ADVERTISEMENT

ಹೊರಟ್ಟಿ ಗೆಲುವಿನ ನಾಗಾಲೋಟ, ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ 8ನೇ ಬಾರಿ ಆಯ್ಕೆ

ಇ.ಎಸ್.ಸುಧೀಂದ್ರ ಪ್ರಸಾದ್
Published 15 ಜೂನ್ 2022, 20:10 IST
Last Updated 15 ಜೂನ್ 2022, 20:10 IST
ಧಾರವಾಡದ ಕರ್ನಾಟಕ ಕಾಲೇಜು ರಸ್ತೆಯಲ್ಲಿ ಬುಧವಾರ ನಡೆದ ವಿಜಯೋತ್ಸವದಲ್ಲಿ ಬಸವರಾಜ ಹೊರಟ್ಟಿ ಅವರೊಂದಿಗೆ ಮಹೇಶ ಟೆಂಗಿನಕಾಯಿ ಹಾಗೂ ಇತರರು ತೆರೆದ ವಾಹನದಲ್ಲಿ ಸಾಗಿದರು
ಧಾರವಾಡದ ಕರ್ನಾಟಕ ಕಾಲೇಜು ರಸ್ತೆಯಲ್ಲಿ ಬುಧವಾರ ನಡೆದ ವಿಜಯೋತ್ಸವದಲ್ಲಿ ಬಸವರಾಜ ಹೊರಟ್ಟಿ ಅವರೊಂದಿಗೆ ಮಹೇಶ ಟೆಂಗಿನಕಾಯಿ ಹಾಗೂ ಇತರರು ತೆರೆದ ವಾಹನದಲ್ಲಿ ಸಾಗಿದರು   

ಧಾರವಾಡ: ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ 8ನೇ ಬಾರಿಗೆ ಗೆಲುವನ್ನು ಬಸವರಾಜ ಹೊರಟ್ಟಿ ದಾಖಲಿಸಿದರೆ, 42 ವರ್ಷಗಳಿಂದ ಬೇರೆ ಪಕ್ಷಗಳ ಹಿಡಿತದಲ್ಲಿದ್ದ ಕ್ಷೇತ್ರವನ್ನು ಬಿಜೆಪಿ ಈ ಬಾರಿ ತನ್ನದಾಗಿಸಿಕೊಂಡಿದೆ.

ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಈ ಬಾರಿ ಕಾಂಗ್ರೆಸ್ ನಿರೀಕ್ಷೆಗೂ ಮೀರಿ ಆರು ತಿಂಗಳ ಮೊದಲೇ ತನ್ನ ಅಭ್ಯರ್ಥಿಯನ್ನಾಗಿ ಬಸವರಾಜ ಗುರಿಕಾರ ಅವರ ಹೆಸರನ್ನು ಘೋಷಿಸಿತ್ತು.

’ನನ್ನ ಜುಟ್ಟು ಬಿಜೆಪಿಯವರ ಕೈಯಲ್ಲಿದೆ. ಅವರು ಹೇಗೆ ಅದನ್ನು ಹಿಡಿದು ಆಟ ಆಡುತ್ತಾರೋ ಹಾಗೇ ಆಡುತ್ತೇನೆ’ ಎಂದಿರುವ ಹೊರಟ್ಟಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವಿನ ಯಾತ್ರೆ ಆರಂಭಿಸಿದ್ದರು. ನಂತರ ಲೋಕಶಕ್ತಿ, ಜನತಾ ಪಕ್ಷ, ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು. ಆದರೆ, ಈ ಬಾರಿ ಆಡಳಿತಾರೂಢ ಬಿಜೆಪಿಯ ಸಖ್ಯವನ್ನು ಹೊರಟ್ಟಿ ಬಯಸಿದ್ದರು. ಜೆಡಿಎಸ್ ಬೆಂಬಲದೊಂದಿಗೆ ಸಭಾಪತಿಯನ್ನಾಗಿ ಮಾಡಿದ ಬಿಜೆಪಿ, ಚುನಾವಣೆ ಹೊಸ್ತಿಲಲ್ಲಿ ಹೊರಟ್ಟಿ ಅವರನ್ನು ಸೆಳೆಯುವಲ್ಲಿಯೂ ಯಶಸ್ವಿಯಾಯಿತು.

ADVERTISEMENT

ಹೊರಟ್ಟಿ ಗೆಲುವಿಗೆ ಅವರ ಅಭಿಮಾನಿಗಳಿಗಿಂತ ಕಣವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ ಬಿಜೆಪಿ ನಾಯಕರು ಕ್ಷೇತ್ರದ ಉದ್ದಗಲಕ್ಕೂ ಓಡಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ, ಸಚಿವರಾದ ಸಿ.ಸಿ.ಪಾಟೀಲ, ಹಾಲಪ್ಪ ಆಚಾರ್ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಗದೀಶ ಶೆಟ್ಟರ್ ಸೇರಿದಂತೆ ಪಕ್ಷದ ಶಾಸಕರು ಹಲವು ಬಾರಿ ಓಡಾಡಿ ಮತ ಯಾಚಿಸಿದ್ದರು.

ಅಡ್ಡಿಯಾಗದ ಆರೋಪಗಳು: ಚುನಾ ವಣೆ ಸಮೀಪಿಸುತ್ತಿದ್ದಂತೆ ಬಸವರಾಜ ಹೊರಟ್ಟಿ ಹಾಗೂ ಬಸವರಾಜ ಗುರಿಕಾರ ಪರ ಬೆಂಬಲಿಗರ ಆರೋಪ ಮತ್ತು ಪ್ರತ್ಯಾರೋಪಗಳು ತಾರಕಕ್ಕೇರಿದ್ದವು. ಜತೆಗೆ ಧಾರವಾಡ ತಾಲ್ಲೂಕಿನ ಮುಗದ ದಲ್ಲಿರುವ ಸರ್ವೋ ದಯ ಶಿಕ್ಷಣ ಟ್ರಸ್ಟ್‌ಗೆ ಸಂಬಂಧಿಸಿದಂತೆ ಹೊರಟ್ಟಿ ಹಾಗೂ ವಾಲ್ಮೀಕಿ ಸಮುದಾಯದ ವ್ಯಾಜ್ಯವೂ ಚುನಾವಣೆ ಸಂದರ್ಭದಲ್ಲಿ ಚರ್ಚೆ ಹುಟ್ಟುಹಾಕಿತ್ತು. ಆರಂಭದಲ್ಲಿ ಮೋಹನ ಲಿಂಬಿ ಕಾಯಿ ಅವರೇ ಬಿಜೆಪಿ ಅಭ್ಯರ್ಥಿ ಎಂದು ಹೇಳಲಾಗಿತ್ತು. ಆದರೆ
ಹೊರಟ್ಟಿ ಪಕ್ಷ ಸೇರ್ಪಡೆಯಿಂದ ಬಿಜೆಪಿಯೊಳಗಿನ ಬಂಡಾಯದ ಬಿಸಿ ತಾಕಬಹುದು ಎಂಬ ಲೆಕ್ಕಾಚಾರವೂ ಮೇಲುಕೆಳಗಾಯಿತು. ಕೋಮುವಾದಿ ಪಕ್ಷ ಸೇರಿದ ಆರೋಪ, ಪಠ್ಯಪುಸ್ತಕ ವಿವಾದ ಹೀಗೆ ವಿರೋಧಿಗಳ ಹಲವು ಆರೋಪಗಳುಹೊರಟ್ಟಿ(ಶೇ 59.47 ರಷ್ಟು ಮತ ಗಳಿಕೆ) ಗೆಲುವಿಗೆ ಅಡ್ಡಿಮಾಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.