ADVERTISEMENT

KPSC ಕಾರ್ಯದರ್ಶಿ KS ಲತಾ ಕುಮಾರಿಗೆ 10 ದಿನ ರಜೆ ಕೊಟ್ಟು ಕಳುಹಿಸಿದ ಸರ್ಕಾರ!

ಕೆಪಿಎಸ್‌ಸಿ ಅಧ್ಯಕ್ಷ, ಕೆಲ ಸದಸ್ಯರು ಹಾಗೂ ಕೆಪಿಎಸ್‌ಸಿ ಕಾರ್ಯದರ್ಶಿ ಕೆ.ಎಸ್. ಲತಾ ಕುಮಾರಿ ನಡುವೆ ನಡೆಯುತ್ತಿರುವ ಜಟಾಪಟಿ ನಡುವೆಯೇ ರಜೆ ಮಂಜೂರು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2024, 7:11 IST
Last Updated 7 ಫೆಬ್ರುವರಿ 2024, 7:11 IST
<div class="paragraphs"><p>ಕೆ.ಎಸ್. ಲತಾಕುಮಾರಿ</p></div>

ಕೆ.ಎಸ್. ಲತಾಕುಮಾರಿ

   

ಬೆಂಗಳೂರು: ಕೆಪಿಎಸ್‌ಸಿ ಅಧ್ಯಕ್ಷ, ಕೆಲ ಸದಸ್ಯರು ಹಾಗೂ ಕೆಪಿಎಸ್‌ಸಿ ಕಾರ್ಯದರ್ಶಿ ಕೆ.ಎಸ್. ಲತಾ ಕುಮಾರಿ ಅವರ ನಡುವೆ ನಡೆಯುತ್ತಿರುವ ಜಟಾಪಟಿ ಮಧ್ಯೆಯೇ, ಸರ್ಕಾರ ಲತಾ ಕುಮಾರಿ ಅವರಿಗೆ 10 ದಿನ ಗಳಿಕೆ ರಜೆ ಮಂಜೂರು ಮಾಡಿದೆ.

ಡಿಪಿಎಆರ್ ಇಲಾಖೆಯ ಈ ಕುರಿತು ಬುಧವಾರ ಆದೇಶ ಹೊರಡಿಸಿದೆ.

ADVERTISEMENT

ಕೆ.ಎಸ್. ಲತಾ ಕುಮಾರಿ ಅವರಿಗೆ ಫೆಬ್ರುವರಿ 7 ರಿಂದ ಫೆಬ್ರುವರಿ 17ರವರೆಗೆ ಗಳಿಕೆ ರಜೆ ನೀಡಲಾಗಿದೆ. ಅವರ ರಜೆ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ರಾಕೇಶ್ ಕುಮಾರ್ ಕೆ ಅವರನ್ನು ಕೆಪಿಎಸ್‌ಸಿ ‍ಪ್ರಭಾರಿ ಕಾರ್ಯದರ್ಶಿಯನ್ನಾಗಿ ನಿಯುಕ್ತಿಗೊಳಿಸಿ ಆದೇಶಿಸಿದೆ.

ಕೆಪಿಎಸ್‌ಸಿಯ ನೇಮಕಾತಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್‌. ಸಾಹುಕಾರ್‌, ಕೆಲ ಸದಸ್ಯರು ಮತ್ತು ಲತಾಕುಮಾರಿ ಅವರ ನಡುವೆ ಜಟಾಪಟಿ ನಡೆಯುತ್ತಿದೆ. ಈ ಮಧ್ಯೆಯೇ ಅವರಿಗೆ ರಜೆ ಮಂಜೂರು ಮಾಡಿ ಕಳುಹಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ರಜೆ ಮೇಲೆ ತೆರಳುವಂತೆ ಕಾರ್ಯದರ್ಶಿಗೆ ಒತ್ತಡವಿತ್ತು

‘ಈಗಾಗಲೇ ಆಯೋಗದ ಆಯ್ಕೆ ಸಮಿತಿ ಸೂಚಿಸಿದ್ದ ಅಭ್ಯರ್ಥಿಯನ್ನು ಕಾನೂನು ಕೋಶದ ಮುಖ್ಯಸ್ಥ ಹುದ್ದೆಗೆ ನೇಮಿಸಿ ತಕ್ಷಣ ಆದೇಶ ಹೊರಡಿಸಬೇಕು. ಅದು ಸಾಧ್ಯವಾಗದೇ ಇದ್ದರೆ ರಜೆ ಮೇಲೆ ತೆರಳಬೇಕು’ ಎಂದು ಕಾರ್ಯದರ್ಶಿ ಕೆ.ಎಸ್. ಲತಾಕುಮಾರಿ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದೂ ಪ್ರಜಾವಾಣಿ ಫೆ.7ರಂದು ವರದಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.