ADVERTISEMENT

ಭ್ರಷ್ಟರೇ ಈಗ ಭ್ರಷ್ಟಾಚಾರದ ವಿರುದ್ಧ ಅಭಿಯಾನ ಮಾಡುತ್ತಿದ್ದಾರೆ: ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 4:41 IST
Last Updated 24 ಸೆಪ್ಟೆಂಬರ್ 2022, 4:41 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ಭ್ರಷ್ಟರೇ ಈಗ ಭ್ರಷ್ಟಾಚಾರದ ವಿರುದ್ಧ ಅಭಿಯಾನ ಮಾಡುತ್ತಾರಂತೆ ಮಾಡಲಿ, ಕೊನೆಗೆ ಸತ್ಯಕ್ಕೇ ಜಯ ಸಿಗುತ್ತದೆ’ ಎಂದುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕಲಾಪ ಮುಂದೂಡಿಕೆಯಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಪತ್ರವೊಂದನ್ನು ಇಟ್ಟುಕೊಂಡು ಒಂದು ವರ್ಷದಿಂದ ತುತ್ತೂರಿ ಊದುತ್ತಿದ್ದಾರೆ. ಈವರೆಗೆ ಒಂದು ಸಣ್ಣ ದೂರನ್ನಾದರೂ ದಾಖಲಿಸಿ ಸೂಕ್ತ ದಾಖಲೆ ನೀಡಬೇಕಿತ್ತಲ್ಲ. ಇಲ್ಲಿಯವರೆಗೆ ಯಾಕೆ ದಾಖಲೆಗಳನ್ನು ಕೊಟ್ಟಿಲ್ಲ? ಲಂಚ ಕೊಡಲು ಎಲ್ಲಿಂದ, ಯಾರಿಂದ ಒತ್ತಡ ಬಂದಿತ್ತು ಎಂಬ ಬಗ್ಗೆ ಸಣ್ಣ ಚೀಟಿಯಲ್ಲಿ ದೂರು ಕೊಡಲಿ ತನಿಖೆ ಮಾಡಿಸುತ್ತೇನೆ. ಇಲ್ಲವೇ ಲೋಕಾಯುಕ್ತಕ್ಕಾದರೂ ದೂರು ಕೊಡಲಿ’ ಎಂದು ಬೊಮ್ಮಾಯಿ ಸವಾಲು ಹಾಕಿದರು.

‘ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ನಡೆದ ಹಲವು ಹಗರಣಗಳ ಬಗ್ಗೆ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಸೇರಿದಂತೆ ಅವರದ್ದೇ ಪಕ್ಷದ ಹಲವರು ಮಾತನಾಡಿದ್ದಾರೆ. ಅವರ ಪಕ್ಷದ ಕಚೇರಿಯಲ್ಲಿ ಇಬ್ಬರು ಪದಾಧಿಕಾರಿಗಳು ಮಾತನಾಡಿದ್ದು, ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಮೂರು ತಲೆಮಾರಿಗಾಗುವಷ್ಟು ಆಸ್ತಿ ಮಾಡಿದ್ದೇವೆ, ಗಾಂಧಿ ಕುಟುಂಬದ ಋಣದಲ್ಲಿದ್ದೇವೆ ಎಂದು ರಮೇಶ್‌ಕುಮಾರ್‌ ಬಹಿರಂಗವಾಗಿಯೇ ಹೇಳಿದ್ದರು’ ಎಂದು ಬೊಮ್ಮಾಯಿ ವಂಗ್ಯವಾಡಿದರು.

ADVERTISEMENT

‘ಶೇ 40 ಲಂಚ ಯಾರು ಯಾರಿಗೆ ಕೊಟ್ಟಿದ್ದಾರೆ ಎಂಬುದನ್ನು ಸಿದ್ದರಾಮಯ್ಯ ಹೇಳಬೇಕು. ವಿಧಾನಸಭೆಯಲ್ಲಿ ಈ ವಿಷಯವನ್ನು ಮೊದಲೇ ಪ್ರಸ್ತಾಪಿಸಬಹುದಿತ್ತು. ಕೊನೆಯಲ್ಲಿ ತಂದಿದ್ದು ಏಕೆ?’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್– ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖ
ಕಾಂಗ್ರೆಸ್‌ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

‘ಜೈಲು ಹಕ್ಕಿಯೊಬ್ಬರು ಬೇಲ್‌ನಲ್ಲಿದ್ದಾರೆ. ಇವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ.ಮತ್ತೊಬ್ಬರು ನೀರಾವರಿಯಲ್ಲಿ ಭ್ರಷ್ಟಾಚಾರ ಮಾಡಿದ್ದು ಅವರೂ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ರೀ–ಡೂ ಖ್ಯಾತಿಯ ಕರಪ್ಷನ್‌ ಕಿಂಗ್‌ ತಮ್ಮ ಕಾಲದಲ್ಲಿ ಆದ ಭ್ರಷ್ಟಾಚಾರವನ್ನು ಮುಚ್ಚಿ ಹಾಕುವುದು ಹೇಗೆ ಎಂದು ಚಾರ್ಲ್ಸ್‌ ಶೋಭರಾಜ್‌ ಮಾದರಿಯಲ್ಲಿ ಕಾರ್ಯ ನಿರ್ವಹಿಸಿದವರೂ ಈಗ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.