ADVERTISEMENT

ಸಕಾಲಕ್ಕೆ ನಡೆಸದ ತಾ.ಪಂ, ಜಿ.ಪಂ ಚುನಾವಣೆ: ₹1,279 ಕೋಟಿ ಅನುದಾನಕ್ಕೆ ಕತ್ತರಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 18:06 IST
Last Updated 16 ಡಿಸೆಂಬರ್ 2025, 18:06 IST
<div class="paragraphs"><p>ಚುನಾವಣೆ</p></div>

ಚುನಾವಣೆ

   

ನವದೆಹಲಿ: ಕರ್ನಾಟಕ ಸರ್ಕಾರವು ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ಸಕಾಲಕ್ಕೆ ನಡೆಸದ ಕಾರಣ 15ನೇ ಹಣಕಾಸು ಆಯೋಗದ ₹1,279 ಕೋಟಿ ಅನುದಾನಕ್ಕೆ ಕತ್ತರಿ ಬಿದ್ದಿದೆ. 

ಲೋಕಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್‌.ಮಂಜುನಾಥ್ ಕೇಳಿರುವ ಪ್ರಶ್ನೆಗೆ ಕೇಂದ್ರ ಪಂಚಾಯತ್‌ರಾಜ್ ಸಚಿವ ರಾಜೀವ್ ರಂಜನ್ ಸಿಂಗ್‌ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ಇದೆ. 

ADVERTISEMENT

15ನೇ ಹಣಕಾಸು ಆಯೋಗದ ಅನುದಾನಗಳ ಅನುಷ್ಠಾನಕ್ಕಾಗಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 2021ರಲ್ಲೇ ಮಾರ್ಗಸೂಚಿ ನೀಡಲಾಗಿತ್ತು. ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಕಾಲಿಕ ಚುನಾವಣೆಗಳನ್ನು ನಡೆಸಿದರೆ ಮಾತ್ರ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎನ್ನುತ್ತದೆ ನಿಯಮ. ಕರ್ನಾಟಕ ಸರ್ಕಾರವು 2020-21 ರಿಂದ ತಾಲ್ಲೂಕು ಪಂಚಾಯಿತಿಗಳು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ  ಚುನಾವಣೆಗಳನ್ನು ನಡೆಸದ ಕಾರಣ ಅನುದಾನ ತಡೆ ಹಿಡಿಯಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

ಹಣಕಾಸು ಆಯೋಗವು ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ₹13,184 ಕೋಟಿ ಹಂಚಿಕೆ ಮಾಡಿತ್ತು. ಇಲ್ಲಿಯವರೆಗೆ ₹11,905 ಕೋಟಿ ಮಾತ್ರ ಕೊಟ್ಟಿದೆ.

‌‘ಸಂವಿಧಾನದ 243 ಇ ವಿಧಿಯ ಪ್ರಕಾರ, ಪಂಚಾಯತ್‌ರಾಜ್‌ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆ ನಡೆಸುವುದು ರಾಜ್ಯ ಸರ್ಕಾರಗಳ ಹೊಣೆ. ಚುನಾವಣೆ ನಡೆಸಲು ಅಡ್ಡಿಯಾಗಿರುವ ಆಡಳಿತಾತ್ಮಕ ತೊಡಕುಗಳನ್ನು ನಿವಾರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಹಲವು ಸಲ ಸಲಹೆ ನೀಡಲಾಗಿತ್ತು. ಆದರೂ, ಈವರೆಗೆ ಚುನಾವಣೆ ನಡೆಸಿಲ್ಲ. ಉಳಿದ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ’ ಎಂದು ಪಂಚಾಯತ್‌ರಾಜ್ ಸಚಿವಾಲಯ ಸ್ಪಷ್ಟಪಡಿಸಿದೆ. 

‘ಸಂವಿಧಾನದ 243-ಕೆ ವಿಧಿಯು ರಾಜ್ಯ ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿ ಪರಿಷ್ಕರಣೆ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣಕ್ಕಾಗಿ ಅಧಿಕಾರ ನೀಡಿದೆ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ. ಆದರೆ, ಈ ವಿಧಿಯಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಕ್ಷೇತ್ರಗಳ ಮೀಸಲಾತಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ’ ಎಂದು ತಿಳಿಸಿದ್ದಾರೆ. 

ಕೋವಿಡ್, ವಿಧಾನಸಭೆ ಹಾಗೂ ಲೋಕಸಭೆಯ ಚುನಾವಣೆಗಳು ಸೇರಿದಂತೆ ಕೆಲವು ಅನಿವಾರ್ಯ ಕಾರಣಗಳಿಂದಾಗಿ 2020-21ರಿಂದ ತಾಲ್ಲೂಕು ಪಂಚಾಯಿತಿಗಳು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಚುನಾವಣೆಗಳನ್ನು ನಡೆಸಿಲ್ಲ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ. ಆದಾಗ್ಯೂ, ತಾಲ್ಲೂಕು ಪಂಚಾಯಿತಿಗಳು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ಹೀಗಾಗಿ, ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಯಾವುದೇ ಅಡಚಣೆಯಾಗಿಲ್ಲ ಎಂದೂ ಸ್ಪಷ್ಟಪಡಿಸಿದೆ
ಎಂದು ಅವರು ಹೇಳಿದ್ದಾರೆ.

ಆಯೋಗದ ಸ್ವಾಯತ್ತತೆಗೆ ಧಕ್ಕೆ ಆಗಿಲ್ಲ:  

‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ– 1993’ಕ್ಕೆ ಇತ್ತೀಚೆಗೆ ಮಾಡಿರುವ ತಿದ್ದುಪಡಿಗಳಿಂದಾಗಿ ರಾಜ್ಯ ಚುನಾವಣಾ ಆಯೋಗದ ಸಾಂವಿಧಾನಿಕ ಅಧಿಕಾರಗಳು ಮತ್ತು ಸ್ವಾಯತ್ತತೆಗೆ ಧಕ್ಕೆ ಆಗಿಲ್ಲ ಎಂದು ರಾಜೀವ್ ರಂಜನ್ ಸಿಂಗ್‌ ತಿಳಿಸಿದ್ದಾರೆ. 

 ‘ಸಂವಿಧಾನದ 243-ಕೆ ವಿಧಿಯು ರಾಜ್ಯ ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿ ಪರಿಷ್ಕರಣೆ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣಕ್ಕಾಗಿ ಅಧಿಕಾರ ನೀಡಿದೆ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ. ಆದರೆ, ಈ ವಿಧಿಯಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಕ್ಷೇತ್ರಗಳ ಮೀಸಲಾತಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ’ ಎಂದು ತಿಳಿಸಿದ್ದಾರೆ. 

ಕೋವಿಡ್, ವಿಧಾನಸಭೆ ಹಾಗೂ ಲೋಕಸಭೆಯ ಚುನಾವಣೆಗಳು ಸೇರಿದಂತೆ ಕೆಲವು ಅನಿವಾರ್ಯ ಕಾರಣಗಳಿಂದಾಗಿ 2020-21ರಿಂದ ತಾಲ್ಲೂಕು ಪಂಚಾಯಿತಿಗಳು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಚುನಾವಣೆಗಳನ್ನು ನಡೆಸಿಲ್ಲ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ. ಆದಾಗ್ಯೂ, ತಾಲ್ಲೂಕು ಪಂಚಾಯಿತಿಗಳು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ಹೀಗಾಗಿ, ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಯಾವುದೇ ಅಡಚಣೆಯಾಗಿಲ್ಲ ಎಂದೂ ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದ್ದಾರೆ. 

ಐದು ವರ್ಷಗಳಿಂದ ಜನಪ್ರತಿನಿಧಿಗಳಿಲ್ಲ

ರಾಜ್ಯದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ 2016ರ ಏಪ್ರಿಲ್‌ನಲ್ಲಿ ಚುನಾವಣೆ ನಡೆದಿತ್ತು. ಚುನಾಯಿತ ಸದಸ್ಯರ ಅವಧಿ 2021ರ ಏಪ್ರಿಲ್ 27ರಂದು ಮುಕ್ತಾಯವಾಗಿತ್ತು. ಚುನಾವಣೆ ನಡೆಸಲು ಸಿದ್ಧತೆ ಆರಂಭಿಸಿದ್ದ ಚುನಾವಣಾ ಆಯೋಗವು ಕ್ಷೇತ್ರ ಪುನರ್‌ವಿಂಗಡಣೆ ಮಾಡಿ ಮತದಾರರ ಅಂತಿಮ ಪಟ್ಟಿ ಹಾಗೂ ಮೀಸಲಾತಿ ಕರಡನ್ನು ಪ್ರಕಟಿಸಿತ್ತು. ಆದರೆ, ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರ ಕ್ಷೇತ್ರ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ಅಧಿಕಾರವನ್ನು ಆಯೋಗದಿಂದ ಹಿಂಪಡೆದಿತ್ತು.

ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯ್ದೆಗೆ ತಿದ್ದುಪಡಿ ತಂದು ‘ಕರ್ನಾಟಕ ಪಂಚಾಯತ್‌ ರಾಜ್ ಸೀಮಾ ನಿರ್ಣಯ ಆಯೋಗ’ಕ್ಕೆ ಆ ಅಧಿಕಾರವನ್ನು ನೀಡಿತ್ತು. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ವಿಳಂಬದ ವಿರುದ್ಧ ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್‌ ಮೊರೆ ಹೋಗಿತ್ತು. ಕ್ಷೇತ್ರಗಳ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ನಿಗದಿ
ಪ್ರಕ್ರಿಯೆಯನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ 2023ರ ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿತ್ತು.

ನಂತರ ಕ್ಷೇತ್ರಗಳ ಪುನರ್‌ವಿಂಗಡಣೆ ಹಾಗೂ ಸದಸ್ಯರ ಸಂಖ್ಯೆ ನಿಗದಿಪಡಿಸಲು ಸರ್ಕಾರ ರಚಿಸಿದ್ದ ಆಯೋಗದ ಶಿಫಾರಸುಗಳನ್ನು ಅಂಗೀಕರಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಅಧಿಸೂಚನೆ ಹೊರಡಿಸಿತ್ತು. ಆದರೆ, ಮೀಸಲಾತಿ ನಿಗದಿ ಅಂತಿಮಗೊಳಿಸಿರಲಿಲ್ಲ.

ಪಂಚಾಯತ್‌ರಾಜ್‌ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆ ನಡೆಸುವುದು ರಾಜ್ಯ ಸರ್ಕಾರದ ಹೊಣೆ. ಜಿಲ್ಲಾ ಹಾಗೂ ತಾಲ್ಲೂಕು ಪ‍ಂಚಾಯಿತಿಗಳಿಗೆ ಚುನಾವಣೆ ನಡೆಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕರ್ನಾಟಕ ಸರ್ಕಾರಕ್ಕೆ ಸಲಹೆ ನೀಡಲಾಗಿದೆ
ರಾಜೀವ್‌ ರಂಜನ್ ಸಿಂಗ್‌, ಪಂಚಾಯತ್‌ರಾಜ್ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.