ADVERTISEMENT

ಬಿಜೆಪಿಯಲ್ಲಿ ಗುಂಪುಗಾರಿಕೆ?: ಕತ್ತಿ ಜತೆ ಸಮಾಲೋಚನೆ ನಡೆಸಿದ ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 19:40 IST
Last Updated 18 ಫೆಬ್ರುವರಿ 2020, 19:40 IST
ಜಗದೀಶ ಶೆಟ್ಟರ್
ಜಗದೀಶ ಶೆಟ್ಟರ್   

ಬೆಂಗಳೂರು: ಸಚಿವ ಸ್ಥಾನ ಸಿಗದೇ ಅತೃಪ್ತರಾಗಿರುವ ಕೆಲವು ಬಿಜೆಪಿ ಶಾಸಕರು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮನೆಯಲ್ಲಿ ಸೋಮವಾರ ರಾತ್ರಿ ಸಭೆ ನಡೆಸಿರುವುದು ಪಕ್ಷದಲ್ಲಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

‘ಶೆಟ್ಟರ್ ಮನೆಯಲ್ಲಿ ನಡೆದ ಸಭೆ ಮೊದಲನೆಯದಲ್ಲ. ಲಿ–ಮೆರಿಡಿಯನ್ ಹೋಟೆಲ್‌ನಲ್ಲಿ ಒಮ್ಮೆ ಹಾಗೂ ಶೆಟ್ಟರ್ ಮನೆಯಲ್ಲಿ ಮತ್ತೊಮ್ಮೆ ಸಭೆ ನಡೆದಿತ್ತು. ಬಿಜೆಪಿಯಲ್ಲಿ ಗುಂಪುಗಾರಿಕೆ ಶುರುವಾಗಿರುವುದಕ್ಕೆ ಇದು ಸಣ್ಣ ಸುಳಿವು’ ಎಂದು ಆ ಪಕ್ಷದ ಹಿರಿಯ ಶಾಸಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಶೆಟ್ಟರ್‌ಗೆ ತಾವು ಹೊಂದಿರುವ ಖಾತೆ ಮೇಲೆ ಒಲವಿಲ್ಲ. ಕಂದಾಯ ಅಥವಾ ಗ್ರಾಮೀಣಾಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ. ಸಂಪುಟ ಪುನರ್‌ರಚನೆ ವೇಳೆ ಸಚಿವ ಸ್ಥಾನ ಕೈತಪ್ಪುವ ಭೀತಿಯೂ ಇದೆ. ಈ ಕಾರಣಕ್ಕೆ ತಮ್ಮ ಬಲ ಒಗ್ಗೂಡಿಸಲು ಮುಂದಾಗಿದ್ದಾರೆ ಎಂಬ ಚರ್ಚೆಯೂ ನಡೆಯುತ್ತಿದೆ’ ಎಂದು ಅವರು ವಿವರಿಸಿದರು.

ADVERTISEMENT

ಮಾಧ್ಯಮದಲ್ಲಿ ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ಸಚಿವರಾದ ಲಕ್ಷ್ಮಣ ಸವದಿ, ವಿ. ಸೋಮಣ್ಣ ಅವರ ಜತೆ ಮಂಗಳವಾರ ಬೆಳಿಗ್ಗೆಯೇ ಯಡಿಯೂರಪ್ಪ ಮನೆಗೆ ಧಾವಿಸಿದ ಶೆಟ್ಟರ್‌, ಸಭೆಯ ಬಗ್ಗೆ ವಿವರ ನೀಡುವ ಯತ್ನ ಮಾಡಿದರು. ‘ಮಾಧ್ಯಮದವರಿಗೂ ಬ್ರೇಕಿಂಗ್ ಸುದ್ದಿ ಬೇಕು. ಮಾಡಿಕೊಳ್ಳಲಿ ಬಿಡಿ’ ಎಂದು ಯಡಿಯೂರಪ್ಪ ಅವರು ಶೆಟ್ಟರ್‌ಗೆ ಹೇಳಿದರು ಎಂದು ಗೊತ್ತಾಗಿದೆ.

ಕತ್ತಿ ಜತೆ ಸಭೆ: ಕಲಾಪದ ವೇಳೆ ಉಮೇಶ ಕತ್ತಿ ಅವರನ್ನು ಕರೆಸಿಕೊಂಡ ಯಡಿಯೂರಪ್ಪ ಕೆಲಹೊತ್ತು ಚರ್ಚಿಸಿದರು. ‘ವಿಸ್ತರಣೆ ವೇಳೆಯೇ ನಿನ್ನನ್ನು ಸಚಿವನನ್ನಾಗಿ ಮಾಡಬೇಕಿತ್ತು. ಸ್ವಪಕ್ಷೀಯರೇ ವಿರೋಧಿಸಿದ್ದರಿಂದಾಗಿ ನಿನ್ನನ್ನು ಸೇರಿಸಿಕೊಳ್ಳಲು ಆಗಿಲ್ಲ. ವಾರವೋ ತಿಂಗಳೋ ನಿನ್ನನ್ನು ಸಚಿವನನ್ನಾಗಿ ಮಾಡುವೆ. ಪಕ್ಷದ ಹೈಕಮಾಂಡ್‌ ಈಗ ಬಲಿಷ್ಠವಾಗಿದೆ. ಗುಂಪುಗಾರಿಕೆ ಮಾಡಿದರೆ ಸಹಿಸುವುದಿಲ್ಲ’ ಎಂದು ಕಿವಿಮಾತು ಹೇಳಿದರು ಎಂದು ತಿಳಿದುಬಂದಿದೆ.

ಈ ಮಧ್ಯೆಯೇ, ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮೊಕ್ಕಾಂ ಮಾಡಿದ್ದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಲಕ್ಷ್ಮಣ ಸವದಿ, ವಿ. ಸೋಮಣ್ಣ ಭೇಟಿಯಾಗಿ ಚರ್ಚಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ‘ಪರಿಷತ್ತಿಗೆ
ಆಯ್ಕೆ ಮಾಡಿದ ಕಾರಣಕ್ಕೆ ಧನ್ಯವಾದ ಹೇಳಲು ಸವದಿ ಅವರು ಸೌಜನ್ಯದ ಭೇಟಿ ಮಾಡಿದ್ದಾರೆ. ಅದರಲ್ಲಿ ವಿಶೇಷವೇನಿಲ್ಲ’ ಎಂದು ಮೂಲಗಳು ಪ್ರತಿಪಾದಿಸಿವೆ.

ಎಲ್ಲ ಊಹಾಪೋಹ: ಶೆಟ್ಟರ್
‘ಇಲಾಖೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಪಕ್ಷದ ಕೆಲವು ಶಾಸಕರು ನನ್ನ ಮನೆಗೆ ಬಂದಿದ್ದರು. ಅದನ್ನೇ ಮುಂದಿಟ್ಟು ಗೊಂದಲ ಸೃಷ್ಟಿಸುವ ಕೆಲಸ ನಡೆಯುತ್ತಿದೆ’ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.

‘ಈ ಹಿಂದೆಯೂ ಶಾಸಕರು ಬಂದಿದ್ದರು. ಅಭಿವೃದ್ಧಿ ಕಾರ್ಯಗಳ ಬಗ್ಗೆ, ಇಲಾಖೆಯ ಯೋಜನೆ ಕುರಿತು ಅವರೊಂದಿಗೆ ಚರ್ಚೆ ನಡೆಸುತ್ತಾಬಂದಿದ್ದೇನೆ. ಮಾಧ್ಯಮಗಳಲ್ಲಿ ಬಂದಿರುವುದು ಊಹಾಪೋಹದ ಸುದ್ದಿ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.