ADVERTISEMENT

ನನ್ನನ್ನು ಬ್ಲ್ಯಾಕ್‌ಮೇಲ್‌ ಮಾಡುವ ಕೆಲಸ ಕಾಂಗ್ರೆಸ್‌ ಮಾಡುತ್ತಿದೆ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 15:52 IST
Last Updated 18 ಆಗಸ್ಟ್ 2024, 15:52 IST
<div class="paragraphs"><p>ಎಚ್.ಡಿ.ಕುಮಾರಸ್ವಾಮಿ</p></div>

ಎಚ್.ಡಿ.ಕುಮಾರಸ್ವಾಮಿ

   

ಬೆಂಗಳೂರು: ‘ಯಾವುದೋ ಹಳೆಯ ಪ್ರಕರಣವನ್ನು ಕೆದಕಿ ನನ್ನನ್ನು ಬ್ಲ್ಯಾಕ್‌ಮೇಲ್‌ ಮಾಡುವ ಕೆಲಸವನ್ನು ರಾಜ್ಯದ ಕಾಂಗ್ರೆಸ್‌ ಸರ್ಕಾರ ಮಾಡುತ್ತಿದೆ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

ಕುಮಾರಸ್ವಾಮಿ ವಿರುದ್ಧದ ಪ್ರಕರಣದಲ್ಲಿ ರಾಜ್ಯಪಾಲರು ತನಿಖೆಗೆ ಈವರೆಗೆ ಅನುಮತಿ ಏಕೆ ನೀಡಿಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನಗೆ ಉತ್ತರಿಸಿದ ಅವರು, ‘ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣವನ್ನು ಇಟ್ಟುಕೊಂಡು ರಾಜ್ಯ ಸರ್ಕಾರ ರಾಜ್ಯಪಾಲರಿಗೂ ಅವಮಾನ ಮಾಡುತ್ತಿದೆ. ಜಂತಕಲ್‌ ಗಣಿ ಪ್ರಕರಣವು ಹೈಕೋರ್ಟ್‌ನಲ್ಲಿ ವಜಾ ಆಗಿದೆ. ಸಾಯಿ ವೆಂಕಟೇಶ್ವರ ಹಗರಣದಲ್ಲಿ ತನಿಖೆ ನಡೆಯಬೇಕಿದೆ. ಇದನ್ನೆಲ್ಲಾ ಇಟ್ಟುಕೊಂಡು ನನ್ನನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಜಗ್ಗುವ ಜಾಯಮಾನ ನನ್ನದಲ್ಲ’ ಎಂದರು.

ADVERTISEMENT

‘ಮುಡಾ ಹಗರಣದಲ್ಲಿ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ ತಕ್ಷಣ ಸಿದ್ದರಾಮಯ್ಯ ಅವರು ಶಾಸಕರು, ಸಚಿವರ ಮೂಲಕ ರಾಜ್ಯಪಾಲರಿಗೆ ಧಮಕಿ ಹಾಕಿದರು. ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ನನ್ನ ವಿರುದ್ಧ ಆರೋಪ ಬಂದಾಗ ನಾನೊಬ್ಬನೇ ಎಲ್ಲವನ್ನೂ ಎದುರಿಸಿದ್ದೆ. ವಿಧಾನಸಭೆ ಕಲಾಪದಲ್ಲೂ ಈ ಮಾತು ಹೇಳಿದ್ದೆ. ಸಿದ್ದರಾಮಯ್ಯ ಅವರಿಗೆ ಅದು ನೆನಪಿದೆಯಾ’ ಎಂದು ಪ್ರಶ್ನಿಸಿದರು.

‘ಲೋಕಸಭೆಯಲ್ಲಿ ಸಂಸದರ ಕೈಗೆ ಸಂವಿಧಾನದ ಪ್ರತಿ ಕೊಟ್ಟು ಪ್ರಮಾಣ ಸ್ವೀಕಾರ ಮಾಡಿಸಿದ್ದ ಕಾಂಗ್ರೆಸ್‌, ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾದ ರಾಜ್ಯಪಾಲರ ವಿರುದ್ಧ ಅವಹೇಳನಕಾರಿಯಾಗಿ ಪ್ರತಿಭಟನೆ ಮಾಡಿಸುತ್ತಿದೆ. ರಾಜ್ಯಪಾಲರ ಬಗ್ಗೆ ಎಲ್ಲರೂ ಅಗೌರವದಿಂದ ನಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕೆಟ್ಟ ಪರಿಸ್ಥಿತಿ ಇದೆ’ ಎಂದು ಆಪಾದಿಸಿದರು.

‘ಬಂಡೆಯಿಂದಲೇ ಅಪಾಯ’

‘ಕಾಂಗ್ರೆಸ್‌ನಲ್ಲಿನ ಪಿತೂರಿಗೇ ಸಿದ್ದರಾಮಯ್ಯ ಬಲಿಯಾಗುತ್ತಿದ್ದಾರೆ. ಯಾರೋ ಒಬ್ಬರು ಸಿದ್ದರಾಮಯ್ಯ ಜತೆ ಬಂಡೆಯಂತೆ ನಿಲ್ಲುವೆ ಎಂದು ಸೋಗು ಹಾಕುತ್ತಿದ್ದಾರೆ. ಆ ಬಂಡೆಯಿಂದಲೇ ಸಿದ್ದರಾಮಯ್ಯ ಅವರಿಗೆ ಅಪಾಯ. ಆ ಬಂಡೆಯಿಂದಲೇ ಸಿದ್ದರಾಮಯ್ಯ ಅವರಿಗೆ ಈ ಗತಿ ಬಂದಿದೆ. ಆದರೆ ನಮ್ಮ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ’ ಎಂದರು.

‘ದೇವೇಗೌಡರು ಮತ್ತು ನಾನು ಮೋದಿ ಅಮಿತ್ ಶಾ ಮೇಲೆ ಒತ್ತಡ ಹೇರಿ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ರಾಜ್ಯಪಾಲರಿಂದ ಅನುಮತಿ ಕೊಡಿಸಿದ್ದೇವೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ನಮಗೆ ಬೇರೆ ಕೆಲಸ ಇಲ್ಲವೇ? ಕಾಡುಗೊಲ್ಲರ ಬಗ್ಗೆ ಚರ್ಚಿಸಲು ದೇವೇಗೌಡರು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಆಗ ನಾನೂ ಇದ್ದೆ. ಅದಕ್ಕೆ ಕಾಂಗ್ರೆಸ್‌ ರಾಜಕೀಯ ಬಣ್ಣ ಬಳಿಯುತ್ತಿದೆ’ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ನಾನು ಕೇಳಿಲ್ಲ. ಅವರು ಕೊಡುವುದೂ ಇಲ್ಲ. ಎಲ್ಲವೂ ಕಾನೂನಿನಂತೆ ತೀರ್ಮಾನವಾಗುತ್ತದೆ.
-ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.