ADVERTISEMENT

ತೇಜಸ್ವಿ ಸೂರ್ಯರಂತಹ ಎಳೆ ಹುಡುಗನ ಕೈಗೆ ಯಜಮಾನಿಕೆ ಕೊಟ್ಟಿದ್ದೇಕೆ?: ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 8 ಮೇ 2021, 7:30 IST
Last Updated 8 ಮೇ 2021, 7:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ‘ಸಂಸದ ತೇಜಸ್ವಿ ಸೂರ್ಯ ಅವರಂತಹ ಎಳೆ ಹುಡುಗನ ಕೈಗೆ ಯಾಜಮಾನಿಕೆ ಕೊಟ್ಟಿದ್ದೇಕೆ’ ಎಂದು ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ವ್ಯಂಗ್ಯವಾಡಿದೆ.

ಈ ವಿಚಾರವಾಗಿ ಶನಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಉದಯ್‌ ಗರುಡಾಚಾರ್ ಅವರೇ ತಪ್ಪನ್ನು ಮುಚ್ಚಿಕೊಳ್ಳಲು ಎಷ್ಟು ಸಾಹಸ ಮಾಡುವಿರಿ. ಈಗಷ್ಟೇ ಕಣ್ಬಿಟ್ಟು ಜಗತ್ತು ಕಾಣುತ್ತಿರುವ ಸಂಸದ ತೇಜಸ್ವಿ ಸೂರ್ಯ ಎಂಬ ತಲೆ ಮಾಸದ ಎಳೆ ಹುಡುಗನ ಕೈಗೆ ಯಜಮಾನಿಕೆ ಕೊಟ್ಟಿದ್ದೇಕೆ. ಈ ತಪ್ಪನ್ನು ಯಾರೋ ಕಾರ್ಯಕರ್ತರು ಮಾಡಿದ್ದಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಎರಡ್ಮೂರು ಬಾರಿ ಶಾಸಕರಾದವರೇ ಮಾಡಿದ್ದೀರಲ್ಲ ಸ್ವಾಮಿ?’ ಎಂದು ಕಾಂಗ್ರೆಸ್ ಟೀಕಿಸಿದೆ.

ಸೂರ್ಯ ಅವರೇ, ‘ರಾಜ್ಯದ ಸಂಕಟದ ನಡುವೆಯೂ ವೈರಸ್‌ಗೆ ಜಾತಿ, ಧರ್ಮಗಳ ಬಣ್ಣ ಹಚ್ಚಿದ್ದೀರಿ. ಹಗರಣ ಬಯಲು ಮಾಡುತ್ತೇವೆಂದ ನಿಮ್ಮದೇ ಹಗರಣ ಬೆತ್ತಲಾಗಿದೆ.ಶಾಸಕ ಸತೀಶ್ ರೆಡ್ಡಿ ಆಪ್ತ ಸಹಾಯಕನ ಕೈವಾಡ ಬಯಲಾಗಿದೆ. ನಿಮ್ಮ ರಾಜಕೀಯ ತೆವಲು ತೀರಿಸಿಕೊಳ್ಳುವ ನೀಚತನಕ್ಕೆ ವಾರ್ ರೂಮಿನ ಕೊರೊನಾ ವಾರಿಯರ್ಸ್ ಆತ್ಮವಿಶ್ವಾಸ ಕುಗ್ಗಿಸಿದ್ದೀರಿ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.


‘ಯಾವ ಆರೋಪಗಳಿಲ್ಲ.ಬಂಧನ ಆಗಿಲ್ಲ. ವಿಚಾರಣೆಯೂ ಆಗಿಲ್ಲ. ವಿನಾಕಾರಣ ಮೆಡಿಕಲ್ ಭಯೋತ್ಪಾದಕರ ಸ್ವಾರ್ಥಕ್ಕೆ ಗುರಿಯಾದ ವಾರ್ ರೂಮ್ ಸಿಬ್ಬಂದಿಗಳನ್ನು ಯಾವ ಕಾರಣಕ್ಕೆ ವಜಾ ಮಾಡಲಾಗಿದೆ? ಹೆಸರಿನ ಕಾರಣಕ್ಕಾ, ಧರ್ಮದ ಕಾರಣಕ್ಕಾ? ಯಾರೋ ನುಗ್ಗಿ ಹೆಸರಿನ ಪಟ್ಟಿ ಓದಿದ ಮಾತ್ರಕ್ಕೆ ವಜಾ ಮಾಡಲು ಯಾವ ಕಾನೂನಿನಲ್ಲಿ ಅವಕಾಶವಿದೆ ಯಡಿಯೂರಪ್ಪ ಅವರೇ? ಎಂದು ಕಾಂಗ್ರೆಸ್‌ ದೂರಿದೆ.

‘ಒನ್ ನೇಷನ್ ಒನ್ ಎಲೆಕ್ಷನ್, ಒನ್ ನೇಷನ್ ಒನ್ ರೇಷನ್’ ಎನ್ನುವ ಪದಪುಂಜಗಳನ್ನು ಪುಂಖಾನುಪುಂಖವಾಗಿ ಬಿಡುವ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ಬಿಜೆಪಿ ನಾಯಕರೇ ಹೇಳಿ, ಆಮ್ಲಜನಕ ಸಿಲಿಂಡರ್ ಹಂಚಿಕೆಯಲ್ಲಿ, ಲಸಿಕೆ ನೀಡುವಲ್ಲಿ, ನೆರವು ಕೊಡುವಲ್ಲಿ, ರೆಮ್‌ಡಿಸಿವಿರ್ ಪಾಲಿನಲ್ಲಿ ‘ಒಂದು ದೇಶ ಒಂದೇ ನ್ಯಾಯ’ ಏಕಿಲ್ಲ? ಕರ್ನಾಟಕಕ್ಕೆ ಏಕೆ ಈ ಅನ್ಯಾಯ?’ ಎಂದು ಕಾಂಗ್ರೆಸ್ ಕಿಡಿಕಾರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.