ADVERTISEMENT

ಪಿಎಸ್‌ಐ ಹಗರಣ: ‘ಸಿಐಡಿ’ ಕಣ್ತಪ್ಪಿಸಿ ಒಎಂಆರ್‌ ತಿದ್ದುಪಡಿ

ಪರೀಕ್ಷೆ ಮರುದಿನವೇ ಕೀಲಿ ಕೈ ಕೊಟ್ಟಿದ್ದ ಎಡಿಜಿಪಿ

ಸಂತೋಷ ಜಿಗಳಿಕೊಪ್ಪ
Published 2 ಆಗಸ್ಟ್ 2022, 21:15 IST
Last Updated 2 ಆಗಸ್ಟ್ 2022, 21:15 IST
   

ಬೆಂಗಳೂರು: ಪಿಎಸ್‌ಐ ನೇಮಕಾತಿಗಾಗಿ ಪರೀಕ್ಷೆ ಬರೆದಿದ್ದ 27 ಅಭ್ಯರ್ಥಿಗಳ ಒಎಂಆರ್ ಪ್ರತಿಗಳನ್ನು ನೇಮಕಾತಿವಿಭಾಗದ ಪ್ರಥಮದರ್ಜೆ ಸಹಾಯಕರಾದ (ಎಫ್‌ಡಿಎ) ಹರ್ಷ, ಶ್ರೀನಿವಾಸ್ ಅವರೇ ತಿದ್ದುಪಡಿ ಮಾಡಿದ್ದರೆಂಬುದು ತನಿಖೆಯಿಂದ ಹೊರಬಿದ್ದಿದೆ.

‘ವಿಭಾಗದ ಮುಖ್ಯಸ್ಥ ಎಡಿಜಿಪಿ ಅಮ್ರಿತ್ ಪೌಲ್ ಹಾಗೂ ಡಿವೈಎಸ್ಪಿ ಶಾಂತಕುಮಾರ್ ಅವರ ಸೂಚನೆಯಂತೆ ತಿದ್ದುಪಡಿ ನಡೆದಿತ್ತು. ಈ ಬಗ್ಗೆ ಹರ್ಷ, ಶ್ರೀನಿವಾಸ್ ತಪ್ಪೊಪ್ಪಿಗೆ ನೀಡಿದ್ದಾರೆ’ ಎಂದು ಅಧಿಕಾರಿಗಳು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

‘ಅರಮನೆ ರಸ್ತೆಯಲ್ಲಿ ಸಿಐಡಿ ಕಚೇರಿಗಳಿವೆ. ಮುಖ್ಯಕಟ್ಟಡದಲ್ಲಿ ಎಡಿಜಿಪಿ, ಐಜಿಪಿ ಅವರ ಕೊಠಡಿ ಹಾಗೂ
ಅನೆಕ್ಸ್‌–1ರ ಕಟ್ಟಡದಲ್ಲಿ ಸಿಐಡಿಯ ಎಸ್ಪಿಗಳ ಕೊಠಡಿಗಳಿವೆ. ಇದೇ ಕಟ್ಟಡದಲ್ಲೇ ಪೊಲೀಸ್ ನೇಮಕಾತಿ ವಿಭಾಗದ ಕಚೇರಿಯಿದ್ದು, ನೆಲ ಮಹಡಿಯಕೊಠಡಿಯನ್ನೇ ಭದ್ರತಾ ಕೊಠಡಿಯನ್ನಾಗಿ ಮಾಡಿಕೊಳ್ಳಲಾಗಿತ್ತು.’

ADVERTISEMENT

‘ಅಧಿಕಾರಿಗಳು ಹಾಗೂ ಸಿಬ್ಬಂದಿ ನಿತ್ಯ 10.30ಕ್ಕೆ ಕಚೇರಿಗೆ ಬರುತ್ತಾರೆ. ಬಳಿಕ, ಕೆಲಸ ನಿಮಿತ್ತ ನೇಮಕಾತಿ ವಿಭಾಗ ಹಾಗೂ ಭದ್ರತಾ ಕೊಠಡಿ ಎದುರು ಓಡಾಡುತ್ತಿರುತ್ತಾರೆ. ಇದನ್ನು ತಿಳಿದಿದ್ದ ಶಾಂತಕುಮಾರ್ ಹಾಗೂ ಎಫ್‌ಡಿಎಗಳು, ಸಿಐಡಿ ಕಣ್ತಪ್ಪಿಸಿ ನಸುಕಿನಲ್ಲೇ ಒಎಂಆರ್ ಪ್ರತಿ ತಿದ್ದುಪಡಿ ಮಾಡಲು ಸಂಚು ರೂಪಿಸಿದ್ದರು’ ಎಂಬ ಮಾಹಿತಿಯೂ ಪಟ್ಟಿಯಲ್ಲಿದೆ.

ಪರೀಕ್ಷೆ ಮರುದಿನವೇ ಕೀ ಕೊಟ್ಟ ಎಡಿಜಿಪಿ: ‘2021ರ ಅಕ್ಟೋಬರ್ 3ರಂದು ಪರೀಕ್ಷೆ ನಡೆದಿತ್ತು. ಅಭ್ಯರ್ಥಿಗಳ ಒಎಂಆರ್ ಮೂಲ ಪ್ರತಿಗಳನ್ನು ಟ್ರಂಕ್‌ನಲ್ಲಿ ಸಂಗ್ರಹಿಸಿ, ಬೆಂಗಳೂರಿನಲ್ಲಿರುವ ನೇಮಕಾತಿ ವಿಭಾಗದ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿತ್ತು. ಕೊಠಡಿಗೆ ಹಾಕಿದ್ದ ಬೀಗಕ್ಕೆ ಎರಡು ಕೀಗಳಿದ್ದವು. ಒಂದು ಎಡಿಜಿಪಿ ಅಮ್ರಿತ್ ಪೌಲ್ ಬಳಿ ಇದ್ದರೆ, ಮತ್ತೊಂದು ವಿಭಾಗದ ಸೂಪರಿಂಟೆಂಡೆಂಟ್‌ ಬಳಿ ಇತ್ತು’ ಎಂಬ ಮಾಹಿತಿಯನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

‘ಅಕ್ಟೋಬರ್‌ 4ರಂದು ಅಮ್ರಿತ್ ಪೌಲ್ ತಮ್ಮ ಬಳಿ ಇದ್ದ ಕೀಯನ್ನು ಶಾಂತಕುಮಾರ್‌ಗೆ ನೀಡಿದ್ದರು. ಅದೇ ಕೀಯನ್ನು ಹರ್ಷ ಹಾಗೂ ಶ್ರೀನಿವಾಸ್‌ಗೆ ನೀಡಿದ್ದ ಶಾಂತಕುಮಾರ್ ಯಾರಿಗೂ ಅನುಮಾನ ಬಾರದಂತೆ ಒಎಂಆರ್ ತಿದ್ದಲು ಸೂಚಿಸಿದ್ದರು.’

‘ಅಕ್ಟೋಬರ್ 7, 8 ಹಾಗೂ 16ನೇ ತಾರೀಕಿನಂದು ಬೆಳಿಗ್ಗೆ 6.30ರಿಂದ ಬೆಳಿಗ್ಗೆ 9.30ರ ಅವಧಿಯಲ್ಲಿ ಭದ್ರತಾ ಕೊಠಡಿ ತೆರೆದಿದ್ದ ಆರೋಪಿಗಳು, ತಮಗೆ ಸೂಚಿಸಿದ್ದ ಅಭ್ಯರ್ಥಿಗಳ ಒಎಂಆರ್ ಪ್ರತಿಗಳನ್ನು ಟ್ರಂಕ್‌ನಿಂದ ಹೊರತೆಗೆದು ತಿದ್ದುಪಡಿ ಮಾಡಿದ್ದರು.ಬೆಳಿಗ್ಗೆ 10.30ಕ್ಕೆ ಎಂದಿನಂತೆ ಕಚೇರಿಕೆಲಸಕ್ಕೆ ಹಾಜರಾಗಿದ್ದರು’ ಎಂಬ ಮಾಹಿತಿಯೂ ಆರೋಪ ಪಟ್ಟಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.