ADVERTISEMENT

ಮುನಿಸಿಕೊಂಡ ಬಿಜೆಪಿ ಕಾರ್ಯಕರ್ತರು: ಗೆಲುವು ಸಾಧಿಸಲು ಬಿಎಸ್‌ವೈ ರಣತಂತ್ರ

ಸೋಮವಾರ ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2019, 22:19 IST
Last Updated 15 ನವೆಂಬರ್ 2019, 22:19 IST
ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ಅನರ್ಹಗೊಂಡಿರುವ ಶಾಸಕರಿಗೆ ಟಿಕೆಟ್‌ ಪ್ರಕಟಿಸಿದ ಬೆನ್ನಲ್ಲೇ ಬಿಜೆಪಿಯಲ್ಲಿ ಆಂತರಿಕ ಬೇಗುದಿ ಮತ್ತಷ್ಟು ಉಲ್ಬಣಿಸಿದೆ. ಅಭ್ಯರ್ಥಿಗಳ ಪರ ಕೆಲಸ ಮಾಡುವುದಿಲ್ಲ ಎಂದು ಕೆಲವು ಕ್ಷೇತ್ರಗಳಲ್ಲಿ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಸೋಮವಾರ 14 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ. ಯಶವಂತಪುರ ಕ್ಷೇತ್ರದ ಅಭ್ಯರ್ಥಿ ಎಸ್‌.ಟಿ.ಸೋಮಶೇಖರ್‌ ಮಾತ್ರ ಶನಿವಾರ ನಾಮಪತ್ರ ಸಲ್ಲಿಸುವರು.

ಟಿಕೆಟ್‌ ಸಿಗದೇ ಮುನಿಸಿಕೊಂಡಿದ್ದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಅನರ್ಹ ಶಾಸಕ ಆರ್‌.ಶಂಕರ್‌ ಮನವೊಲಿಸುವ ಕೆಲಸದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕಡೆಗೂ ಯಶಸ್ವಿಯಾಗಿದ್ದಾರೆ. 15 ಕ್ಷೇತ್ರಗಳನ್ನೂ ಗೆದ್ದೇ ತೀರಬೇಕು ಎಂದು ಹಠಕ್ಕೆ ಬಿದ್ದಿರುವ ಅವರು, ಅದಕ್ಕೆ ಪೂರಕವಾಗಿ ಕಾರ್ಯತಂತ್ರವನ್ನು ರೂಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಅನರ್ಹ ಶಾಸಕರ ಪಕ್ಷ ಸೇರ್ಪಡೆ ಕಾರ್ಯಕ್ರಮದಿಂದ ದೂರ ಉಳಿದು ಅಸಮಾಧಾನ ಹೊರ ಹಾಕಿದ್ದ ಲಕ್ಷ್ಮಣ ಸವದಿ ಜತೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಿ, ಮನವೊಲಿಸಿದರು. ಪಕ್ಷದ ಅಭ್ಯರ್ಥಿ ಮಹೇಶ್‌ ಕುಮಠಳ್ಳಿ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಸವದಿಗೆ ನೀಡಲಾಗಿದೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ವಹಿಸಿದ ಕೆಲಸ ಮಾಡುವುದಾಗಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಸವದಿಗೆ ಟಿಕೆಟ್‌ ನೀಡದೇ ಇರುವುದನ್ನು ಪ್ರತಿಭಟಿಸಲು ಅವರ ಬೆಂಬಲಿಗರು ನಿರ್ಧರಿಸಿದ್ದರು. ಆದರೆ, ಹೋರಾಟ ಕೈ ಬಿಡುವಂತೆ ಸ್ವತಃ ಸವದಿ ಅವರೇ ಮನವೊಲಿಸಿದ್ದರಿಂದ ಅದನ್ನು ಕೈಬಿಡಲಾಯಿತು. ಕುಮಠಳ್ಳಿ ಗೆದ್ದರೆ ಮುಂದೆ ತಾವು ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆಯನ್ನೂ ಅವರು ಯಡಿಯೂರಪ್ಪ ಅವರಿಗೆ ಕೇಳಿದರು ಎಂದು ಮೂಲಗಳು ಹೇಳಿವೆ.

ರಾಣೆಬೆನ್ನೂರು ಟಿಕೆಟ್‌ ಆಕಾಂಕ್ಷಿಯಾಗಿದ್ದ ಆರ್‌.ಶಂಕರ್‌ ಅಲ್ಲಿ ಸೋಲುವ ಸಾಧ್ಯತೆ ಹೆಚ್ಚು ಎಂಬ ಕಾರಣಕ್ಕೆ ಬಿಜೆಪಿಯ ಅರುಣ್‌ಕುಮಾರ್‌ ಎಂಬುವರಿಗೆ ಟಿಕೆಟ್‌ ನೀಡಲಾಗಿದೆ. ಆರಂಭದಲ್ಲಿ ಕಣದಿಂದ ಹಿಂದಕ್ಕೆ ಸರಿಯಲು ಒಪ್ಪಿದ್ದ ಶಂಕರ್‌, ಕಾರ್ಯಕರ್ತರ ಆಗ್ರಹದಿಂದ ಟಿಕೆಟ್‌ಗಾಗಿ ಮತ್ತೊಮ್ಮೆ ಯಡಿಯೂರಪ್ಪ ಅವರಿಗೆ ದುಂಬಾಲು ಬಿದ್ದರು. ಅವರ ಬೆಂಬಲಿಗರು ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಲು ಬಂದಿದ್ದರು. ‘ನಿಮ್ಮನ್ನು ಯಾವುದೇ ಕಾರಣಕ್ಕೂ ಕೈಬಿಡುವ ಪ್ರಶ್ನೆ ಇಲ್ಲ, ವಿಧಾನಪರಿಷತ್‌ಗೆ ನೇಮಿಸಿ, ಸಚಿವರನ್ನಾಗಿ ಮಾಡುತ್ತೇನೆ’ ಎಂದು ಯಡಿಯೂರಪ್ಪ ಭರವಸೆ ನೀಡಿದರು.

ಹೊಸ ತಿರುವು: ‘ಡಿಸೆಂಬರ್‌ 9ರ ಬಳಿಕ ರಾಜ್ಯ ರಾಜಕೀಯಕ್ಕೆ ಹೊಸ ತಿರುವು ಸಿಗಲಿದೆ. ಮುಂದಿನ ಮೂರುವರೆ ವರ್ಷ ಸ್ವತಂತ್ರ ಸುಭದ್ರ ಸರ್ಕಾರ ನೀಡುತ್ತೇವೆ. ಉಪಚುನಾವಣೆಯಲ್ಲಿ 15 ಸ್ಥಾನಗಳನ್ನೂ ಗೆಲ್ಲುತ್ತೇವೆ. ರೋಷನ್‌ಬೇಗ್‌ ಪಕ್ಷೇತರರಾಗಿ ಸ್ಪರ್ಧಿಸುವುದು ಅವರ ಸ್ವಂತ ವಿಚಾರ’ ಎಂದೂ ಯಡಿಯೂರಪ್ಪ ತಿಳಿಸಿದರು.

ವಿಜಯನಗರ (ಹೊಸಪೇಟೆ) ಕ್ಷೇತ್ರದಲ್ಲಿ ಆನಂದ್‌ ಸಿಂಗ್‌ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಪರ ಕೆಲಸ ಮಾಡುವುದಿಲ್ಲ ಎಂದು ಶುಕ್ರವಾರ ಪಕ್ಷದ ಸಭೆಯಲ್ಲಿ ಗದ್ದಲ ಎಬ್ಬಿಸಿದ ಘಟನೆ ನಡೆದಿದೆ.

ಅರುಣ್‌ಕುಮಾರ್ ಯಾರು?
ಹಾವೇರಿ:
ರಾಣೆಬೆನ್ನೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದಿರುವ ಅರುಣ್ ಕುಮಾರ್ ಪೂಜಾರ್, ಮಾಕನೂರು ಕ್ರಾಸ್ ಬಳಿ ಇಟ್ಟಿಗೆ ಭಟ್ಟಿ ನಡೆಸುತ್ತಾರೆ. ಅವರ ಪತ್ನಿ ಮಂಗಳಗೌರಿ ಪೂಜಾರ್ ಹಾವೇರಿ ಜಿಲ್ಲಾ ಪಂಚಾಯತ್ ಸದಸ್ಯೆ.

2013ರ ಚುನಾವಣೆಯಲ್ಲಿ ಬಿಜೆಪಿ ಇಬ್ಭಾಗವಾಗಿದ್ದರಿಂದ, ರಾಣೆಬೆನ್ನೂರಿನಲ್ಲಿ ಕಮಲ ಪಾಳೆಯದಿಂದ ಗೆದ್ದಿದ್ದ ಜಿ.ಶಿವಣ್ಣ ಕೆಜೆಪಿ ಸೇರಿದ್ದರು. ಇದರಿಂದಾಗಿ ಅರುಣ್‌ಗೆ ಬಿಜೆಪಿಯಿಂದ ಕಣಕ್ಕಿಳಿಯುವ ಅವಕಾಶ ಸಿಕ್ಕಿತ್ತು. ಆಗ ಕೇವಲ 9,496 ಮತಗಳನ್ನು ಪಡೆದಿದ್ದರು.

ಈಗ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿತ್ತಾದರೂ, ಕ್ಷೇತ್ರದಲ್ಲಿಲಿಂಗಾಯತ ಸಮುದಾಯದ ಪ್ರಭಾವ ಹೆಚ್ಚಿರುವ ಕಾರಣದಿಂದ ಅದೇ ಸಮುದಾಯದ ಅರುಣ್‌ಗೆ ಟಿಕೆಟ್ ನೀಡಲಾಗಿದೆ. ಅಲ್ಲದೇ, ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿ ‘ಹೊರಗಿನವರಿಗೆ ಮಣೆ ಹಾಕುವುದು ಬೇಡ’ ಎಂಬ ತೀರ್ಮಾನದಿಂದ ಸ್ಥಳೀಯ ಮುಖಂಡನನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಚುನಾವಣೆ ಪಾವಿತ್ರ್ಯ ಹಾಳು’
ಹಾಸನ:
‘ಅನರ್ಹರಾದ ಹದಿನೈದು ಮಂದಿ ಶಾಸಕರನ್ನೂ ಮಂತ್ರಿ ಮಾಡುವುದಾಗಿ ಹುಯಿಲೆಬ್ಬಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಚುನಾವಣೆಯ ಪಾವಿತ್ರ್ಯ ಹಾಳು ಮಾಡಲು ಹೊರಟಿದ್ದಾರೆ’ ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಶುಕ್ರವಾರ ಇಲ್ಲಿ ಕಿಡಿ ಕಾರಿದರು.

‘ಯಡಿಯೂರಪ್ಪ ಅವರಿಗೆ ಸೋಲುವ ಭೀತಿ ಇದೆ. ಹೀಗಾಗಿ, ಇಂಥ ಹೇಳಿಕೆಯಿಂದ ಮತದಾರರ ಬ್ರೈನ್ ವಾಶ್ ಮಾಡಲು ಹೊರಟಿರುವುದು ದುರದೃಷ್ಟಕರ. ಅನರ್ಹ ಶಾಸಕರನ್ನು ಮಂತ್ರಿ ಮಾಡುತ್ತೇನೆಂದರೆ ಜನರು ವೋಟ್‌ ಮಾಡುತ್ತಾರೆ ಎಂದುಕೊಂಡು ಹೀಗೆಲ್ಲ ಮಾಡುತ್ತಿದ್ದಾರೆ. ಜನರಿಗೆ ಆಸೆ ತೋರಿಸಿ ಗೆಲ್ಲುವ ತಂತ್ರಗಾರಿಕೆ ಇದು’ ಎಂದರು.

‘ಡಿ. 5 ರಂದು ನಡೆಯುವ ಉಪ ಚುನಾವಣೆಯಲ್ಲಿ ಎಲ್ಲಾ ಕಡೆ ಸ್ಪರ್ಧೆ ಮಾಡಲು ಸಿದ್ಧರಾಗಿದ್ದು, ಉಪ ಕದನದಲ್ಲಿ ಎಲ್ಲಾ ಕಡೆ ಪ್ರಚಾರ ಮಾಡುತ್ತೇನೆ’ ಎಂದರು.

ಈ ನಡುವೆ ಸುಪ್ರೀಂ ಕೋರ್ಟ್ ನಿಲುವಿಗೂ ಅಸಮಾಧಾನ ವ್ಯಕ್ತ ಪಡಿಸಿದ ದೇವೇಗೌಡರು, ‘ಒಂದೆಡೆ ಅನರ್ಹತೆ ಎತ್ತಿ ಹಿಡಿಯುತ್ತದೆ. ಮತ್ತೊಂದೆಡೆ ಚುನಾವಣೆ ಸ್ಪರ್ಧೆಗೆ ಅವಕಾಶ ನೀಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.