ADVERTISEMENT

ಜನರ ಜೀವನದ ಜೊತೆ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 11:23 IST
Last Updated 10 ಆಗಸ್ಟ್ 2021, 11:23 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ಕೋವಿಡ್ ಎರಡನೇ ಅಲೆಯಲ್ಲಿ ಆಗಿರುವ ನಷ್ಟಕ್ಕೆ ರೈತರಿಗೆ ಸರ್ಕಾರದಿಂದ ಈವರೆಗೂ ಪರಿಹಾರ ಸಿಕ್ಕಿಲ್ಲ. ಬೆಳೆಗೆ ಬೆಲೆ ಇಲ್ಲದೆ ರೈತರು ಪರದಾಡುತ್ತಿದ್ದಾರೆ. ಸರ್ಕಾರ ಇದ್ಯಾವುದರ ಬಗ್ಗೆಯೂ ಚಿಂತಿಸದೆ, ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಸದಾಶಿವನಗರ ನಿವಾಸದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಂಗಳವಾರ ಮಾತಾಡಿದ ಅವರು, ‘ಹೊಸ ಸರ್ಕಾರ ಬಂದಿದೆ. ಜನರ ರಕ್ಷಣೆ ಮಾಡುತ್ತದೆ ಎಂದು ಎಲ್ಲರೂ ಕಾದು ನೋಡುತ್ತಿದ್ದಾರೆ’ ಎಂದರು.

‘ಹಾರ, ತುರಾಯಿ ಹಾಕಿಸಿಕೊಳ್ಳುವವರಿಗೆ ನಾನು ಬೇಡ ಎನ್ನುವುದಿಲ್ಲ. ಕೋವಿಡ್ ಸೋಂಕು ನಿಯಂತ್ರಿಸಬೇಕು. ಎಲ್ಲರೂ ತಮ್ಮ ಕ್ಷೇತ್ರಗಳಿಗೆ ಹೋಗಿ ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ. ಈ ವಿಚಾರವಾಗಿ ನಾನು ಇಲ್ಲಿ ಮಾತನಾಡುವುದಿಲ್ಲ. ಬೆಳೆದ ಟೊಮೊಟೊ, ತರಕಾರಿಗಳಿಗೆ ಬೆಲೆ ಸಿಗದೆ ಅವುಗಳನ್ನು ರೈತರು ಬಿಸಾಕುತ್ತಿದ್ದಾರೆ. ನೂತನ ಮುಖ್ಯಮಂತ್ರಿ ರೈತರು, ಸಾಂಪ್ರದಾಯಿಕ ವೃತ್ತಿ ಅವಲಂಬಿಸಿರುವವರನ್ನು ಉಳಿಸುತ್ತಾರಾ ನೋಡಬೇಕು’ ಎಂದರು.

ADVERTISEMENT

‘ಜಗದೀಶ ಶೆಟ್ಟರ್ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚಿಂತನೆ ಮಾಡಬೇಕಿತ್ತು. ಅಧಿವೇಶನ ಕರೆಯುತ್ತೇವೆ ಎಂದಿದ್ದರು. ಈಗ ಉತ್ತರ ಕರ್ನಾಟಕ ಭಾಗದ ಮುಖ್ಯಮಂತ್ರಿಗಳೇ ಇದ್ದಾರೆ. ಯಾವಾಗ ಕರೆಯುತ್ತಾರೊ ನೋಡೋಣ. ತರಾತುರಿಯಲ್ಲಿ ಏನೂ ಮಾತನಾಡುವುದಿಲ್ಲ’ ಎಂದರು.

ಖಾಸಗಿಯಾಗಿ ಹಂಚಿಕೊಳ್ಳಲು ಸಿದ್ಧ: ‘ಪಕ್ಷದ ಶಾಸಕ (ಜಮೀರ್‌) ಮನೆ ಮೇಲೆ ಇಡಿ ದಾಳಿ ಬಗ್ಗೆ ನನಗೆ ಇರುವ ಕಾನೂನು ಅರಿವಿನಲ್ಲಿ ಈಗಾಗಲೇ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ನಾನು ಈ ಬಗ್ಗೆ ವೈಯಕ್ತಿವಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನನ್ನ ಅನುಭವವನ್ನು ಅವರೊಂದಿಗೆ ಖಾಸಗಿಯಾಗಿ ಹಂಚಿಕೊಳ್ಳಲು ಸಿದ್ಧನಿದ್ದೇನೆ. ಸಾರ್ವಜನಿಕವಾಗಿ ಈ ಬಗ್ಗೆ ಮಾತನಾಡುವುದಿಲ್ಲ’ ಎಂದರು.

‘ಎಚ್‌.ಡಿ. ಕುಮಾರಸ್ವಾಮಿ ಕುರಿತು ಜಮೀರ್ ಮಾಡಿರುವ ಆರೋಪಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.