ADVERTISEMENT

ವಿಧಾನ ಪರಿಷತ್ ಚುನಾವಣೆ |ಬಿಎಸ್‌ವೈ ಮಾನಸಪುತ್ರ ಸುನೀಲ ವಲ್ಲ್ಯಾಪುರಗೆ ಅದೃಷ್ಟ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 5:31 IST
Last Updated 18 ಜೂನ್ 2020, 5:31 IST
ಸುನೀಲ ವಲ್ಲ್ಯಾಪುರ
ಸುನೀಲ ವಲ್ಲ್ಯಾಪುರ    

ಚಿಂಚೋಳಿ(ಕಲಬುರ್ಗಿ): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಬಲಗೈ ಬಂಟ ಹಾಗೂ ಮಾನಸ ಪುತ್ರ ಎಂಬ ಖ್ಯಾತಿಗೆ ಒಳಗಾಗಿರುವ ಮಾಜಿ ಸಚಿವ ಸುನೀಲ ವಲ್ಲ್ಯಾಪುರ ಅವರಿಗೆ ಅದೃಷ್ಟ ಕೂಡಿ ಬಂದಿದ್ದು ವಿಧಾನ ಪರಿಷತ್ ಪ್ರವೇಶಕ್ಕೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದೆ.

ವಿಜಯಪುರ ಜಿಲ್ಲೆಯವರಾದ ಸುನೀಲ ವಲ್ಲ್ಯಾಪುರ ಅವರು ಕಾಂಗ್ರೆಸ್ ನಾಯಕರಾಗಿದ್ದ ಗೋವಿಂದರಾಜ ಒಡೆಯರ ಅವರ ಮಗಳನ್ನು ವಿವಾಹವಾಗಿ ಕಲಬುರ್ಗಿಯನ್ನೇ ಕಾರ್ಯಕ್ಷೇತ್ರವಾಗಿಸಿಕೊಂಡಿದ್ದಾರೆ.

ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿಯಾಗಿವರಾಜಕೀಯ ಜೀವನ ಆರಂಭಿಸಿದ ಅವರು 2004ರಲ್ಲಿ ಶಹಾಬಾದ ವಿಧಾನ ಸಭೆ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಮೊದಲ ಬಾರಿಗೆ ಗೆಲುವು ಸಾಧಿಸಿದ್ದರು.‌ 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಿಂದ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟ ಚಿಂಚೋಳಿಯಿಂದ ಸ್ಪರ್ಧಿಸಿ ಮೊದಲ ಬಾರಿಗೆ ಇಲ್ಲಿ ಕಮಲ ಅರಳಿಸಿ ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸಿದ್ದರು.

ನಂತರ ನಂಜುಂಡಪ್ಪ‌ ವರದಿ‌ ಅನುಷ್ಠಾನದ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರು ಆದರೆ ಅವರು ಅಧಿಕಾರ ಸ್ವೀಕರಿಸದೇ ಪರೋಕ್ಷವಾಗಿ ತಮ್ಮ ಮುನಿಸು ಹೊರ ಹಾಕಿದ್ದರು. ಜಗದೀಶ ಶೆಟ್ಟರ್ ಸಂಪುಟದಲ್ಲಿ ಸಂಪುಟ ದರ್ಜೆ ಸಚಿವ ಸ್ಥಾನ ಪಡೆದ ಅವರು ಮೂಲ ಸೌಕರ್ಯ ಅಭಿವೃದ್ಧಿ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.‌

ನಂತರ ಬಿ.ಎಸ್. ಯಡಿಯೂರಪ್ಪನವರು ಬಿಜೆಪಿ ತೊರೆದು ಕೆಜೆಪಿ ಸ್ಥಾಪಿಸಿದಾಗ ಅವರೊಂದಿಗೆ ಗುರುತಿಸಿಕೊಂಡಿದ್ದಲ್ಲದೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಯಡಿಯೂರಪ್ಪ ಮಾನಸ ಪುತ್ರ‌ ಎಂದು ಜನರಿಂದ ಬಣ್ಣಿಸಿಕೊಂಡಿದ್ದರು.2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಉಮೇಶ ಜಾಧವ ವಿರುದ್ಧ ಪರಾಭವಗೊಂಡಿದ್ದರು. 2018ರಲ್ಲಿ ಮತ್ತೊಮ್ಮೆ ಕಾಂಗ್ರೆಸ್‌ನ ಉಮೇಶ ಜಾಧವ ಎರಡನೇ ಬಾರಿಗೆ ಸುನೀಲ ವಲ್ಲ್ಯಾಪುರ ಅವರನ್ನು ಸೋಲಿಸಿದ್ದರು.

2019ರಲ್ಲಿ ಉಮೇಶ ಜಾಧವ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರುವ ಮೂಲಕ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2019ರಲ್ಲಿ ಚಿಂಚೋಳಿ ವಿಧಾನ ಸಭೆಗೆ ನಡೆದ ಉಪ ಚುನಾವಣೆಯಲ್ಲಿ ಚಿಂಚೋಳಿಯಿಂದ ಕಣಕ್ಕಿಳಿಯಲು ಬಯಸಿದ್ದರು ಆದರೆ ಬಿಜೆಪಿ ಟಿಕೆಟ್ ಉಮೇಶ ಜಾಧವ ಪುತ್ರ ಅವಿನಾಶ ಜಾಧವ ಅವರಿಗೆ ಒಲಿದಿತ್ತು. ಆಗ ಬಿಎಸ್‌ವೈ ಅವರು ಸುನೀಲ ವಲ್ಲ್ಯಾಪುರ ಅವರನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡುವ ಭರವಸೆ ನೀಡಿದ್ದರು.

ಚೋಳಿಯಲ್ಲಿ ಅವಿನಾಶ ಜಾಧವ ಗೆದ್ದ ಮೇಲೆ ಸುನೀಲ ವಲ್ಲ್ಯಾಪುರ ಬಾಡಿಗೆ ಮನೆ ಖಾಲಿ ಮಾಡಿಕೊಂಡು ಹೋಗಿದ್ದರು. ಇದೀಗ ವಿಧಾನ ಪರಿಷತ್ ಪ್ರವೇಶಿಸುವ ಯೋಗ ಕೂಡಿ ಬಂದಿದ್ದು ಚಿಂಚೋಳಿ ರಾಜಕೀಯ ಚಿತ್ರಣ ಮುಂಬರುವ ದಿನಗಳಲ್ಲಿ‌ ಹೊಸ ಬೆಳವಣಿಗೆಗೆ ಕಾರಣವಾಗಲಿದೆ ಎಂಬ ನಿರೀಕ್ಷೆ ರಾಜಕೀಯ ವಲಯದಿಂದ ಕೇಳಿ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.