ADVERTISEMENT

ಮೈಸೂರು ದಸರಾ ಈ ಬಾರಿಯೂ ಸರಳ: ಸಿ.ಎಂ. ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 20:27 IST
Last Updated 3 ಸೆಪ್ಟೆಂಬರ್ 2021, 20:27 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉನ್ನತ ಮಟ್ಟದ ಸಮಿತಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ದಸರಾ ಕುರಿತ ಸ್ಮರಣಿಕೆ ಬಿಡುಗಡೆಗೊಳಿಸಲಾಯಿತು. ಸಹಕಾರ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಇದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉನ್ನತ ಮಟ್ಟದ ಸಮಿತಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ದಸರಾ ಕುರಿತ ಸ್ಮರಣಿಕೆ ಬಿಡುಗಡೆಗೊಳಿಸಲಾಯಿತು. ಸಹಕಾರ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಇದ್ದರು.   

ಬೆಂಗಳೂರು: ನಾಡಹಬ್ಬ ಮೈಸೂರು ದಸರಾ ಉತ್ಸವವನ್ನು ಕಳೆದ ಬಾರಿಯಂತೆ ಈ ವರ್ಷವೂ ಸರಳ ಮತ್ತು ಸಾಂಪ್ರದಾಯಿಕವಾಗಿ ನಡೆಸಲು ಉನ್ನತ ಮಟ್ಟದ ಸಮಿತಿ ನಿರ್ಧರಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಈ ಸಭೆಯಲ್ಲಿ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್, ಕೋವಿಡ್‌ ಇರುವುದರಿಂದ ಕಳೆದ ವರ್ಷದಂತೆಯೇ ಕನಿಷ್ಠ ಜನರ ಭಾಗವಹಿಸುವಿಕೆಯ ಮೂಲಕ ದಸರಾ ಆಚರಿಸಲಾಗುವುದು. ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯಿಂದ ಹಿಡಿದು ಒಂಬತ್ತು ದಿನಗಳೂ ಎಲ್ಲ ಕಾರ್ಯಕ್ರಮಗಳು ಸರಳವಾಗಿ ನಡೆಯಲಿವೆ ಎಂದರು.

ADVERTISEMENT

ದಸರಾ ಮಹೋತ್ಸವದ ಉದ್ಘಾಟಕರು ಯಾರು ಎಂಬುದನ್ನು ತೀರ್ಮಾನಿಸುವ ಅಧಿಕಾರ ಮುಖ್ಯಮಂತ್ರಿಯವರಿಗೆ ನೀಡಲಾಗಿದೆ. ಕಳೆದ ವರ್ಷ ಉದ್ಘಾಟನೆ ದಿನ 150, ಒಂಬತ್ತು ದಿನಗಳ ಕಾರ್ಯಕ್ರಮಗಳಲ್ಲಿ ತಲಾ 50 ಮತ್ತು ಅರಮನೆ ಒಳಗೇ ನಡೆದ ಜಂಬೂಸವಾರಿಯಲ್ಲಿ 300 ಜನರಿಗೆ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಈ ವರ್ಷವೂ ಅಷ್ಟೇ ಜನರ ಭಾಗವಹಿಸುವಿಕೆಗೆ ಒಪ್ಪಿಗೆ ನೀಡಲಾಗಿದೆ. ಸೆಪ್ಟೆಂಬರ್‌ 15 ರ ಬಳಿಕ ಇನ್ನೊಂದು ಸಭೆ ನಡೆಸಿ, ಕೋವಿಡ್‌ ಪ್ರಮಾಣ ಕಡಿಮೆ ಇದ್ದರೆ, ಈಗ ನಿರ್ಧರಿಸಿದ್ದಕ್ಕಿಂತ ಎರಡು ಪಟ್ಟು ಹೆಚ್ಚು ಜನರ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ದಸರಾ ಸಂದರ್ಭದಲ್ಲಿ ದೀಪಾಲಂ ಕಾರ ವ್ಯವಸ್ಥೆ ಮಾಡಲಾಗುವುದು. ಒಂಬತ್ತು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಲಿದೆ. ಕಳೆದ ದಸರಾದ ಬಾಕಿ ₹8 ಕೋಟಿಯನ್ನು ಪಾವತಿ ಮಾಡಲು ಮುಖ್ಯಮಂತ್ರಿಯವರು ಸೂಚಿಸಿದ್ದಾರೆ. ಈ ವರ್ಷಮೈಸೂರು, ಚಾಮರಾಜನಗರ ಹಾಗೂ ಶ್ರೀರಂಗ ಪಟ್ಟಣದಲ್ಲಿ ದಸರಾ ಆಚರಣೆ ನಡೆಸಲು ₹6 ಕೋಟಿ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಸೋಮಶೇಖರ್‌ ತಿಳಿಸಿದರು.

ಪ್ರವಾಸೋದ್ಯಮ ಸರ್ಕೀಟ್‌ಗೆ ಚಿಂತನೆ: ಬೊಮ್ಮಾಯಿ
ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡಂತೆ ಪ್ರವಾಸೋದ್ಯಮ ಸರ್ಕೀಟ್ ರಚಿಸಬೇಕು ಎಂದು ಮೂರು ಜಿಲ್ಲೆಗಳ ಜನಪ್ರತಿನಿಧಿಗಳು ಮನವಿ ಮಾಡಿದ್ದು, ಆ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಳೆದ ಎರಡು ವರ್ಷಗಳಿಂದ ಕೋವಿಡ್‌ನಿಂದಾಗಿ ಮೈಸೂರಿನಲ್ಲಿ ಆರ್ಥಿಕ ಚಟುವಟಿಕೆಗಳು ನಿಂತು ಹೋಗಿದೆ. ಅದನ್ನೇ ಅವಲಂಬಿಸಿಕೊಂಡು ಬದುಕು ಸಾಗಿಸುತ್ತಿರುವವರಿಗೆ ತೊಂದರೆ ಆಗಿದೆ. ಇದನ್ನು ಸರಿಪಡಿಸಲು ಮುಂಬರುವ ದಿನಗಳಲ್ಲಿ ಸಂಬಂಧಪಟ್ಟವರ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.

ಕಳೆದ ವರ್ಷ ದಸರಾ ಮುಗಿದ ಮಾರನೇ ದಿನವೇ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಅವರು ಆಗಿನ ಖರ್ಚು–ವೆಚ್ಚಗಳ ಲೆಕ್ಕವನ್ನು ಒಪ್ಪಿಸಿದ್ದರು. ಇನ್ನು ಮುಂದೆ ಇದೇ ಪರಂಪರೆ ಮುಂದುವರಿಯಲಿದೆ ಎಂದು ಬೊಮ್ಮಾಯಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.