ADVERTISEMENT

ಅವಿಶ್ವಾಸ ನಿರ್ಣಯದಲ್ಲಿ ಜೆಡಿಎಸ್‌ ‘ಜಾತ್ಯತೀತ’ ಬಹಿರಂಗವಾಗಲಿದೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 14:25 IST
Last Updated 6 ಡಿಸೆಂಬರ್ 2020, 14:25 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಕ್ಕೆ ಸರ್ಕಾರ ನಿರ್ಧರಿಸಿದೆ. ಜಾತ್ಯತೀತ ಪಕ್ಷ ಎನ್ನುವ ಜೆಡಿಎಸ್, ಕೋಮುವಾದಿಗಳ ಪರವಾಗಿ ಮತ ಚಲಾಯಿಸುತ್ತದೊ, ವಿರುದ್ಧವಾಗಿ ಮತ ಚಲಾಯಿಸುತ್ತದೋ ಎಂಬುದನ್ನು ನೋಡಲು ಸಭಾಪತಿಯವರಿಗೆ ಈಗಾಗಲೇ ರಾಜೀನಾಮೆ ನೀಡದಂತೆ ಹೇಳಿದ್ದೇನೆ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಸಮ್ಮಿಶ್ರ ಸರ್ಕಾರ ಬಂದ ಮೇಲೆ ತನ್ನ ಗೌರವ ಹಾಳಾಯಿತು ಎಂಬ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆ ಹಾಸ್ಯಾಸ್ಪದವಾಗಿದೆ. ಕುಮಾರಸ್ವಾಮಿಗೆ ಒಳ್ಳೆ ವರ್ಚಸ್ಸು ಇದ್ದದ್ದರೆ ಈ ಹಿಂದಿನ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷ ಗೆಲ್ಲುವ ಸ್ಥಾನಗಳ ಸಂಖ್ಯೆ ಏರಿಕೆಯಾಗುತ್ತಿತ್ತೇ ಹೊರತು ಕಡಿಮೆಯಾಗುತ್ತಿರಲಿಲ್ಲ’ ಎಂದರು.

‘2004ರಲ್ಲಿ ನಾನು ಜೆಡಿಎಸ್‌ನಲ್ಲಿದ್ದಾಗ ಜೆಡಿಎಸ್ 59 ಸ್ಥಾನಗಳನ್ನು ಗೆದ್ದಿತ್ತು. ನನ್ನನ್ನು ಪಕ್ಷದಿಂದ ವಜಾಗೊಳಿಸಿದ ನಂತರದ ಚುನಾವಣೆಯಲ್ಲಿ 28 ಸ್ಥಾನ, 2013ರ ಚುನಾವಣೆಯಲ್ಲಿ 40 ಸ್ಥಾನ, ಕಳೆದ ಚುನಾವಣೆಯಲ್ಲಿ 37 ಸ್ಥಾನ ಗೆದ್ದಿತ್ತು. ಕುಮಾರಸ್ವಾಮಿ ಜನರ ಬಳಿ ಗೌರವ ಉಳಿಸಿಕೊಂಡಿದ್ದರೆ 59 ರಿಂದ 28 ಸ್ಥಾನಕ್ಕೆ ಬರುತ್ತಿತ್ತೇ’ ಎಂದೂ ಸಿದ್ದರಾಮಯ್ಯ ಪ್ರಶ್ನಿಸಿದರು.

ADVERTISEMENT

‘ಜೆಡಿಎಸ್‌ನವರ ರಾಜಕೀಯ ವಿರೋಧಿ ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿ ಅಲ್ಲ. ಅವರು ಬಿಜೆಪಿ ಬಗ್ಗೆ ಸದಾಕಾಲ ಮೃದು ಧೋರಣೆ ಹೊಂದಿದ್ದಾರೆ. ಕುಮಾರಸ್ವಾಮಿ ಅವರು ತಾವು ಬಿಜೆಪಿಗೆ ಹೋಗಿದ್ದರೆ 5 ವರ್ಷ ಮುಖ್ಯಮಂತ್ರಿ ಆಗಿರುತ್ತಿದ್ದೆ ಎಂದು ಶನಿವಾರ ಹೇಳಿರುವುದೇ ಇದಕ್ಕೆ ಸಾಕ್ಷಿ. ಇದೇ ಕಾರಣಕ್ಕೆ ನಾನು ಜೆಡಿಎಸ್ ಅನ್ನು ಬಿಜೆಪಿಯ 'ಬಿ ಟೀಮ್' ಎನ್ನುವುದು’ ಎಂದರು.

‘ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಾಗ ಸರ್ಕಾರ ರಚನೆ ಮಾಡುವಂತೆ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಿದ್ದು, ಅವರೊಂದಿಗೆ ಮೊದಲ ಸುತ್ತಿನ ಮಾತುಕತೆ ಮಾಡಿದ್ದು ಕಾಂಗ್ರೆಸ್ ಹೈಕಮಾಂಡ್, ನಾನಲ್ಲ. 37 ಸ್ಥಾನ ಗೆದ್ದವರಿಗೆ ಮುಖ್ಯಮಂತ್ರಿ ಹುದ್ದೆ ನೀಡಿದ್ದರು, ಇದರಲ್ಲಿ ಟ್ರ್ಯಾಪಿಂಗ್ ಎಲ್ಲಿಂದ ಬಂತು’ ಎಂದೂ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.