ವಿಧಾನಸೌಧ
ಕರ್ನಾಟಕದ 16ನೇ ವಿಧಾನಸಭೆ ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷ ಕಳೆಯುತ್ತಿದೆ. 2023ರ ಮೇ ತಿಂಗಳಿನಿಂದ ಇಲ್ಲಿಯವರೆಗೆ ಆಡಳಿತಾರೂಢ ಕಾಂಗ್ರೆಸ್‌ನ ಐವರು, ವಿರೋಧ ಪಕ್ಷಗಳಾದ ಬಿಜೆಪಿಯ ಇಬ್ಬರು ಮತ್ತು ಜೆಡಿಎಸ್‌ನ ಒಬ್ಬರು ಶಾಸಕರ ಮೇಲೆ ಪ್ರಕರಣಗಳಿವೆ. ಸಿಬಿಐ, ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ನ್ಯಾಯಾಲಯ, ಚುನಾವಣಾ ಆಯೋಗ, ಲೋಕಾಯುಕ್ತ, ಪೊಲೀಸ್ ಹೀಗೆ ನಾನಾ ಬಗೆಯ ‘ಉರುಳು’ಗಳು ಇವರಿಗೆ ಸುತ್ತಿಕೊಂಡಿವೆ. ಮೂವರು ಶಾಸಕರು ಜೈಲಿನಲ್ಲಿದ್ದರೆ, ಮೂವರ ‘ಸದಸ್ಯತ್ವ’ವೇ ನ್ಯಾಯಾಂಗದ ತಕ್ಕಡಿಯಲ್ಲಿದೆ
ಸತೀಶ್ ಸೈಲ್–ಕ್ಷೇತ್ರ: ಕಾರವಾರ
ಮೊದಲ ಬಾರಿ 2013ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆ. 2018ರಲ್ಲಿ ಬಿಜೆಪಿ ಎದುರು ಸೋಲು. 2023ರಲ್ಲಿ ಕಾಂಗ್ರೆಸ್‌ನಿಂದ ಗೆಲುವು
ಪ್ರಕರಣದ ವಿವರ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬೇಲೆಕೇರಿ ಬಂದರಿನಲ್ಲಿ ಸಂಗ್ರಹಿಸಲಾಗಿದ್ದ ಕಬ್ಬಿಣದ ಅದಿರನ್ನು ಕದ್ದು ಸಾಗಿಸಿದ ಪ್ರಕರಣದಲ್ಲಿ ಸತೀಶ್ ಸೈಲ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಸತೀಶ್ ಸೈಲ್ ಅವರಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಶಿಕ್ಷೆ ಜಾರಿಗೆ ಸೈಲ್ ಅವರು ಹೈಕೋರ್ಟ್ ಮೂಲಕ ತಡೆ ತಂದಿದ್ದರು. ಆದರೆ, ಈ ಪ್ರಕರಣದಲ್ಲಿ ಇಸಿಐಆರ್ ದಾಖಲಿಸಿದ ಜಾರಿ ನಿರ್ದೇಶನಾಲಯವು (ಇ.ಡಿ) ಸತೀಶ್ ಅವರನ್ನು ಈಚೆಗೆ ಬಂಧಿಸಿದೆ. ಸತೀಶ್ ಈಗಲೂ ಇ.ಡಿ ಬಂಧನದಲ್ಲಿ ಇದ್ದಾರೆ.
ಬಿ.ನಾಗೇಂದ್ರ–ಕ್ಷೇತ್ರ: ಬಳ್ಳಾರಿ ಗ್ರಾಮಾಂತರ
2008ರಲ್ಲಿ ಬಿಜೆಪಿ, 2013ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕೂಡ್ಲಿಗಿ ಕ್ಷೇತ್ರದಿಂದ ಆಯ್ಕೆ. 2018ರಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿಯಿಂದ ಆಯ್ಕೆ. 2023ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆ
ಪ್ರಕರಣದ ವಿವರ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಖಾತೆಗಳಿಂದ ₹89 ಕೋಟಿ ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣ ದಲ್ಲಿ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರನ್ನು ಇ.ಡಿ ಬಂಧಿಸಿತ್ತು. ಈ ಪ್ರಕರಣದಲ್ಲಿ ಒಂದೆಡೆ ಸಿಐಡಿ, ಇನ್ನೊಂದೆಡೆ ಸಿಬಿಐ ಮತ್ತು ಇ.ಡಿ ತನಿಖೆ ನಡೆಸುತ್ತಿವೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದ ನಾಗೇಂದ್ರ, ಪ್ರಕರಣ ಪತ್ತೆಯಾಗುತ್ತಿದ್ದ ಹಾಗೆಯೇ ಸಚಿವ ಸ್ಥಾನ ತೊರೆದಿದ್ದರು.4 ತಿಂಗಳು ಬಂಧನದಲ್ಲಿದ್ದು, ಜಾಮೀನಿನ ಮೇಲೆ ಹೊರಗಿದ್ದಾರೆ.
ಕೆ.ಸಿ.ವೀರೇಂದ್ರ–ಕ್ಷೇತ್ರ: ಚಿತ್ರದುರ್ಗ
2023 ಮೊದಲ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಆಯ್ಕೆ
ಪ್ರಕರಣದ ವಿವರ: 2016ರಲ್ಲಿ ವೀರೇಂದ್ರ (ಪಪ್ಪಿ) ಅವರ ಚಳ್ಳಕೆರೆ ಮನೆಯಲ್ಲಿ ಶೋಧ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಅಪಾರ ಪ್ರಮಾನದ ನಗದು ಮತ್ತು ಚಿನ್ನಾಭರಣ ಪತ್ತೆ ಮಾಡಿದ್ದರು.ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು.ಇದೇ ಪ್ರಕರಣ ಮತ್ತು ಪೂರಕ ದೂರುಗಳ ಆಧಾರದಲ್ಲಿ ಜಾರಿ ನಿರ್ದೇಶನಾಲಯವು, ವೀರೇಂದ್ರ ಅವರಿಗೆ ಸೇರಿದ ಮನೆ ಮತ್ತು ದೇಶದ ವಿವಿಧೆಡೆ ಇರುವ ಕ್ಯಾಸಿನೊಗಳಲ್ಲಿ ಈಚೆಗೆ ಶೋಧ ನಡೆಸಿತ್ತು. ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಬೆಟ್ಟಿಂಗ್ ನಡೆಸಿದ ಆರೋಪದಲ್ಲಿ ವೀರೇಂದ್ರ ಅವರನ್ನು ಬಂಧಿಸಿತ್ತು. ವೀರೇಂದ್ರ ಅವರು ಈಗಲೂ ಇ.ಡಿ ಬಂಧನದಲ್ಲಿ ಇದ್ದು, ತನಿಖೆ ಮುಂದುವರೆದಿದೆ.
ಕೆ.ವೈ.ನಂಜೇಗೌಡ–ಕ್ಷೇತ್ರ: ಮಾಲೂರು
ಮೊದಲ ಬಾರಿ 2018ರಲ್ಲಿ ಕಾಂಗ್ರೆಸ್‌ನಿಂದ ಗೆಲುವು, 2023ರಲ್ಲಿ ಪುನರಾಯ್ಕೆ
ಪ್ರಕರಣದ ವಿವರ: 2023ರ ವಿಧಾನಸಭಾ ಚುನಾವಣೆಗೆ ನಡೆದ ಮತದಾನದ ಮತ ಎಣಿಕೆಯಲ್ಲಿ ಕೆ.ವೈ.ನಂಜೇಗೌಡ ಅವರು ಅಕ್ರಮ ಎಸಗಿದ್ದಾರೆ ಎಂದು ಬಿಜೆಪಿಯ ಪರಾಜಿತ ಅಭ್ಯರ್ಥಿ ಕೆ.ಎಸ್. ಮಂಜುನಾಥ್ ಗೌಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ನಂಜೇಗೌಡ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ, ಇದೇ ಸೆಪ್ಟೆಂಬರ್ 15ರಂದು ಆದೇಶ ಹೊರಡಿಸಿತ್ತು. ಜತೆಗೆ ನಾಲ್ಕು ವಾರಗಳಲ್ಲಿ ಮರು ಎಣಿಕೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.
ಇನ್ನಷ್ಟೇ ಮತಗಳ ಮರು ಎಣಿಕೆ ನಡೆಯಬೇಕಿದೆ.
ವಿನಯ್ ಕುಲಕರ್ಣಿ–ಕ್ಷೇತ್ರ: ಧಾರವಾಡ
2013 ಹಾಗೂ 2023ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆ
ಪ್ರಕರಣದ ವಿವರ: 2016ರಲ್ಲಿ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಈಗಲೂ ಜೈಲಿನಲ್ಲಿಯೇ ಇದ್ದಾರೆ.ಅವರಿಗೆ ನೀಡಿದ್ದ ಜಾಮೀನನ್ನು ಇದೇ ಜೂನ್ 6ರಂದು ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು.ಈಗ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.
ಸಾಮಾಜಿಕ ಕಾರ್ಯಕರ್ತೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ವಿನಯ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಐಶ್ವರ್ಯ ಗೌಡ ಚಿನ್ನಾಭರಣ ವಂಚನೆ ಪ್ರಕರಣದಲ್ಲಿ ಇ.ಡಿ ವಿನಯ್ ಅವರನ್ನು ವಿಚಾರಣೆ ನಡೆಸಿದೆ.
ಎಚ್.ಡಿ. ರೇವಣ್ಣ– ಕ್ಷೇತ್ರ: ಹೊಳೆನರಸೀಪುರ
1994ರಲ್ಲಿ ಮೊದಲ ಬಾರಿ ಸ್ಪರ್ಧಿಸಿ ಗೆಲುವು. 1999ರಲ್ಲಿ ಸೋತಿದ್ದು, ನಂತರ ಐದು ಬಾರಿ ಸತತ ಗೆಲುವು. ಸಚಿವರೂ ಆಗಿದ್ದರು
ಪ್ರಕರಣದ ವಿವರ: ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಎಚ್.ಡಿ.ರೇವಣ್ಣ ವಿರುದ್ಧವೂ ತನಿಖೆ ನಡೆಯುತ್ತಿದೆ. ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಅಡಿಯಲ್ಲೂ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಯ ವಿಶೇಷ ತನಿಖಾ ತಂಡವೇ ಈ ಪ್ರಕರಣದ ತನಿಖೆ ನಡೆಸುತ್ತಿದೆ.
ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಆರೋಪವನ್ನೂ ಅವರು ಎದುರಿಸುತ್ತಿದ್ದಾರೆ. ಈ ಎಲ್ಲ ಪ್ರಕರಣಗಳಲ್ಲಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅವರಿಗೆ ಜಾಮೀನು ನೀಡಿದೆ.
ಜಿ.ಜನಾರ್ದನ ರೆಡ್ಡಿ–ಕ್ಷೇತ್ರ: ಗಂಗಾವತಿ
ಮೊದಲ ಬಾರಿ ವಿಧಾನಸಭೆಗೆ ಆಯ್ಕೆ. ಹಿಂದೆ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ, ಸಚಿವರಾಗಿದ್ದರು.
ಪ್ರಕರಣದ ವಿವರ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹೈದರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯವು ಜನಾರ್ದನ ರೆಡ್ಡಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ, ಇದೇ ಮೇ 12ರಂದು ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ತೆಲಂಗಾಣ ಹೈಕೋರ್ಟ್ ಮೊರೆ ಹೋಗಿದ್ದ ಜನಾರ್ದನ ರೆಡ್ಡಿ, ಶಿಕ್ಷೆ ಜಾರಿಗೆ ತಡೆ ತಂದಿದ್ದರು.
ಮುನಿರತ್ನ–ಕ್ಷೇತ್ರ: ಆರ್. ಆರ್. ನಗರ
2013, 2018ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆ. 2019ರಲ್ಲಿ ಕಾಂಗ್ರೆಸ್ ತೊರೆದು ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆಲುವು. 2023– ಬಿಜೆಪಿಯಿಂದ ಆಯ್ಕೆ
ಪ್ರಕರಣದ ವಿವರ: ಜಾತಿ ನಿಂದನೆ, ಕೊಲೆ ಬೆದರಿಕೆ, ಅತ್ಯಾಚಾರ ಆರೋಪದಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ.ಪೊಲೀಸ್ ಮತ್ತು ನ್ಯಾಯಾಂಗ ಬಂಧನ. ಈಗ ಜಾಮೀನಿನ ಮೇಲೆ ಹೊರಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.