
ಬೆಂಗಳೂರು: ‘ಪೂರ್ವ ಪ್ರಾಥಮಿಕದಿಂದ ಪಿಯುವರೆಗೆ ಒಂದೇ ಕ್ಯಾಂಪಸ್‌ನಲ್ಲಿ ಶಿಕ್ಷಣ ಸಿಗುತ್ತಿರುವುದರಿಂದ ಕರ್ನಾಟಕ ಪಬ್ಲಿಕ್ ಶಾಲೆಗಳತ್ತ (ಕೆಪಿಎಸ್) ಪೋಷಕರು ಒಲವು ತೋರುತ್ತಿದ್ದಾರೆ. ಖಾಸಗಿ ಶಾಲೆಗಳಿಂದಲೂ ಮಕ್ಕಳು ಬಂದು ಪ್ರವೇಶ ಪಡೆಯುತ್ತಿದ್ದಾರೆ’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
‘ಪ್ರಜಾವಾಣಿ’ ಕಚೇರಿಯಲ್ಲಿ ಶುಕ್ರವಾರ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.
‘ಕೆಪಿಎಸ್‌ಗಳಿಗೆ ಅಧಿಕ ಸಂಖ್ಯೆಯಲ್ಲಿ ಮಕ್ಕಳು ಸೇರುತ್ತಿರುವುದರಿಂದ ಆ ಶಾಲೆಯ ಸುತ್ತಲ ಕೆಲ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಒಂದು ಮಗುವಿದ್ದರೂ ಆ ಶಾಲೆಗಳನ್ನು ಮುಚ್ಚುವುದಿಲ್ಲ. ಶಿಕ್ಷಕರು ಸೇರಿದಂತೆ ಇತರೆ ಎಲ್ಲ ಸೌಲಭ್ಯವನ್ನೂ ಒದಗಿಸಲಾಗುವುದು. ಕೆಪಿಎಸ್‌ಗೆ ದೂರದಿಂದ ನಿತ್ಯ ಬಂದು ಹೋಗುವ ಮಕ್ಕಳಿಗೆ ಬಸ್ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿದೆ’ ಎಂದರು.
‘ಕೆಪಿಎಸ್‌ಗಳಲ್ಲಿ ದ್ವಿಭಾಷಾ ಮಾಧ್ಯಮ, ಪೂರ್ವ ಪ್ರಾಥಮಿಕ ಶಾಲೆ, ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಕಲಿಕೆ, ಕೌಶಲ ತರಬೇತಿ, ಇಂಗ್ಲಿಷ್ ಭಾಷಾ ಸಂವಹನ ಸೇರಿದಂತೆ ಉತ್ತಮ ಕಲಿಕೆಯ ವಾತಾವರಣ ಕಲ್ಪಿಸಲಾಗಿದೆ. ಇದರಿಂದ ಮಕ್ಕಳ ಪ್ರವೇಶ ಗಣನೀಯವಾಗಿ ಹೆಚ್ಚಾಗಿದೆ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 1,008 ಶಾಲೆಗಳಿಗೆ ಅನುಮತಿ ನೀಡಿದ ಕೆಲ ದಿನಗಳಲ್ಲೇ 42,000 ಮಕ್ಕಳು ಪೂರ್ವ ಪ್ರಾಥಮಿಕಕ್ಕೆ ಪ್ರವೇಶ ಪಡೆದಿದ್ದರು. ಪ್ರಸಕ್ತ ಶೈಕ್ಷಣಿಕ ಸಾಲಿನಿಂದ 4,137 ಶಾಲೆಗಳಲ್ಲಿ ಒಂದನೇ ತರಗತಿಯಿಂದ ದ್ವಿಭಾಷಾ ಮಾಧ್ಯಮ ತರಗತಿ ಆರಂಭಿಸಿದ್ದೇವೆ’ ಎಂದರು.
ಬಜೆಟ್‌ನಲ್ಲಿ ಘೋಷಿಸಿದ ಅನುದಾನ, ಎಡಿಬಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನೀಡಿದ ಹಣದಲ್ಲಿ ಕೆಪಿಎಸ್ ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ. ಮುಂದಿನ ವರ್ಷದ ಒಳಗೆ 1,000 ಕೆಪಿಎಸ್ ಆರಂಭಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.
ಶಾಲೆ ತೊರೆಯುವವರ ತಡೆಗೆ ಕ್ರಮ: ‘ಪ್ರೌಢಶಾಲಾ ಮಟ್ಟದಲ್ಲಿ ಶಾಲೆ ಬಿಡುವವರ ಪ್ರಮಾಣ ಕರ್ನಾಟಕದಲ್ಲೇ ಹೆಚ್ಚು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಈ ಹಿಂದಿನ ಸರ್ಕಾರಗಳು ಶಿಕ್ಷಣ ಇಲಾಖೆಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಹೀಗಾಗಿದೆ. ಶಿಕ್ಷಕರು ಮತ್ತು ಶಾಲೆಗಳಲ್ಲಿ ಅಗತ್ಯ ಕೊಠಡಿಗಳು ಇಲ್ಲದಿರುವುದರಿಂದ ಮಕ್ಕಳು ಅರ್ಧದಲ್ಲೇ ಶಾಲೆ ಬಿಡುತ್ತಿದ್ದರು. ಈ ಅಂಶಗಳ ಆಧಾರದಲ್ಲಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದು ಮಧು ಬಂಗಾರಪ್ಪ ಹೇಳಿದರು.
‘13,000 ಶಿಕ್ಷಕರ ನೇಮಕದಿಂದ ಹಲವು ಶಾಲೆಗಳಲ್ಲಿ ಪರಿಸ್ಥಿತಿ ಸುಧಾರಿಸಿದೆ. ಈ ಮೊದಲು ಶೈಕ್ಷಣಿಕ ವರ್ಷ ಆರಂಭವಾದ ನಂತರ ಅತಿಥಿ ಶಿಕ್ಷಕರನ್ನು ನೇಮಕ ಮಾಡುತ್ತಿದ್ದರು. ಈಗ ಆ ನೀತಿಯನ್ನು ಬದಲಾಯಿಸಿದ್ದು, ಶೈಕ್ಷಣಿಕ ವರ್ಷ ಆರಂಭಕ್ಕೂ ಮೊದಲೇ ಅಗತ್ಯವಿರುವಷ್ಟು ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗುತ್ತಿದೆ. ಶೈಕ್ಷಣಿಕ ಚಟುವಟಿಕೆಗಳು ಅಡೆತಡೆ ಇಲ್ಲದೆ ನಡೆಯುತ್ತಿವೆ’ ಎಂದು ವಿವರಿಸಿದರು.
ಸರ್ಕಾರಿ ಶಾಲೆಗಳ ಆಸ್ತಿಗಳನ್ನು ರಕ್ಷಿಸಲು ವಿಶೇಷ ಮಸೂದೆ ಸಿದ್ಧಪಡಿಸಲಾಗುತ್ತಿದೆ. ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲೇ ಮಸೂದೆ ಮಂಡಿಸಲಾಗುವುದು. ಶಾಲಾ ಮೈದಾನ ಜಮೀನು ಕಟ್ಟಡಗಳ ಒತ್ತುವರಿಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು ಎಂದರು. ಶಾಲೆಗಳಿಗೆ ಹಿಂದೆ ನೀಡಿದ್ದ ಜಮೀನು ಆಸ್ತಿ ಮರಳಿಸಲು ಕೆಲವರು ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದಾರೆ. 15 ಸಾವಿರಕ್ಕೂ ಹೆಚ್ಚು ಒತ್ತುವರಿ ಪ್ರಕರಣಗಳು ಇವೆ. ಈ ಎಲ್ಲ ಸಮಸ್ಯೆಗಳಿಗೂ ಹೊಸ ಕಾಯ್ದೆ ಪರಿಹಾರ ಒದಗಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ವಿಲೀನಗೊಳ್ಳುವ ಇತರೆ ಶಾಲೆಗಳ ಕಟ್ಟಡಗಳನ್ನು ಸ್ಥಳೀಯ ಸ್ವಸಹಾಯ ಸಂಘಗಳಿಗೆ ನೀಡಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದರು. ‘ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಕೆಪಿಎಸ್ ಸ್ಥಾಪಿಸುವ ಉದ್ದೇಶವಿದೆ. ಇತರೆ ಶಾಲೆಗಳ ಮಕ್ಕಳು ಅಲ್ಲಿಗೆ ಸೇರುವುದರಿಂದ ಅಂತಹ ಶಾಲೆಗಳ ಕಟ್ಟಡಗಳನ್ನು ಸಂರಕ್ಷಿಸಬೇಕಾಗುತ್ತದೆ. ಸರ್ಕಾರಿ ಶಾಲೆಗಳ ಕಟ್ಟಡ ಜಮೀನು ಸೇರಿದಂತೆ ಯಾವುದೇ ಆಸ್ತಿಯನ್ನು ನಿರ್ಲಕ್ಷ್ಯಮಾಡುವುದಿಲ್ಲ’ ಎಂದರು. ಗ್ರಾಮೀಣ ಪ್ರದೇಶದ ಸ್ವಸಹಾಯ ಸಂಘಗಳು ಈಗಾಗಲೇ ಖಾಲಿ ಕಟ್ಟಡಗಳನ್ನು ಬಳಸಿಕೊಳ್ಳಲು ಅನುಮತಿ ನೀಡುವಂತೆ ಕೋರಿವೆ. ನಿತ್ಯದ ಚಟುವಟಿಕೆಗಳಿಗೆ ಸದ್ಬಳಕೆ ಮಾಡಿಕೊಳ್ಳಲು ಬಯಸಿವೆ. ಕೆಲ ಗ್ರಾಮಗಳಲ್ಲಿ ಅಂಬೇಡ್ಕರ್ ಭವನದಂತಹ ಸಮುದಾಯ ಭವನಗಳ ಅವಶ್ಯ ಇದೆ. ಸಂಘಸಂಸ್ಥೆಗಳಿಗೆ ನೀಡುವುದರಿಂದ ನಿತ್ಯದ ನಿರ್ವಹಣೆಗೂ ಅನುಕೂಲವಾಗುತ್ತದೆ ಎಂದು ಹೇಳಿದರು. ಬಳಸದೆ ಉಳಿದ ಶಾಲಾ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಿಲ್ಲಾ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗುವುದು. ಆಸಕ್ತ ನೋಂದಾಯಿತ ಸಂಘಟನೆಗಳು ಜಿಲ್ಲಾ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಬಳಕೆ ಅನುಮತಿಯನ್ನು ಪಡೆಯಬಹುದಾಗಿದೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರಿ ಶಾಲೆಗಳ ಆವರಣ ಹೋರ್ಡಿಂಗ್ ಗೋಡೆಗಳ ಮೇಲೆ ಸದಭಿರುಚಿಯ ಜಾಹೀರಾತು ಪ್ರಕಟಿಸಲು ಅವಕಾಶ ನೀಡುವ ಕುರಿತು ಚಿಂತನೆ ನಡೆದಿದೆ. ಜಾಹೀರಾತುಗಳಿಂದ ಬರುವ ಹಣವನ್ನು ಆಯಾ ಶಾಲೆಗಳ ಮೂಲಸೌಕರ್ಯಕ್ಕೆ ಬಳಸಿಕೊಳ್ಳಲು ಅನುಮತಿ ನೀಡಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದರು. 2026–27ನೇ ಸಾಲಿಗೆ ಪಠ್ಯಪುಸ್ತಕ ಪರಿಷ್ಕರಣೆ ಮಾಡುವ ಆಲೋಚನೆ ಇಲ್ಲ. ನೀತಿ ಶಿಕ್ಷಣವನ್ನು ಅಳವಡಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ವಾರದಲ್ಲಿ ಒಂದು ಅವಧಿ ಕಡ್ಡಾಯ ಬೋಧನೆ ಇರುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.