
ಬೆಳಗಾವಿ (ಸುವರ್ಣ ವಿಧಾನಸೌಧ): ‘ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹಲವು ಅಸ್ತ್ರಗಳನ್ನು ಪ್ರಯೋಗಿಸಲಾಗುವುದು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದ್ದಾರೆ. ಆದರೆ, ಅವರ ಪಕ್ಷದ ಬತ್ತಳಿಕೆಯಲ್ಲಿ ಬಾಣವೇ ಇಲ್ಲ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವ್ಯಂಗ್ಯವಾಡಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಅವಿಶ್ವಾಸ ನಿರ್ಣಯ ಮಂಡಿಸಿದರೆ ಅದಕ್ಕೆ ಸೋಲಾಗುವುದು ಖಚಿತ’ ಎಂದರು.
‘ಯಾರು ಯಾವಾಗ, ಎಷ್ಟು ದಿನ ಮುಖ್ಯಮಂತ್ರಿ ಆಗಿರಬೇಕೆಂಬುದನ್ನು ನಮ್ಮ ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ಹೀಗಾಗಿ, ನಾಯಕತ್ವದ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ’ ಎಂದರು.
‘ಬಿಜೆಪಿಯಲ್ಲಿ ಅಶೋಕ ಬಣ, ವಿಜಯೇಂದ್ರ ಬಣ, ಕುಮಾರ ಬಂಗಾರಪ್ಪ ಬಣ ಮತ್ತು ರಮೇಶ ಜಾರಕಿಹೊಳಿ ಬಣಗಳಿವೆ. ಮೊದಲು ಆ ಬಣಗಳ ಕಿತ್ತಾಟವನ್ನು ಅಶೋಕ ಅವರು ಪರಿಹರಿಸಲಿ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಣಗಳಿಲ್ಲ. ನಮ್ಮದೇನಿದ್ದರೂ ಕಾಂಗ್ರೆಸ್ ಬಣ’ ಎಂದರು.
‘ಬಿಜೆಪಿಯವರು ಜನರಲ್ಲಿ ಕೇವಲ ಮತೀಯ ಭಾವನೆಗಳನ್ನು ಕೆರಳಿಸಿ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆಯೇ ಹೊರತು, ಯಾವತ್ತೂ ಅಭಿವೃದ್ಧಿ ಬಗ್ಗೆ ರಾಜಕೀಯ ಮಾಡಿಲ್ಲ. ಜನರ ಪರವಾಗಿ ಎಂದಿಗೂ ಕೆಲಸ ಮಾಡಿಲ್ಲ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.