಿಸಿದ ಕಾರಣ 2024-25 ರಲ್ಲಿ 164 ಲಕ್ಷ ಮೆಟ್ರಿಕ್ ಟನ್ನುಗಳಷ್ಟು ಕೃಷಿ ಉತ್ಪನ್ನಗಳು ಆವಕವಾಗಿದ್ದು ಶೇ. 447 ರಷ್ಟು ಹೆಚ್ಚಿನ ಪ್ರಮಾಣವಾಗಿದೆ. ಇದು ರಾಜ್ಯದ ಎ.ಪಿ.ಎಂ.ಸಿ.ಗಳ ಇತಿಹಾಸದಲ್ಲಿಯೇ ದಾಖಲೆಯಾಗಿದೆ.

17. ಕಳೆದ ಎರಡು ವರ್ಷಗಳಲ್ಲಿ ಬೆಲೆ ಕುಸಿತ ಕಂಡ ಕಾರಣ ಮಾವು ಮತ್ತು ಕೊಬ್ಬರಿಗೆ ಬೆಂಬಲ ಬೆಲೆ ನೀಡಿದ್ದೇವೆ. ವಿವಿಧ ಕಾರಣಗಳಿಂದ ಬೆಳೆ ಹಾನಿಯಾದ ತೊಗರಿಗೂ ಪರಿಹಾರ ನೀಡಿದ್ದೇವೆ. ಅಡಿಕೆ ಮತ್ತು ತೆಂಗನ್ನು ಬಾಧಿಸುತ್ತಿರುವ ರೋಗಗಳ ನಿವಾರಣೆಗೆ ಈ ಸಾಲಿನ ಬಜೆಟ್ನಲ್ಲಿ ಅನುದಾನಗಳನ್ನು ಒದಗಿಸಿದ್ದೇವೆ. ನಮ್ಮ ಸರ್ಕಾರವು “ಕೃಷಿ ಮೊದಲು ಸರ್ವಕ್ಕೆ, ಕೃಷಿಯಿಂದ ಪಸರಿಸುವುದು ಆ ಕೃಷಿಯನು ಉದ್ಯೋಗಿಸುವ ಜನವನು ಪಾಲಿಸುವುದು ಆ ಜನಪದದ ಜನದಿ ವಸು ತೆರಳುವುದು”ಎಂಬ ಕುಮಾರವ್ಯಾಸನ ಪರಿಕಲ್ಪನೆಯನ್ನು ಅಕ್ಷರಶಃ ನಂಬಿ ಮುನ್ನಡೆಯುತ್ತಿದೆ.

*. ಕೃಷಿ ವಲಯಕ್ಕೆ 2025-26ರ ಬಜೆಟ್ ನಲ್ಲಿ 51,339 ಕೋಟಿ ರೂ.ಗಳನ್ನು ಒದಗಿಸಿದ್ದೇವೆ. 2022-23 ಕ್ಕೆ ಹೋಲಿಸಿದರೆ ಶೇ.52.34 ರಷ್ಟು ಹೆಚ್ಚಿನ ಅನುದಾನವನ್ನು ಒದಗಿಸಿ ಕೃಷಿ ವಲಯವನ್ನು ಬಲಪಡಿಸುತ್ತಿದ್ದೇವೆ. ಇಷ್ಟರ ನಡುವೆಯೂ ನಮಗೆ ಬೇಕಾಗಿರುವಷ್ಟು ಯೂರಿಯಾವನ್ನು ಒಕ್ಕೂಟ ಸರ್ಕಾರ ಪೂರೈಸುತ್ತಿಲ್ಲ, ಇದರಿಂದ ಸ್ವಲ್ಪ ಸಮಸ್ಯೆಗಳಾಗಿವೆ. ಈ ಸಮಸ್ಯೆಯನ್ನು ಕೂಡಲೆ ಪರಿಹರಿಸಬೇಕೆಂದು ಒಕ್ಕೂಟ ಸರ್ಕಾರವನ್ನು ಆಗ್ರಹಿಸುತ್ತೇನೆ.

*. “ರಿವಾರ್ಡ್”ಎಂಬ ಯೋಜನೆಯಡಿ 18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭೂ ಸಂಪನ್ಮೂಲ ಸಮೀಕ್ಷೆ (LRI) ಕೈಗೊಳ್ಳಲಾಗಿದೆಯಲ್ಲದೆ ರಾಷ್ಟ್ರದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮಣ್ಣಿನ ಗುಣಲಕ್ಷಣ ಪೋಷಕಾಂಶ ಮತ್ತು ಸೂಕ್ತ ಬೆಳೆಯ ಮಾಹಿತಿ ಹೊಂದಿರುವ LRI ಕಾರ್ಡ್ ಗಳನ್ನು 8 ಲಕ್ಷ ರೈತರಿಗೆ ವಿತರಿಸಲಾಗಿರುತ್ತದೆ.

*ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲೀಕರಣಗೊಳಿಸಲು ಸ್ವಸಹಾಯ ಗುಂಪಿನ ಮಹಿಳೆಯರಿಗೆ ರಾಜ್ಯಾದ್ಯಂತ ಒಂದೇ ಮಾದರಿಯಲ್ಲಿ “ಅಕ್ಕ ಕೆಫೆ” ಗಳನ್ನು ಸ್ಥಾಪಿಸಲು ಕ್ರಮವಹಿಸಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಂದ ಅಕ್ಕ ಕೆಫೆ ನಡೆಸಲಾಗುತ್ತಿದೆ. 250 ಕೋಟಿ ರೂಪಾಯಿಗಳ ಬದ್ಧ ನಿಧಿಯ ಅನುದಾನದ ಬೆಂಬಲದೊಂದಿಗೆ 1,000 ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳನ್ನು ಬೆಂಬಲಿಸುವ ಮೂಲಕ ಕರ್ನಾಟಕವು ಮುಂಚೂಣಿ ರಾಜ್ಯವಾಗಿದೆ.

*2027ರ ವೇಳೆಗೆ ಎತ್ತಿನ ಹೊಳೆ ಯೋಜನೆಯನ್ನೂ ಪೂರ್ಣಗೊಳಿಸುವ ಗುರಿ ಹಾಕಿಕೊಂಡಿದ್ದೇವೆ. ನೀರಾವರಿ ಕ್ಷೇತ್ರದಲ್ಲಿಯೂ ಸರ್ಕಾರ ಹೆಚ್ಚಿನ ಗಮನ ಹರಿಸಿದ್ದು ನಾವು ಚುನಾವಣೆಗೆ ಮೊದಲು ಹೇಳಿದ್ದ ಆಶ್ವಾಸನೆಗಳನ್ನು ಈಡೇರಿಸಲು ಪ್ರಾಮಾಣಿಕವಾದ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.

* ಮಹಿಳಾ ಉದ್ಯಮಿಗಳು ಮತ್ತು ಸ್ವಸಹಾಯ ಸಂಘಗಳಿಗೆ ನಮ್ಮ ಸರ್ಕಾರ ಬೆಂಬಲ ನೀಡುತ್ತಲೇ ಬಂದಿದೆ. ನಮ್ಮ ಗ್ಯಾರಂಟಿ ಯೋಜನೆಗಳು ಅವರ ಸದ್ದಿಲ್ಲದ ಛಲವನ್ನು ಕಣ್ಣಿಗೆ ಕಾಣುವ ಯಶಸ್ಸನ್ನಾಗಿ ಪರಿವರ್ತನೆ ಮಾಡುತ್ತಿವೆ. ನಾವು ಕ್ರೀಡೆ, ಕಲೆ ಮತ್ತು ವಿಜ್ಞಾನದಲ್ಲಿ ಸಾಧಕರನ್ನು ಗುರುತಿಸುತ್ತಿದ್ದೇವೆ. ಪ್ರತಿಯೊಂದು ರೀತಿಯ ಪ್ರತಿಭೆಗೂ ಅದಕ್ಕೆ ಅರ್ಹವಾದ ಗೌರವ ಸಿಗುವಂತೆ ಮಾಡುತ್ತಿದ್ದೇವೆ.

* ವಿವಿಧ ವಸತಿ ಯೋಜನೆಗಳಡಿಯಲ್ಲಿ ಜೂನ್-2025ರ ಅಂತ್ಯದವರೆಗೆ 3,87,756 ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಕರ್ನಾಟಕ ಗೃಹ ಮಂಡಳಿಯಲ್ಲಿ ರಾಜ್ಯಾದ್ಯಂತ 26 ವಸತಿ ಯೋಜನೆಗಳು ಪ್ರಗತಿಯಲ್ಲಿವೆ.

*ಆರೋಗ್ಯ ಇಲಾಖೆಯಲ್ಲಿ ನಮ್ಮ ಸರ್ಕಾರವು ಹಲವಾರು ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಮುಖ್ಯವಾಗಿ, ಪುನೀತ್ ರಾಜ್‌ ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ಕ್ಯಾನ್ಸರ್ ರೋಗಿಗಳ ಪ್ರಯಾಣ ಮತ್ತು ಚಿಕಿತ್ಸೆಯ ಹೊರೆ ಕಡಿಮೆ ಮಾಡಲು ಹಬ್ ಮತ್ತು ಸ್ಕೋಪ್ ಮಾದರಿಯಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

* ಕರ್ನಾಟಕ ರಾಜ್ಯವು 2023-24ನೇ ಸಾಲಿನಲ್ಲಿ 54,427 ಕೋಟಿ ರೂ. ವಿದೇಶಿ ಹೂಡಿಕೆ ಆಕರ್ಷಿಸಿ, ದೇಶದಲ್ಲಿ 3ನೇ ಸ್ಥಾನದಲ್ಲಿದ್ದು, 2024-25ನೇ ಸಾಲಿನಲ್ಲಿ 56,030 ಕೋಟಿ ರೂ. ವಿದೇಶಿ ಹೂಡಿಕೆ ಆರ್ಕರ್ಷಿಸುವುದರೊಂದಿಗೆ ದೇಶದಲ್ಲಿ 2ನೇ ಸ್ಥಾನದಲ್ಲಿದೆ ಎಂದು ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ಈ ವೇಳೆ ಅವರು ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.