
ಬೆಂಗಳೂರು: ‘ಇಂದಿನ ಜಾಗತಿಕ ಅವಶ್ಯಗಳಿಗೆ ಅನುಗುಣವಾಗಿ ಉತ್ಕೃಷ್ಟ ಶಿಕ್ಷಣ ಹಾಗೂ ಮೂಲಸೌಕರ್ಯ ಒಳಗೊಂಡ ಒಂದು ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) ತೆರೆಯುತ್ತಿರುವುದು ಶಾಲಾ ಶಿಕ್ಷಣ ಇಲಾಖೆಯ ಸಾಮಾಜಿಕ ಬದ್ಧತೆಯನ್ನು ಸಾಬೀತುಪಡಿಸಿವೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಎರಡೂವರೆ ವರ್ಷಗಳಲ್ಲಿ ಶಾಲಾ ಶಿಕ್ಷಣ ಇಲಾಖೆ ಹಲವು ದೂರದೃಷ್ಟಿ ಯೋಜನೆಗಳನ್ನು ರೂಪಿಸಿದೆ. ಶಿಕ್ಷಣ ಕ್ಷೇತ್ರಕ್ಕೆ ಹೊಸ ದಿಕ್ಕನ್ನು ನೀಡಿದೆ. ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷಾ ವ್ಯವಸ್ಥೆಯಲ್ಲಿನ ಸುಧಾರಣೆಗಳು, 15 ಸಾವಿರ ಶಿಕ್ಷಕರ ನೇಮಕಾತಿ, ಶಾಲಾ ಆರಂಭಕ್ಕೂ ಮೊದಲೇ ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರ ನೇಮಕಾತಿಯ ಕ್ರಮಗಳು ಮಹತ್ವದ ನಿರ್ಧಾರವಾಗಿವೆ ಎಂದು ಶ್ಲಾಘಿಸಿದ್ದಾರೆ.
ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆ ಐತಿಹಾಸಿಕ ನಿರ್ಧಾರ. ಕೌಶಲಾಭಿವೃದ್ಧಿಗೆ ಒತ್ತು ನೀಡುತ್ತಿರುವುದು ಮಕ್ಕಳ ಭವಿಷ್ಯದ ಉದ್ಯೋಗದ ಬುನಾದಿ. ಹಾಗೆಯೇ, ಪ್ರತಿ ಮಗುವು ಮಾತೃಭಾಷೆಯಲ್ಲಿ ಕಲಿತರೆ ಆತ್ಮವಿಶ್ವಾಸ, ಮೌಲ್ಯ ಹಾಗೂ ಸಾಮಾಜಿಕ ಜವಾಬ್ದಾರಿ ಇರುವ ನಾಗರಿಕನಾಗಿ ರೂಪುಗೊಳ್ಳಲು ಸಾಧ್ಯ. ಸಾಮಾಜಿಕ ಮತ್ತು ಆರ್ಥಿಕವಾಗಿ ದುರ್ಬಲರಾದ ಮಕ್ಕಳನ್ನು ಪೋಷಿಸುವ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಬೋಧನೆಗೆ ಒತ್ತು ನೀಡಬೇಕು. ಕನ್ನಡ ಕಲಿಕೆಗೆ ವಿಶೇಷ ನೀತಿ ರೂಪಿಸಬೇಕು ಎಂದು ಕೋರಿದ್ದಾರೆ.
ಇಂಗ್ಲಿಷ್ ಮಾಧ್ಯಮದ ಪ್ರಾಬಲ್ಯ, ಖಾಸಗಿ ಶಾಲೆಗಳ ಆಕರ್ಷಣೆ ಮತ್ತು ಪಾಲಕರ ಸಾಮಾನ್ಯ ತಪ್ಪು ಕಲ್ಪನೆಗಳಿಂದ ಅನುದಾನಿತ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕನ್ನಡ ಭಾಷೆಯನ್ನು ಉಳಿಸುವ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಆರಂಭಿಸಲಾದ ಕನ್ನಡ ಶಾಲೆಗಳ ಬಲವರ್ಧನೆಗೆ ಸರ್ಕಾರ ಮುಂದಾಗಬೇಕು. 1995ರ ನಂತರ ಕನ್ನಡ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸಲಾಗಿದೆ. 1995–2000 ಅವಧಿಯಲ್ಲಿ ಆರಂಭವಾದ 1,464 ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸಲು ತಗುಲುವ ವೆಚ್ಚ ಅಂದಾಜು ₹922.64 ಕೋಟಿ ಇದೆ. ಶಿಕ್ಷಣ ಇಲಾಖೆಯ ಈ ಪ್ರಸ್ತಾವಕ್ಕೆ ಸರ್ಕಾರ ಅನುಮೋದನೆ ನೀಡಿದರೆ ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಶತಮಾನ ಪೂರೈಸಿರುವ 3,200 ಸರ್ಕಾರಿ ಶಾಲೆಗಳಿಗೆ ಆಧುನಿಕತೆಗೆ ತಕ್ಕಂತೆ ಕಾಯಕಲ್ಪ ನೀಡಬೇಕು. ಶಾಲಾ ಆಸ್ತಿ ಸಂರಕ್ಷಣೆಗೆ ಕಾಲಮಿತಿ ನಿಗದಿ ಮಾಡಬೇಕು. ಅನುದಾನಿತ ಕನ್ನಡ ಮಧ್ಯಮ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಬೇಕು ಎಂಬ ಅಂಶಗಳನ್ನು ಒಳಗೊಂಡ ವರದಿಯನ್ನು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಚಿವ ಮಧು ಬಂಗಾರಪ್ಪ ಅವರಿಗೆ ನೀಡಿದ್ದು, ಬಜೆಟ್‌ನಲ್ಲಿ ಪರಿಗಣಿಸಬೇಕು ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.