
ಪ್ರಜಾವಾಣಿ ವಾರ್ತೆ
ಬೆಂಗಳೂರು: ಕೆರೆಗಳ ‘ಸಂರಕ್ಷಿತ ಪ್ರದೇಶ’ದ (ಬಫರ್ ವಲಯ) ಕಡಿತಕ್ಕೆ ರಾಜ್ಯಪಾಲರ ಸಮ್ಮತಿ ದೊರೆತಿದ್ದು, ಬಫರ್ ವಲಯದ ಪ್ರಮಾಣವನ್ನು ಪರಿಷ್ಕರಿಸಿ ಸರ್ಕಾರ ಅಧಿಸೂಚಿಸಿದೆ.
ಈ ಉದ್ದೇಶಕ್ಕಾಗಿ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಕೆಟಿಸಿಡಿಎ) ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದ ಸರ್ಕಾರ, 2025ರ ಆಗಸ್ಟ್‌ನಲ್ಲಿ ನಡೆದ ವಿಧಾನಮಂಡಲ ಅಧಿವೇಶನ ಮಸೂದೆಗೆ ಅಂಗೀಕಾರ ಪಡೆದಿತ್ತು. ಅದನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಎರಡು ಬಾರಿ ವಿವರಣೆ ಕೇಳಿದ್ದ ರಾಜ್ಯಪಾಲರು, ಅಂತಿಮವಾಗಿ ಇದೇ 16ರಂದು ಅಂಕಿತ ಹಾಕಿದ್ದಾರೆ.
ಕೆರೆ ಹಾಗೂ ರಾಜಕಾಲುವೆಗಳ ಬಫರ್ ವಲಯ ಕಡಿಮೆ ಮಾಡಲು ಮುಖ್ಯ ಕಾರ್ಯದರ್ಶಿ ನೇತೃತ್ವದ ಅಧಿಕಾರಿಗಳ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಅದರನ್ವಯ ಮಸೂದೆ ಸಿದ್ಧಪಡಿಸಲಾಗಿತ್ತು.
ಕೆಟಿಸಿಡಿಎ ಕಾಯ್ದೆ–2014ರ 12 ಪ್ರಕರಣದಲ್ಲಿ ತಿದ್ದುಪಡಿ ತರಲಾಗಿದ್ದು, ಕೆರೆಗಳ ಬಫರ್ ವಲಯವನ್ನು ಪರಿಷ್ಕರಿಸಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಫೆ.18ರಂದು ಅಧಿಸೂಚನೆ ಹೊರಡಿಸಿದೆ.
ಹೊಸ ಅಧಿಸೂಚನೆಯಂತೆ, ಸಾರ್ವಜನಿಕ ಸೌಕರ್ಯ ಸೇವೆಗಳಾದ ರಸ್ತೆಗಳು, ಸೇತುವೆಗಳು, ವಿದ್ಯುತ್ ಮಾರ್ಗಗಳು, ನೀರು ಸರಬರಾಜು ಮಾರ್ಗಗಳು, ನೆಲದಡಿಯ ಚರಂಡಿ ಮಾರ್ಗ, ಜಾಕ್‌ವೆಲ್ ಅಥವಾ ಪಂಪ್‌ಹೌಸ್ ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ), ಮಧ್ಯಂತರ ಕೊಳಚೆ ನೀರು ಪಂಪಿಂಗ್ ಘಟಕ (ಐಎಸ್‌ಪಿಎಸ್), ಕೊಚ್ಚೆನೀರು ಗುಂಡಿ (ವೆಟ್‌ವೆಲ್), ಕಿರು ಜಲನಾಲೆಗಳ ನಿರ್ಮಾಣಕ್ಕೆ ಬಫರ್ ವಲಯದ ನಿರ್ಬಂಧ ಇರುವುದಿಲ್ಲ. ಕೆಟಿಸಿಡಿಎ ಪೂರ್ವಾನುಮೋದನೆ ಮಾತ್ರ ಪಡೆಯಬೇಕು.
ಪರಿಷ್ಕರಿಸಿರುವ ಬಫರ್ ವಲಯದಲ್ಲಿ ವಾಣಿಜ್ಯ ಅಥವಾ ಮನರಂಜನೆ, ಕೈಗಾರಿಕೆ ಚಟುವಟಿಕೆಯನ್ನು ನಡೆಸುವಂತಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.