
ಬೆಂಗಳೂರು: ಕ್ವಾಂಟಮ್ ತಂತ್ರಜ್ಞಾನದ ಬಗ್ಗೆ ಸಮಗ್ರ ಮಾಹಿತಿ ಪ್ರಚುರಪಡಿಸಲು ‘ಕರ್ನಾಟಕ ಕ್ವಾಂಟಮ್ ಎಕೋಸಿಸ್ಟಮ್ ಮ್ಯಾಪ್’ ತಯಾರಿಸಲು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸ್ವಿಟ್ಜರ್‌ಲೆಂಡ್‌ನಲ್ಲಿ ಕ್ವಾಂಟಮ್ ತಂತ್ರಜ್ಞಾನದ ಬಗ್ಗೆ ಸಮಗ್ರ ಮಾಹಿತಿ ಪ್ರಚುರಪಡಿಸಲು ‘ಸ್ವಿಸ್‌ನೆಕ್ಸ್ ಕ್ವಾಂಟಮ್ ಮ್ಯಾಪ್’ ಸಿದ್ಧಪಡಿಸಿದೆ. ಅದೇ ಮಾದರಿಯಲ್ಲಿ ಇಲ್ಲೂ ಕ್ವಾಂಟಮ್ ಎಕೋಸಿಸ್ಟಮ್ ಮ್ಯಾಪ್ ಸಿದ್ದಪಡಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸ್ವಿಸ್‌ನೆಕ್ಸ್ ಇಂಡಿಯಾದ ಸಿಇಓ ಮತ್ತು ಕೌನ್ಸಲ್ ಜನರಲ್ ಡಾ ಎಂಜೆಲಾ ಹೊನೆಗ್ಗರ್ ಮತ್ತು ರಾಜ್ಯದ ಅಧಿಕಾರಿಗಳ ಜತೆ ಬೋಸರಾಜು ಮಾತುಕತೆ ನಡೆಸಿದರು. ಸಭೆಯಲ್ಲಿ ಕರ್ನಾಟಕ ಮತ್ತು ಸ್ವಿಟ್ಜರ್‌ಲೆಂಡ್ ಮಧ್ಯೆ ಸಂಶೋಧನೆ ಮತ್ತು ಉದ್ಯಮಗಳ ತಂತ್ರಜ್ಞಾನ ವಿನಿಮಯಕ್ಕೆ ವೇದಿಕೆಯನ್ನು ರಚಿಸಲು ಅಗತ್ಯ ಕ್ರಮ ಕೈಗೊಳ್ಳುವ ಕುರಿತೂ ವಿವರವಾಗಿ ಚರ್ಚಿಸಲಾಯಿತು.
ಬೆಂಗಳೂರು ನಗರವು ದೇಶದ ಕ್ವಾಂಟಮ್ ನವೋದ್ಯಮದ ರಾಜಧಾನಿ. ಕ್ವಾಂಟಮ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಾಕಷ್ಟು ನವೋದ್ಯಮಗಳು ಮತ್ತು ಉದ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಹಲವಾರು ಸಂಸ್ಥೆಗಳೂ ಸಂಶೋಧನೆಯಲ್ಲಿ ತೊಡಗಿಕೊಂಡಿವೆ. ದೇಶದಲ್ಲಿಯೇ ಅತಿ ಹೆಚ್ಚು ಕ್ವಾಂಟಮ್ ಕ್ಷೇತ್ರದಲ್ಲಿ ಪ್ರಾವೀಣ್ಯತೆ ಹೊಂದಿರುವ ಮಾನವ ಸಂಪನ್ಮೂಲವೂ ಲಭ್ಯವಿದೆ ಎಂದು ಬೋಸರಾಜು ತಿಳಿಸಿದರು.
ದೇಶದಲ್ಲೇ ಮೊದಲ ಕ್ಯೂ–ಸಿಟಿಯನ್ನು ನಿರ್ಮಾಣ ಮಾಡಲು ಸರ್ಕಾರ ಭೂಮಿ ಮಂಜೂರು ಮಾಡಿದೆ. ಈ ಎಲ್ಲಾ ವಿಷಯಗಳನ್ನು ಉತ್ತಮ ರೀತಿಯಲ್ಲಿ ಪ್ರಚುರ ಪಡಿಸಲು ಮ್ಯಾಪ್ ರಚಿಸುವುದು ಅಗತ್ಯವಿದೆ ಎಂದರು.
ಈ ಪ್ರಸ್ತಾವಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸ್ವಿಸ್‌ನೆಕ್ಸ್ ಸಿಇಓ ಡಾ. ಎಂಜೆಲಾ ಹೊನೆಗ್ಗರ್ ಅವರು, ಸ್ವಿಟ್ಜರ್‌ಲೆಂಡ್ ಕ್ವಾಂಟಮ್ ಕ್ಷೇತ್ರದ ಆವಿಷ್ಕಾರ ಹಾಗೂ ಉದ್ಯಮಗಳ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದೆ. ಈ ಬಗ್ಗೆ ಅಮೆರಿಕಾ ಹಾಗೂ ಇನ್ನಿತರ ದೇಶಗಳಲ್ಲಿ ಪ್ರಚಾರ ಮಾಡುವ ಮತ್ತು ಮಾಹಿತಿಯನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಸ್ವಿಸ್‌ನೆಕ್ಸ್ ಕ್ವಾಂಟಮ್ ಮ್ಯಾಪ್ ರಚಿಸಲಾಯಿತು ಎಂದರು.
ಸ್ವಿಸ್‌ನೆಕ್ಸ್ ಕ್ವಾಂಟಮ್ ಮ್ಯಾಪ್‌ನಿಂದ ಕ್ವಾಂಟಮ್ ಕ್ಷೇತ್ರದ ಯಾವ ವಿಷಯದಲ್ಲಿ ಯಾವ ಯಾವ ಉದ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಸಹಯೋಗದ ಅವಕಾಶ ಎಲ್ಲಿದೆ ಎನ್ನುವ ಮಾಹಿತಿಯನ್ನು ಕ್ರೋಡೀಕರಿಸಲಾಗಿತ್ತು. ಇದೇ ರೀತಿ ಮ್ಯಾಪ್ ಸಿದ್ದಪಡಿಸಿದರೆ ಎರಡೂ ರಾಷ್ಟ್ರಗಳ ನಡುವೆ ವಿಚಾರ ವಿನಿಮಯದ ಮೊದಲ ಹೆಜ್ಜೆ ಯಾಗಲಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಕೆ–ಸ್ಟೆಪ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಸದಾಶಿವ ಪ್ರಭು, ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ.ಅರಿಂದಮ್ ಘೋಷ್, ಸ್ವಿಸ್‌ನೆಕ್ಸ್ ಸಂಸ್ಥೆಯ ಇನ್ನೋವೇಷನ್ ವಿಭಾಗದ ಮುಖ್ಯಸ್ಥ ರಾಹುಲ್ ಕುಲಶ್ರೇಷ್ಠ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.