ADVERTISEMENT

Karnataka | ನಾಲ್ಕು ಮಸೂದೆಗಳಿಗೆ ಪರಿಷತ್‌ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 0:30 IST
Last Updated 23 ಫೆಬ್ರುವರಿ 2024, 0:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ವಿಧಾನಪರಿಷತ್‌ನಲ್ಲಿ ಕರ್ನಾಟಕ ಪೊಲೀಸ್‌ (ತಿದ್ದುಪ‍ಪಡಿ) ಮಸೂದೆ, ಕರ್ನಾಟಕ ಕೃಷ್ಣಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಮಸೂದೆ,‌ ಕರ್ನಾಟಕ ಸ್ಟಾಂಪು ತಿದ್ದುಪಡಿ ಮಸೂದೆ ಮತ್ತು ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆಗಳಿಗೆ ಗುರುವಾರ ಅಂಗೀಕಾರ ನೀಡಲಾಯಿತು.

ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ ಮಂಡಿಸಿ ವಿವರಣೆ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯವಾಗಿ ಹೊಂದಿರಬೇಕು. ಭೂ ಅವ್ಯವಹಾರಕ್ಕೆ ಕಡಿವಾಣ ಹಾಕಲು ಹಾಗೂ ಆನ್ ಲೈನ್ ವ್ಯವಸ್ಥೆಗೆ ಒತ್ತು ಕೊಡಲು ಈ ಮಸೂದೆ ತರಲಾಗುತ್ತಿದೆ’ ಎಂದರು.

ADVERTISEMENT

‘ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದ ತನಿಖೆ‌‌ಯಲ್ಲಿ ಅಕ್ರಮ ನೋಂದಣಿಯಿಂದ ಸುಮಾರು ₹ 300 ಕೋಟಿ ವಂಚನೆಯಾಗಿರುವುದು ಗೊತ್ತಾಗಿತ್ತು.‌ ಈ ಸಂಬಂಧ 28 ಉಪ ನೋಂದಣಾಧಿಕಾರಿಗಳನ್ನು ತನಿಖೆಗೆ ಒಳಪಡಿಸಲಾಗಿತ್ತು. ಆದರೆ, ಇ-ಖಾತಾ ಕಡ್ಡಾಯವಾಗಿ ಹೊಂದಿರಬೇಕೆಂದು ಕಾಯ್ದೆಯಲ್ಲಿ ಇಲ್ಲದೇ ಇದ್ದುದರಿಂದ ಅವರೆಲ್ಲ ಆರೋಪ ಮುಕ್ತರಾಗಿದ್ದರು’ ಎಂದರು.

ದೂರು ನೀಡಲು ಸಹಾಯವಾಣಿ: ‘ಉಪ ನೋಂದಣಾಧಿಕಾರಿಗಳೂ ಸೇರಿದಂತೆ ಉಪ ನೋಂದಣಿ ಕಚೇರಿಯ ಇತರ ಅಧಿಕಾರಿಗಳ ಹೆಸರಿನಲ್ಲಿ ಸ್ಟಾಂಪ್ ವೆಂಡರ್ಸ್‌ಗಳು ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ತಡೆಯಲು ಸಹಾಯವಾಣಿ ( 080–68265316) ಆರಂಭಿಸಲಾಗಿದೆ. ಹೆಚ್ಚು ಹಣ ವಸೂಲು ಮಾಡುತ್ತಿರುವ ಬಗ್ಗೆ ಈ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು. ಆರೋಪ ಸಾಬೀತಾದ ಸ್ಟಾಂಪ್ ವೆಂಡರ್ಸ್‌ಗಳ ಪರವಾನಗಿಯನ್ನೇ ರದ್ದುಪಡಿಸಲಾಗುವುದು’ ಎಂದರು‌‌‌.

ಪೊಲೀಸ್‌ ವರ್ಗಾವಣೆ ಅವಧಿ ಏರಿಕೆ: ಕರ್ನಾಟಕ ಪೊಲೀಸು (ತಿದ್ದುಪ‍ಪಡಿ) ಮಸೂದೆ ಕುರಿತು ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ, ‘ಪೊಲೀಸ್ ವರ್ಗಾವಣೆ ಅವಧಿಯನ್ನು ಒಂದು ವರ್ಷದಿಂದ ಎರಡು ವರ್ಷಕ್ಕೆ ಏರಿಸುವ ಉದ್ದೇಶದಿಂದ ಈ ಮಸೂದೆ ಮಂಡಿಸಲಾಗಿದೆ. ಇದರಿಂದ ಆಯಾ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರು ತನಿಖೆಯಲ್ಲಿ ದಕ್ಷತೆ ಜೊತೆ ಪಾರದರ್ಶಕತೆ ಕಾಣಬಹುದು’ ಎಂದರು.

ಖಾಸಗಿ ನಿರ್ಣಯ ಮಂಡನೆ: ‘ರಾಜ್ಯದಲ್ಲಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳನ್ನು ಸ್ಥಳೀಯರಿಗೆ ಮೀಡಲಿಡುವ ಕುರಿತಂತೆ ಸಂವಿಧಾನಕ್ಕೆ ತಿದ್ದು‌ಪಡಿ ತರಬೇಕು’ ಎಂದು ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ಅವರು ಖಾಸಗಿ ನಿರ್ಣಯ ಮಂಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ, ‘ಪರಿಶೀಲಿಸಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.