ಬಿ.ವೈ. ವಿಜಯೇಂದ್ರ
ಬೆಂಗಳೂರು: ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಮುಡಾ ಹಗರಣದ ಸತ್ಯ ಬಯಲಿಗೆ ಎಳೆಯಲು ಹೊರಟಿರುವ ಆರ್‌ಟಿಐ ಕಾರ್ಯಕರ್ತರ ಬಾಯಿ ಮುಚ್ಚಿಸಲು ಕಾಂಗ್ರೆಸ್ಸಿಗರು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಘಟಕ ರಾಜ್ಯ ಅಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಮೈಸೂರಿನ ಮುಡಾ ಹಗರಣದ ಸತ್ಯ ಬಯಲಿಗೆ ಎಳೆಯಲು ಹೊರಟಿರುವ ಆರ್‌ಟಿಐ ಕಾರ್ಯಕರ್ತರನ್ನು ದೌರ್ಜನ್ಯದಿಂದ ಬಾಯಿ ಮುಚ್ಚಿಸಲು ವಿಫಲವಾಗಿರುವ ಕಾಂಗ್ರೆಸ್ಸಿಗರು, ಇದೀಗ ಪೊಲೀಸರನ್ನು ಬಳಸಿ ಅವರ ಬಾಯಿ ಮುಚ್ಚಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ತುರ್ತು ಪರಿಸ್ಥಿತಿ ಹೇರಿದ ಕರಾಳ ಸಂಸ್ಕೃತಿಯ ಹಿನ್ನೆಲೆ ಇರುವ ಕಾಂಗ್ರೆಸ್ಸಿಗರಿಗೆ ಅವರ ಅಸಲೀತನ ಬಯಲು ಮಾಡಲು ಹೊರಟವರನ್ನು ಬಾಯಿ ಮುಚ್ಚಿಸುವುದು, ಬೆದರಿಸುವುದು, ಅಧಿಕಾರ ಉಪಯೋಗಿಸಿ ಜೈಲಿಗೆ ಕಳಿಸುವುದು ಕರಗತವಾಗಿ ಬಂದಿರುವ ಕಲೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ.
ಮುಖ್ಯಮಂತ್ರಿಗಳ ಪತ್ನಿ ಹೆಸರಿನಲ್ಲಿ ಮುಡಾದಿಂದ 14 ನಿವೇಶನಗಳನ್ನು ಪಡೆದುಕೊಂಡಿರುವ ಕುರಿತು ಮೂಲ ದಾಖಲೆಗಳನ್ನು ಹೊರತೆಗೆಯುತ್ತಿರುವ ಹಾಗೂ ಕೆಸರೆ ಜಮೀನಿನ ಸರ್ವೆ ನಂಬರ್ 464ರ ಅಕ್ರಮ ಕ್ರಯದ ವಿವರ ಬಯಲು ಮಾಡುತ್ತಿರುವ ಆರ್‌ಟಿಐ ಕಾರ್ಯಕರ್ತರ ಮೇಲೆ ಕಾಂಗ್ರೆಸ್ಸಿಗರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಬ್ಬಾಳಿಕೆ ನಡೆಸುತ್ತಿರುವ, ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ನಡೆಯನ್ನು ಬಿಜೆಪಿ ಖಂಡಿಸುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ಪೊಲೀಸ್ ಆಯುಕ್ತರಿಗೆ ಕಾಂಗ್ರೆಸ್ ನೀಡಿರುವ ದೂರಿನಲ್ಲಿ ಹೆಸರಿಸಿರುವ ಆರ್‌ಟಿಐ ಕಾರ್ಯಕರ್ತರಿಗೆ ಯಾವುದೇ ರೀತಿಯ ಕಿರುಕುಳ ನೀಡಿದರೆ ಅದನ್ನು ಬಿಜೆಪಿ ಪ್ರತಿಭಟಿಸಲಿದೆ. ಆದ್ದರಿಂದ ಅವರಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡಲು ಒತ್ತಾಯಿಸುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.