ಬಿ.ವೈ ವಿಜಯೇಂದ್ರ, ಬಸನಗೌಡ ಪಾಟೀಲ ಯತ್ನಾಳ
ವಿಜಯಪುರ: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಅರ್ಹನಲ್ಲ. ತಂದೆಯ ಸಹಿ ನಕಲಿ ಮಾಡಿದವರನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ಪಕ್ಷ ಅದಕ್ಕೆ ಅವಕಾಶ ನೀಡದು. ಹೈಕಮಾಂಡ್ ಇದನ್ನು ಗಂಭೀರವಾಗಿ ತಗೆದುಕೊಳ್ಳಬೇಕು. ವಿಜಯೇಂದ್ರ ಮಾಡಿದ ತಪ್ಪಿನಿಂದಲೇ ಯಡಿಯೂರಪ್ಪ ಜೈಲಿಗೆ ಹೋಗಬೇಕಾಯಿತು’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.
ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿ.ವೈ. ವಿಜಯೇಂದ್ರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ‘ಬಿ.ಎಸ್.ಯಡಿಯೂರಪ್ಪ ಅವರನ್ನು ಹೊರಗಡೆ ‘ಪೂಜ್ಯ ತಂದೆ’ ಎಂದು ವಿಜಯೇಂದ್ರ ಕರೆಯುತ್ತಾನೆ. ಮನೆಯಲ್ಲಿ ‘ಮುದಿಯಾ’ ಎಂದು ಕರೆಯುತ್ತಾನೆ. ಈ ವಿಜಯೇಂದ್ರನಿಂದಲೇ ಯಡಿಯೂರಪ್ಪ ಹಾಳಾಗಿದ್ದು. ಅವರಿಗೆ ತಮ್ಮ ಮನೆಯಲ್ಲಿಯೇ ಕಿಮ್ಮತ್ತಿಲ್ಲ. ಮಗನ ವ್ಯಾಮೋಹವನ್ನು ಯಡಿಯೂರಪ್ಪ ಕಡಿಮೆ ಮಾಡಿಕೊಳ್ಳಲಿ’ ಎಂದು ಹೇಳಿದರು.
ಯಡಿಯೂರಪ್ಪ ವಿರುದ್ಧವೂ ಅಸಮಾಧಾನ ಹೊರಹಾಕಿದ ಯತ್ನಾಳ, ‘ಅವರೂ ಎಷ್ಟು ಜನರಿಗೆ ಮೋಸ ಮಾಡಿಲ್ಲ? ಬಿ.ಬಿ. ಶಿವಪ್ಪ, ಮಲ್ಲಿಕಾರ್ಜುನಯ್ಯ ಸೇರಿದಂತೆ ಅನೇಕರಿಗೆ ಅನ್ಯಾಯ ಮಾಡಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಅನೇಕರ ರಾಜಕೀಯ ಜೀವನ ಅಂತ್ಯಗೊಳಿಸಿದ್ದಾರೆ. ಈಗಲಾದರೂ ಯಡಿಯೂರಪ್ಪ ಮೊಮ್ಮಕ್ಕಳ ಜೊತೆ ಆಟ ಆಡುತ್ತಾ ಕುಳಿತುಕೊಳ್ಳಲಿ’ ಎಂದು ಸಲಹೆ ನೀಡಿದರು.
‘ವಿಜಯೇಂದ್ರನ ಕಾರಣದಿಂದಾಗಿಯೇ ಸುನಿಲ್‌ಕುಮಾರ್ ಅವರು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಗಿ ಬಂದಿದೆ. ಸುನಿಲ್‌ಕುಮಾರ್ ಹೇಗೆ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದರೋ ಹಾಗೆ ವಿಜಯೇಂದ್ರ ರಾಜೀನಾಮೆ ನೀಡಲಿ’ ಎಂದರು.
ಜಾರಕಿಹೊಳಿ ಮಾತನಾಡಿದ್ದರಲ್ಲಿ ತಪ್ಪಿಲ್ಲ: ‘ಶಾಸಕ ರಮೇಶ ಜಾರಕಿಹೊಳಿ ಮಾತನಾಡಿದ್ದರಲ್ಲಿ ತಪ್ಪೇನಿದೆ? ನಾನು ಸದಾ ಅವರ ಪರವಾಗಿದ್ದೇನೆ. ವಿಜಯೇಂದ್ರನ ನಾಯಕತ್ವವನ್ನು ನಾವು ಒಪ್ಪಲ್ಲ, ರಾಜ್ಯದ ಯಾವ ನಿಷ್ಠಾವಂತ ಕಾರ್ಯಕರ್ತನೂ ಒಪ್ಪೋದಿಲ್ಲ’ ಎಂದು ಯತ್ನಾಳ ಪುನರುಚ್ಚರಿಸಿದರು.
‘ರಮೇಶ ಬಗ್ಗೆ ಮೊದಲು ಹಗುರವಾಗಿ ಮಾತನಾಡಿದ್ದು ಯಾರು? ರಸ್ತೆ ಮೇಲೆ ತಿರುಗಾಡದಂತೆ ಮಾಡುತ್ತೇನೆ ಎಂದಿದ್ದು ಯಾರು? ಅದಕ್ಕೆ ಜಾರಕಿಹೊಳಿ ತಕ್ಕ ಉತ್ತರ ನೀಡಿದ್ದಾರೆ, ತಪ್ಪೇನಿದೆ?’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.