ADVERTISEMENT

ಪಕ್ಷ ಕಟ್ಟುವ ಸುಳಿವು ಕೊಟ್ಟರೇ ಯತ್ನಾಳ? ಶಿಸ್ತುಕ್ರಮಕ್ಕೆ BJP ವರಿಷ್ಠರ ಹಿಂದೇಟು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2025, 23:30 IST
Last Updated 12 ಮಾರ್ಚ್ 2025, 23:30 IST
ಶಾಸಕ ಬಸನಗೌಡ ಪಾಟೀಲ ಯತ್ನಾಳ
ಶಾಸಕ ಬಸನಗೌಡ ಪಾಟೀಲ ಯತ್ನಾಳ   

ಬೆಂಗಳೂರು: ತಮ್ಮ ವಿರುದ್ಧ ಶಿಸ್ತುಕ್ರಮ ಕೈಗೊಂಡರೆ ಪ್ರಾದೇಶಿಕ ಪಕ್ಷ ರಚಿಸುವ ಎಚ್ಚರಿಕೆ ನೀಡಿದ್ದರಿಂದಲೇ, ಶಾಸಕ ಬಸನಗೌಡ ಪಾಟೀಲ ಯತ್ನಾಳರ ವಿರುದ್ಧ ಬಿಜೆಪಿ ವರಿಷ್ಠರು ಯಾವುದೇ ಕ್ರಮ ಜರುಗಿಸಿಲ್ಲ ಎಂಬ ಚರ್ಚೆ ಆ ಪಕ್ಷದಲ್ಲಿ ಬಿರುಸುಗೊಂಡಿದೆ.

ಆರ್‌ಎಸ್‌ಎಸ್‌ ಮುಖಂಡ ಸಿ.ಆರ್.ಮುಕುಂದ ಮತ್ತು ತಟಸ್ಥ ಬಣದ ನಾಯಕರು ಯತ್ನಾಳ ಜತೆ ಮಾತುಕತೆ ನಡೆಸಿದರು. ಈ ವೇಳೆ, ಯತ್ನಾಳ ಅವರು ಕೆಲವು ಅಂಶಗಳನ್ನು ಕಡ್ಡಿ ಮುರಿದಂತೆ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.

‘ನಾನು ಯಾವುದೇ ಕಾರಣಕ್ಕೂ ಬಿ.ವೈ.ವಿಜಯೇಂದ್ರ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧವಿಲ್ಲ. ಒಂದು ವೇಳೆ ಪಕ್ಷ ಉಚ್ಚಾಟನೆ ಮಾಡಿದರೆ, ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಹಲವು ಆಯ್ಕೆಗಳು ನನ್ನ ಮುಂದಿದೆ. ಉತ್ತರಕರ್ನಾಟಕ ಮತ್ತು ಕರಾವಳಿ ಕೇಂದ್ರಿತವಾಗಿ ಹಿಂದುತ್ವವನ್ನು ಸಿದ್ಧಾಂತವಾಗಿಸಿಕೊಂಡು ಪ್ರಾದೇಶಿಕ ಪಕ್ಷ ಕಟ್ಟುವ ಆಯ್ಕೆಯೂ ಇದೆ. ಪಕ್ಷ ಕಟ್ಟಿದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 60 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇನೆ ಎಂದು ಅವರು ಈ ಮಾತುಕತೆ ವೇಳೆ ತಿಳಿಸಿದ್ದಾರೆ. ಈ ಮಾಹಿತಿಯನ್ನು ಮುಕುಂದ ಅವರು ಕೇಂದ್ರದ ವರಿಷ್ಠರಿಗೆ ತಲುಪಿಸಿದ್ದಾರೆ. ಆ ಬಳಿಕ ಬಿಜೆಪಿ ವರಿಷ್ಠರು ಯತ್ನಾಳ ವಿರುದ್ಧ ಕ್ರಮ ಕೈಗೊಳ್ಳುವ ಚಿಂತನೆ ಕೈಬಿಟ್ಟಿದ್ದಾರೆ’ ಎಂದು ಮೂಲಗಳು ಹೇಳಿವೆ.

ADVERTISEMENT

ಈ ಮಧ್ಯೆ ಬುಧವಾರ ರಾತ್ರಿ ಯತ್ನಾಳ ಬಣ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಸಭೆ ನಡೆಸಿ, ನೋಟಿಸ್‌ ನೀಡಿದ ನಂತರದ ವಿದ್ಯಮಾನಗಳನ್ನು ಚರ್ಚಿಸಿದೆ.

ಇದೇ 21 ರಂದು ಕೂಡಲಸಂಗಮದಲ್ಲಿ ಸಭೆ ನಡೆಸಲು ಈ ಹಿಂದೆ ಯತ್ನಾಳ ಬಣ ತೀರ್ಮಾನಿಸಿತ್ತು. ಆದರೆ, ವಿಧಾನಮಂಡಲ ಅಧಿವೇಶನ ಇದೇ 21ರ ವರೆಗೆ ನಡೆಯಲಿದೆ. ಮರು ದಿನವೇ ಅಲ್ಲಿ ಸಭೆ ನಡೆಸುವುದು ಕಷ್ಟವಾಗುತ್ತದೆ. ಬೇರೆ ದಿನ ನಿಗದಿ ಮಾಡಲು ತೀರ್ಮಾನಿಸಲಾಯಿತು. ಮುಂದಿನ ಕಾರ್ಯತಂತ್ರದ ಬಗ್ಗೆಯೂ ಚರ್ಚಿಸಲಾಯಿತು. ಸಭೆಯಲ್ಲಿ ಯತ್ನಾಳ, ಜಿ.ಎಂ.ಸಿದ್ದೇಶ್ವರ, ಬಿ.ಪಿ.ಹರೀಶ್ ಮತ್ತು ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.