ADVERTISEMENT

ಹಣಕಾಸಿನ ತೊಂದರೆ ಇರುವುದು ಸತ್ಯ: ಒಪ್ಪಿಕೊಂಡ ಸಿಎಂ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 14:02 IST
Last Updated 30 ಸೆಪ್ಟೆಂಬರ್ 2019, 14:02 IST
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ   

ಶಿವಮೊಗ್ಗ:ಸ್ವಲ್ಪ ಹಣಕಾಸಿನ ತೊಂದರೆ ಇರುವುದು ನಿಜ. ಫೆಬ್ರುವರಿ ವೇಳೆಗೆ ಎಲ್ಲ ಸಮಸ್ಯೆ ನಿವಾರಣೆಯಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿವಿಧ ₹292.92 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಒಂದು ವರ್ಷದ ಒಳಗೆ ಶಿವಮೊಗ್ಗ ಜಿಲ್ಲೆಯ ಎಲ್ಲ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಮುಂದಿನ ಬಜೆಟ್‌ನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಅತಿವೃಷ್ಟಿ ಹಾನಿಗೆ ಕೇಂದ್ರ ಶೀಘ್ರ ನೆರವು ನೀಡಲಿದೆ. ಅತಿವೃಷ್ಟಿಗಿಂತ ಬರದ ಪರಿಸ್ಥಿತಿ ಭೀಕರ ಎನ್ನುವುದು ಪ್ರಧಾನಿ ಅವರ ಅಭಿಪ್ರಾಯ. ರಾಜ್ಯದ ಕೆರೆಕಟ್ಟೆ, ಜಲಾಶಯಗಳು ಭರ್ತಿಯಾಗಿರುವುದು ನೆಮ್ಮದಿ ತಂದಿದೆ ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ‘ಮಾಧ್ಯಮಗಳು ಸುದ್ದಿ ತಿರುಚುವ ಕೆಲಸ ಮಾಡುತ್ತಿವೆ. ನಾನು ಯಡಿಯೂರಪ್ಪ, ರಾಮ–ಲಕ್ಷ್ಮಣರಿದ್ದಂತೆ. ಇಬ್ಬರನ್ನು ಬೇರ್ಪಡಿಸಲು ಯಾರಿಗೂ ಸಾಧ್ಯವಿಲ್ಲ. ಪಕ್ಷ ಮತ್ತಷ್ಟು ಬಲಪಡಿಸುತ್ತೇವೆ. ಮುಂದಿನ ಬಾರಿ 150 ಸ್ಥಾನ ಗೆಲ್ಲುತ್ತೇವೆ ಎಂದರು.

ಪ್ರವಾಹ ಸಂತ್ರಸ್ತರ ಸಂಷಕ್ಟು ಕಂಡು ಯಡಿಯೂರಪ್ಪ ಅವರು ‘ನನ್ನದು ತಂತಿ ಮೇಲಿನ ನಡಿಗೆ’ ಎಂದು ಹೇಳಿದ್ದಾರೆ. ಅದನ್ನೇ ನೆಪವಾಗಿಟ್ಟುಕೊಂಡು ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ರಾಜೀನಾಮೆ ಕೇಳಲು ಸಿಎಂ ಕುರ್ಚಿಯೇನು ಅವರಪ್ಪನ ಮನೆಯ ಆಸ್ತಿಯೇ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.