ADVERTISEMENT

ಪಿಎಸ್ಐ ನೇಮಕಾತಿ ಹಗರಣ: ಕಾಂಗ್ರೆಸ್‌ ವರ್ತನೆ ಅನುಮಾನ ಸೃಷ್ಟಿಸುತ್ತಿದೆ– ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮೇ 2022, 7:24 IST
Last Updated 2 ಮೇ 2022, 7:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣದ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ವರ್ತನೆಯೇ ಅನುಮಾನ ಸೃಷ್ಟಿಸುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ‘ನೇಮಕಾತಿ ಹಗರಣದ ನಂಟು ಕಾಂಗ್ರೆಸ್‌ ಜೊತೆ ಅಕ್ಷಯವಾಗುತ್ತಿದೆ. ಹಗರಣದ ಮೂಲ ಕೆಪಿಸಿಸಿಯ ಭ್ರಷ್ಟಾಧ್ಯಕ್ಷ ಹಾಗೂ ಖರ್ಗೆ ಕುಟುಂಬದ ಸುತ್ತ ತಿರುಗುತ್ತಿದೆ. ರಾಜಕೀಯ ಅಸ್ಥಿರತೆ ಮೂಡಿಸಲು ಟೂಲ್ ಕಿಟ್ ಮಾದರಿಯಲ್ಲಿ ತಂತ್ರ ಹೆಣೆದ ಕಾಂಗ್ರೆಸ್ಸಿಗರು ಈಗ ಅದರೊಳಗೆ ತಾವೇ ಬಿದ್ದು ಬೇಸಗೆಯಲ್ಲೂ ಗಡ ಗಡ ನಡುಗುತ್ತಿದ್ದಾರೆ’ ಎಂದು ಹೇಳಿದೆ.

‘ಆರೋಪಿ ದಿವ್ಯಾ ಹಾಗರಗಿ ತನಿಖಾಧಿಕಾರಿಗಳಿಗೆ ನೀಡಿರುವ ಹೇಳಿಕೆ ಪ್ರಕಾರ ರುದ್ರೇಗೌಡ ಪಾಟೀಲ್ ಸಹೋದರರಿಂದ ಹಣ ಪಡೆಯಲಾಗಿದೆ. ಹಾಗಾದರೆ ಹಗರಣದ‌‌ ಹಿಂದಿರುವ ಶಕ್ತಿಗಳು ಕಾಂಗ್ರೆಸ್ ನಾಯಕರಲ್ಲವೇ? ಕ್ವೀನ್ಸ್ ರಸ್ತೆಯಲ್ಲಿರುವ ಭ್ರಷ್ಟಾಧ್ಯಕ್ಷರ ಅಕ್ರಮ ಹಣದ ಬ್ಯಾಂಕ್‌ಗೆ ಈ ಹಗರಣದ ಹಣ ತಲುಪಿರಬಹುದೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

ADVERTISEMENT

‘ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಹಾಗೂ ವರ್ತನೆ ನೋಡಿದರೆ ಈ ಹಗರಣದ ಬಗ್ಗೆ ಅಪಾರ ಜ್ಞಾನ ಹಾಗೂ ಸಂಬಂಧ ಹೊಂದಿರುವಂತೆ ಕಾಣುತ್ತಿದೆ. ಪ್ರಿಯಾಂಕ್‌ ಅವರೇ, ಸಿಐಡಿ ನೋಟಿಸ್‌ಗೆ ನೇರವಾಗಿ ಉತ್ತರಿಸಲು ಅಳುಕೇಕೆ? ಹಗರಣದಲ್ಲಿ ನಿಮ್ಮ ಪಾಲು ಹಾಗೂ ಭಾಗ ಏನೆಂಬುದು ಬಯಲಾಗಬಹುದೆಂಬ ಭಯ ನಿಮ್ಮನ್ನು ಕಾಡುತ್ತಿದೆಯೇ?’ ಎಂದು ಕೇಳಿದೆ.

‘ದಿವ್ಯಾ ಹಾಗರಗಿ ಬಂಧನಕ್ಕೆ 18 ದಿನ ಏಕಾಯ್ತು ಎಂದು ಪ್ರಶ್ನಿಸುವ ಪ್ರಿಯಾಂಕ್‌ ಖರ್ಗೆ ಅವರಿಗೆ ತಮ್ಮದೇ ಪಕ್ಷದ ಮುಖಂಡರು ಅಕ್ರಮದಲ್ಲಿರುವುದು ಗೊತ್ತೇ ಆಗಿಲ್ಲವೇ? ಖರ್ಗೆಯವರೇ, 2 ಬಾರಿ ನೋಟಿಸ್ ನೀಡಿದರೂ ತಪ್ಪಿಸಿಕೊಂಡು ಓಡಾಡುತ್ತಿರುವ ನಿಮ್ಮ ಬಗ್ಗೆಯೂ ಜನ ಅನುಮಾನ ಪಡುತ್ತಿದ್ದಾರೆ, ಏನು ಹೇಳುತ್ತೀರಿ ಇದಕ್ಕೆ?’ ಎಂದು ಬಿಜೆಪಿ ಟ್ವೀಟಿಸಿದೆ.

‘ಪಿಎಸ್ಐ ನೇಮಕ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ, ತನಿಖೆಯ ವಿಚಾರದಲ್ಲಿ ಎಲ್ಲಿಯೂ ಎಡವಿಲ್ಲ. ವಿಳಂಬವೂ ಮಾಡಿಲ್ಲ. ಹಗರಣದ ಹಿನ್ನೆಲೆಯಲ್ಲಿ ನೇಮಕಾತಿ ರದ್ದು ಮಾಡಲಾಗಿದೆ, ಆರೋಪಿಗಳನ್ನು ಕಾನೂನು ವ್ಯಾಪ್ತಿಗೆ ಒಳಪಡಿಸಲಾಗುತ್ತಿದೆ. ಇಷ್ಟರ ಮೇಲೂ ಕಾಂಗ್ರೆಸ್ ಏಕೆ ಕಳವಳಗೊಳ್ಳುತ್ತಿದೆ?’ ಎಂದು ಪ್ರಶ್ನಿಸಿದೆ.

‘ಪಿಎಸ್ಐ ನೇಮಕ ಹಗರಣದ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ವರ್ತನೆಯೇ ಅನುಮಾನ ಸೃಷ್ಟಿಸುತ್ತಿದೆ. ಸಿದ್ದರಾಮಯ್ಯ ಪರೀಕ್ಷೆ ರದ್ದುಪಡಿಸಿದ್ದು ಸರಿ ಎನ್ನುತ್ತಿದ್ದರೆ, ಭ್ರಷ್ಟಾಧ್ಯಕ್ಷ ಡಿಕೆಶಿ, ಪ್ರಿಯಾಂಕ್ ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್‌ ನಾಯಕರೇ, ನೀವೆಲ್ಲ ಒಂದೆಡೆ ಕೂತು ಮೊದಲು ಒಮ್ಮತದ ನಿರ್ಧಾರ ಕೈಗೊಳ್ಳಿ’ ಎಂದು ಬಿಜೆಪಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.