ADVERTISEMENT

ಪಿಎಸ್ಐ ಹಗರಣ | ₹1.35 ಕೋಟಿ ಮುಂಗಡ ಪಡೆದಿದ್ದ ಎಡಿಜಿಪಿ

ಸಂತೋಷ ಜಿಗಳಿಕೊಪ್ಪ
Published 1 ಆಗಸ್ಟ್ 2022, 21:00 IST
Last Updated 1 ಆಗಸ್ಟ್ 2022, 21:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷೆಗೂ ಮುನ್ನವೇ ಅಭ್ಯರ್ಥಿಗಳಿಂದ ಮುಂಗಡವಾಗಿ ₹ 1.35 ಕೋಟಿ ಪಡೆದಿದ್ದ ಪೊಲೀಸ್ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್, ಅದೇ ಹಣವನ್ನು ಎಡಿಜಿಪಿ ಅಮ್ರಿತ್ ಪೌಲ್‌ ಅವರಿಗೆ ನೀಡಿದ್ದರೆಂಬ ಸಂಗತಿಯನ್ನು ಸಿಐಡಿ ಅಧಿಕಾರಿಗಳು ದಾಖಲೆ ಸಮೇತ ಮುಂದಿಟ್ಟಿದ್ದಾರೆ.

ಡಿವೈಎಸ್ಪಿ ಸೇರಿ 30 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿರುವ ಸಿಐಡಿ, ಅವರೆಲ್ಲರ ಹೇಳಿಕೆಯನ್ನು ಲಗತ್ತಿಸಿದೆ.

‘545 ಪಿಎಸ್‌ಐ ಹುದ್ದೆಗಳ ನೇಮಕಕ್ಕೆ ಸರ್ಕಾರ ಒಪ್ಪಿಗೆ ನೀಡುತ್ತಿದ್ದಂತೆ ಎಡಿಜಿಪಿ ಅಮ್ರಿತ್ ಪೌಲ್, ಡಿವೈಎಸ್ಪಿ ಶಾಂತಕುಮಾರ್ ಹಾಗೂ ಇತರರನ್ನು ಬಳಸಿಕೊಂಡು ಹಣ ಮಾಡುವ ದಾರಿ ಕಂಡುಕೊಂಡಿದ್ದರು. ಶಾಂತಕುಮಾರ್‌ ಅವರನ್ನು ಮುಂದಿಟ್ಟುಕೊಂಡು ಅಭ್ಯರ್ಥಿಗಳನ್ನು ಸಂಪರ್ಕಿಸಿ, ಮುಂಗಡವಾಗಿ ₹ 1.35 ಕೋಟಿ ಸಂಗ್ರಹಿಸಿದ್ದರು. ಅದೇ ಹಣವನ್ನು ಎಡಿಜಿಪಿ ವಿವಿಧ ಖಾತೆಗಳಿಗೆ ಜಮೆ ಮಾಡಿಸಿಕೊಂಡಿದ್ದರು’ ಎಂಬ ಮಾಹಿತಿ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.

ADVERTISEMENT

‘ಎಡಿಜಿಪಿ ಯಾವುದೇ ಅಭ್ಯರ್ಥಿಯನ್ನು ನೇರವಾಗಿ ಸಂಪರ್ಕಿಸಿಲ್ಲ. ಕಿರಿಯ ಸಿಬ್ಬಂದಿ ಹಾಗೂ ಮಧ್ಯವರ್ತಿಗಳ ಮೂಲಕವೇ ಅಕ್ರಮ ಮಾಡಿಸಿದ್ದಾರೆ. ಪ್ರತಿಯೊಬ್ಬ ಅಭ್ಯರ್ಥಿಯಿಂದ ಸಂಗ್ರಹವಾಗುತ್ತಿದ್ದ ಹಣದ ಬಗ್ಗೆ ಮಾತ್ರ ಎಡಿಜಿಪಿ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಶಾಂತಕುಮಾರ್ ಅವರೇ ಲೆಕ್ಕ ಒಪ್ಪಿಸುತ್ತಿದ್ದರು’ ಎಂಬ ಸಂಗತಿಯೂ ಪಟ್ಟಿಯಲ್ಲಿದೆ.

ಪರೀಕ್ಷೆ ನಂತರ ಎಡಿಜಿಪಿಗೆ ಭಯ: ‘2021ರ ಅಕ್ಟೋಬರ್ 3ರಂದು ರಾಜ್ಯದ 92 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಒಎಂಆರ್‌ ಪ್ರತಿಗಳು ಭದ್ರತಾ ಕೊಠಡಿ ಸೇರಿದ್ದವು. ಈ ಅವಧಿಯಲ್ಲಿ ಶಾಂತಕುಮಾರ್ ಹಾಗೂ ಇತರರು, ಬೆಂಗಳೂರಿನ 27 ಅಭ್ಯರ್ಥಿಗಳಿಂದ ಎರಡನೇ ಕಂತಿನ ರೂಪದಲ್ಲಿ ₹ 2.50 ಕೋಟಿ ಪಡೆದಿದ್ದರು’ ಎಂಬ ಮಾಹಿತಿಯನ್ನು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

‘₹ 2.50 ಕೋಟಿ ಲೆಕ್ಕವನ್ನು ಕೆಲದಿನ ಬಿಟ್ಟು ಎಡಿಜಿಪಿಗೆ ತಿಳಿಸಿದ್ದ ಶಾಂತಕುಮಾರ್, ಹಣವನ್ನು ಪಡೆಯು
ವಂತೆ ಕೋರಿದ್ದರು. ಅಷ್ಟರಲ್ಲೇ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಕೆಲವು ಅಭ್ಯರ್ಥಿಗಳು, ಗೃಹ ಸಚಿವ ಹಾಗೂ ಮುಖ್ಯಮಂತ್ರಿಗೆ ದೂರು ನೀಡಿದ್ದರು. ಅಕ್ರಮ ಬಯಲಾಗಬಹುದೆಂದು ಹೆದರಿದ್ದ ಎಡಿಜಿಪಿ, ₹ 2.50 ಕೋಟಿ ಪಡೆಯಲು ನಿರಾಕರಿಸಿದ್ದರು.’

‘ಎಡಿಜಿಪಿ ಬೇಡವೆಂದ ಹಣವನ್ನು ತಮ್ಮ ಬಳಿ ಇಟ್ಟುಕೊಳ್ಳಲು ಹೆದರಿದ್ದ ಶಾಂತಕುಮಾರ್, ಅದೇ ಹಣವನ್ನು ನೇಮಕಾತಿ ವಿಭಾಗದ ಎಫ್‌ಡಿಎ ಹರ್ಷನಿಗೆ ನೀಡಿದ್ದರು. ಆತ, ಹಣವನ್ನು ಎಫ್‌ಡಿಎ ಶ್ರೀನಿವಾಸ್‌ಗೆ ಕೊಟ್ಟಿದ್ದ’ ಎಂಬ ಮಾಹಿತಿಯೂ ಪಟ್ಟಿಯಲ್ಲಿದೆ.

‘ಅಕ್ರಮದ ತನಿಖೆ ಕೈಗೊಂಡಾಗ, ಶ್ರೀನಿವಾಸ್ ಮನೆ ಮೇಲೆ ದಾಳಿ ಮಾಡಿ ಸ್ವಲ್ಪ ಹಣ ಜಪ್ತಿ ಮಾಡಲಾಯಿತು. ಈತನ ಸ್ನೇಹಿತರು ಸಹ ಹಣ ತಂದುಕೊಟ್ಟರು. ಒಟ್ಟು ₹ 2.50 ಕೋಟಿ ಜಪ್ತಿಯಾಯಿತು’ ಎಂಬ ಸಂಗತಿಯನ್ನೂ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

‘ಹೆಸರು ಬಾಯ್ಬಿಡದಂತೆ ಎಡಿಜಿಪಿ ಎಚ್ಚರಿಕೆ’

‘ಪಿಎಸ್‌ಐ ನೇಮಕಾತಿ ಅಕ್ರಮದ ಬಗ್ಗೆ ಸಿಐಡಿ ತನಿಖೆ ಆರಂಭವಾಗುತ್ತಿದ್ದಂತೆ ಹೆದರಿದ್ದ ಎಡಿಜಿಪಿ ಅಮ್ರಿತ್ ಪೌಲ್, ತಮ್ಮ ಹೆಸರು ಬಾಯ್ಬಿಡದಂತೆ ಎಚ್ಚರಿಕೆ ನೀಡಿದ್ದರು. ಇದೇ ಕಾರಣಕ್ಕೆ ಹಲವು ಆರೋಪಿಗಳು, ಎಡಿಜಿಪಿ ಹೆಸರು ಹೇಳಿರಲಿಲ್ಲ’ ಎಂದು ಡಿವೈಎಸ್ಪಿ ಶಾಂತಕುಮಾರ್, ಸಿಐಡಿ ಎದುರು ಹೇಳಿದ್ದಾರೆ. ಈ ಅಂಶವನ್ನೂ ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.