ಬೆಳಗಾವಿ ತಾಲ್ಲೂಕಿನ ಬಸವನ ಕುಡಚಿಯಲ್ಲಿ ಮಂಗಳವಾರ ಸುರಿದ ಮಳೆಯಿಂದ ಬಸವೇಶ್ವರ ದೇವಸ್ಥಾನದ ಆವರಣ ಜಲಾವೃತಗೊಂಡಿತ್ತು
ಬೆಂಗಳೂರು: ಬೆಂಗಳೂರು ನಗರ, ಮೈಸೂರು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮಂಗಳವಾರ ಬಿರುಸಿನ ಮಳೆಯಾಗಿದೆ. ಕಲ್ಯಾಣ ಕರ್ನಾಟಕದ ರಾಯಚೂರು, ಕೊಪ್ಪಳ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿಯೂ ಭಾರಿ ಮಳೆಯಾಗಿದೆ. ಬಿರು ಬಿಸಿಲಿನ ಧಗೆಯು ಸ್ವಲ್ಪ
ಕಡಿಮೆಯಾಗುವಂತಾಗಿದೆ.
ಮೈಸೂರು ನಗರ, ಹೊರವಲಯದ ಹಲವು ಗ್ರಾಮಗಳಲ್ಲಿ ಸಂಜೆ ಮುಕ್ಕಾಲು ಗಂಟೆಗೂ ಹೆಚ್ಚು ಮಳೆಯಾಯಿತು. ಕೊಡಗು ಜಿಲ್ಲೆಯ ಮಡಿಕೇರಿ ನಗರ ಸೇರಿದಂತೆ ಸಿದ್ದಾಪುರ, ಗುಹ್ಯ, ಕರಡಿಗೋಡು ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಸೇರಿ ಕೆಲವೆಡೆ ಬಿರುಗಾಳಿ, ಗುಡುಗು ಸಹಿತ ಮಳೆ ಸುರಿಯಿತು.
ಮುಳ್ಳಯ್ಯನಗಿರಿ ವ್ಯಾಪ್ತಿಯಲ್ಲಿ ಸಂಜೆ ಶುರುವಾದ ಮಳೆ ಭೋರ್ಗರೆದು ಅಬ್ಬರಿಸಿತು. ಚಿಕ್ಕಮಗಳೂರು ನಗರ
ದಲ್ಲೂ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿಯಿತು. ನರಸಿಂಹರಾಜಪುರ ತಾಲ್ಲೂಕಿನ ಹಂದೂರಿನಲ್ಲಿ ಭಾರಿ ಮಳೆ ಸುರಿದಿದ್ದು, ಬಿರುಗಾಳಿಗೆ ಮರ ಬಿದ್ದು ಬೈಕ್ ಜಖಂ ಆಗಿದೆ. ಹಲವು ಮರಗಳು ಉರುಳಿವೆ.
ರಾಯಚೂರು ಜಿಲ್ಲೆಯ ಸಿಂಧನೂರು, ಲಿಂಗಸುಗೂರು, ಮುದಗಲ್, ಕವಿತಾಳ, ಬೀದರ್ ನಗರ, ಔರಾದ್, ಚಿಟಗುಪ್ಪ ಹಾಗೂ ಹುಮನಾಬಾದ್ ತಾಲ್ಲೂಕಿನ ಕೆಲವೆಡೆ ಮಳೆ ಬಿದ್ದಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಗುಡುಗು ಸಿಡಿಲು, ಆಲಿಕಲ್ಲು ಸಹಿತ ಮಳೆಯಾಗಿದೆ. ಬಳ್ಳಾರಿ ನಗರದಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಬಳ್ಳಾರಿ ತಾಲ್ಲೂಕಿನ ಸಂಜೀವರಾಯನ ಕೋಟೆಯಲ್ಲಿ ಮನೆಗೆ ಹಾನಿಯಾಗಿದೆ.
ವಿಜಯಪುರ, ನಾಲತವಾಡದಲ್ಲಿ ಗುಡುಗು, ಸಿಡಿಲಿನೊಂದಿಗೆ ಧಾರಾಕಾರ ಮಳೆಯಾಗಿದೆ. ಆಲಮಟ್ಟಿಯಲ್ಲಿ ವಿದ್ಯುತ್ ಗೋಪುರ ಮತ್ತು ಕಂಬಗಳು ಉರುಳಿದ್ದು, ಬಹುತೇಕ ಕಡೆ ತಗಡಿನ ಶೆಡ್‌ಗಳು ಹಾರಿಹೋಗಿವೆ. ಗಾಳಿ, ಮಳೆಗೆ ಮರಗಳು ನೆಲಕ್ಕುರುಳಿವೆ.
ಬೆಳಗಾವಿಯಲ್ಲಿ ಸಾಧಾರಣ ಮಳೆಯಾದರೆ, ಜಿಲ್ಲೆಯ ರಾಮದುರ್ಗದಲ್ಲಿ ಒಂದು ಗಂಟೆ ಧಾರಾಕಾರ ಮಳೆ ಸುರಿದಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗ ಹಾಗೂ ಘಟ್ಟದ ಮೇಲಿನ ಕೆಲ ತಾಲ್ಲೂಕುಗಳಲ್ಲಿ ಮಳೆ ಸುರಿದಿದೆ.
ಬಾಗಲಕೋಟೆ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುಡುಗು, ಸಿಡಿಲು ಸಹಿತ ಮಳೆ ಆಗಿದೆ. ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನಲ್ಲಿ ಒಂದು ತಾಸು ಮಳೆಯಾಗಿದೆ. ಹುಬ್ಬಳ್ಳಿಯಲ್ಲಿ ರಾತ್ರಿ ಧಾರಾಕಾರ ಮಳೆಯಾಗಿದೆ.
ವಿಜಯಪುರ ಜಿಲ್ಲೆ ಆಲಮಟ್ಟಿ ಸಮೀಪದ ಬೇನಾಳ ಬಳಿ ಗಾಳಿಯ ರಭಸಕ್ಕೆ ಮಂಗಳವಾರ ಉರುಳಿ ಬಿದ್ದ ವಿದ್ಯುತ್ ಪ್ರಸರಣ ಕಂಬ.
ದಾವಣಗೆರೆ ವರದಿ:
ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಿಡಿಲು–ಗುಡುಗು ಸಹಿತ ಜೋರು ಮಳೆ ಸುರಿಯಿತು. ಜಿಲ್ಲೆಯ ಜಗಳೂರು ತಾಲ್ಲೂಕಿನಲ್ಲಿ ಬೆಳಿಗ್ಗೆ ಹದವಾದ ಮಳೆ ಸುರಿದ ಕಾರಣ ಹಳ್ಳ– ಕೊಳ್ಳಗಳಲ್ಲಿ ನೀರು ತುಂಬಿ ಹರಿಯಿತು. ನ್ಯಾಮತಿ ತಾಲ್ಲೂಕಿನಲ್ಲಿ ಗುಡುಗು, ಗಾಳಿ ಸಮೇತ ಉತ್ತಮ ಮಳೆ ಸುರಿಯಿತು. ಚನ್ನಗಿರಿ, ಸಂತೇಬೆನ್ನೂರು ಸುತ್ತಮುತ್ತಲಿನ ಹಳ್ಳಿಗಳಲ್ಲೂ ಮಳೆರಾಯ ಆರ್ಭಟಿಸಿದ.
ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರಿನಲ್ಲಿ ಗುಡುಗು ಸಿಡಿಲು ಸಹಿತ 20 ನಿಮಿಷ ಹದವಾದ ಮಳೆ ಸುರಿಯಿತು. ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ, ಕೋಣಂದೂರು ಹಾಗೂ ಆನವಟ್ಟಿ ಸುತ್ತಮುತ್ತಲಿನ ಭಾಗದಲ್ಲಿ ಉತ್ತಮ ಮಳೆಯಾಯಿತು.
ಉಡುಪಿ ವರದಿ:
ಜಿಲ್ಲೆಯ ವಿವಿಧೆಡೆ ಮಂಗಳವಾರ ರಾತ್ರಿ ಸುಮಾರು ಅರ್ಧಗಂಟೆಗೂ ಹೆಚ್ಚು ಗುಡುಗು ಸಹಿತ ಮಳೆಯಾಗಿದೆ. ಕುಂದಾಪುರ ನಗರ ಹಾಗೂ ಸುತ್ತಮತ್ತಲಿನ ಪ್ರದೇಶದಲ್ಲಿ ಗುಡುಗು ಸಹಿತ ಜೋರಾಗಿ ಮಳೆ ಸುರಿದಿದೆ. ಉಡುಪಿ ನಗರ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲ್ಲೂಕಿನ ಹಂದೂರು ಗ್ರಾಮದಲ್ಲಿ ಮರ ಬಿದ್ದು ನಾಗರಾಜ್ ಎಂಬುವರ ಬೈಕ್ ಜಖಂ ಆಗಿದೆ
ಸಿಡಿಲಿಗೆ 11 ಮಂದಿ ಸಾವು
ಹುಬ್ಬಳ್ಳಿ/ಕಲಬುರಗಿ/ಕಡೂರು: ಕಳೆದ 24 ಗಂಟೆಗಳಲ್ಲಿ ರಾಜ್ಯದ ವಿವಿಧೆಡೆ ಸಿಡಿಲು ಬಡಿದು ಒಂಬತ್ತು ಮಂದಿ ಮೃತಪಟ್ಟಿದ್ದು, ಒಬ್ಬ ಬಾಲಕ ಗಾಯಗೊಂಡಿದ್ದಾನೆ.
ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ಡಮ್ಮಳ್ಳಿಯ ನಾಗಪ್ಪ ಬಸವಣೆಪ್ಪ ಕಣಸೋಗಿ (65), ರಟ್ಟೀಹಳ್ಳಿ ತಾಲ್ಲೂಕಿನ ಕುಡುಪಲಿ ಸುನೀಲ್ ಕಾಳೇರ (29), ಗದಗ ಜಿಲ್ಲೆಯ ಬಸಾಪುರದ ಮರಿಯವ್ವ ನಾಯ್ಕರ್ (60) ಮೃತಪಟ್ಟಿದ್ದಾರೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ರೈತ ಮಲ್ಲಪ್ಪ ಗುರುಶಾಂತಪ್ಪ ತಾಳಿಕೋಟಿ (47), ಆಲೂರ ಗ್ರಾಮದಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಜತ್ತ ತಾಲ್ಲೂಕಿನ ಮಣಿಕನಾಳ ಗ್ರಾಮದ ಕೂಲಿಕಾರ್ಮಿಕ ಶ್ರೀಶೈಲ ರಾಮಲಿಂಗ ಮುಗಳಕೋಡ (35), ಬಳ್ಳಾರಿ ಜಿಲ್ಲೆ ಸಿರಗುಪ್ಪದಲ್ಲಿ ರಾರಾವಿ ಗ್ರಾಮದ ಭೀರಪ್ಪ (45), ಸುನೀಲ(26) ಸಾವನ್ನಪ್ಪಿದ್ದಾರೆ. ವಿನೋದ (14) ಎಂಬ ಬಾಲಕನಿಗೆ ಗಾಯವಾಗಿದೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಹರ್ವಾಪುರ ಗ್ರಾಮದ ಹತ್ತಿರ ಜಮೀನಿನಲ್ಲಿ ಸಿಡಿಲು ಬಡಿದು ಲಿಂಗಪ್ಪ ರಾಮಣ್ಣ ಹಿರೇಕುರುಬರ (35) ಎಂಬುವವರು ಮೃತಪಟ್ಟಿದ್ದಾರೆ. ಅವರಿಗೆ ಸೇರಿದ ಎತ್ತೂ ಮೃತಪಟ್ಟಿದೆ.
ಮತ್ತೊಂದು ಪ್ರಕರಣದಲ್ಲಿ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಹುಲಿಹೈದರ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಯಂಕಪ್ಪ ಜಾಡಿ (45) ಮೃತಪಟ್ಟಿದ್ದಾರೆ. ವ್ಯಕ್ತಿ ಜತೆಗೆ ಅಂದಾಜು ₹ 1 ಲಕ್ಷ ಮೌಲ್ಯದ ಎತ್ತು ಕೂಡ ಮೃತಪಟ್ಟಿದೆ.
ಕಾರಟಗಿ ತಾಲ್ಲೂಕಿನ ಮೈಲಾಪುರದಲ್ಲಿ ಬಸನಗೌಡ ಮುದಕನಗೌಡ ಅಂಚಿನಮನಿ (40) ಎಂಬ ರೈತ ಸಿಡಿಲಿನಿಂದ ಸಾವಿಗೀಡಾದರು.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಗೆದ್ಲಹಳ್ಳಿಯಲ್ಲಿ ಸಿಡಿಲು ಬಡಿದು ಲೋಕೇಶಪ್ಪ(48) ಎಂಬುವರು ಮೃತಪಟ್ಟಿದ್ದಾರೆ. ಕುರಿ ಮೇಯಿಸಲು ಹೋಗಿದ್ದ ಲೋಕೇಶಪ್ಪ ಅವರಿಗೆ ಹೊಲದ ಬಳಿ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳೆ: ನಾಲ್ಕು ದಿನ ‘ಯೆಲ್ಲೊ ಅಲರ್ಟ್’
ಬೆಂಗಳೂರು: ರಾಜ್ಯದಾದ್ಯಂತ ಮುಂದಿನ ಒಂದು ವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಬುಧವಾರದಿಂದ ನಾಲ್ಕು ದಿನಗಳು ಎಲ್ಲ ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಿಸಿದೆ.
ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಒಂದೆರಡು ಕಡೆ ಬುಧವಾರದಂದು ಗುಡುಗು ಸಹಿತ ಭಾರಿ ಮಳೆಯಾಗುವ ಸಂಭವವಿದೆ. ಉತ್ತರ ಕನ್ನಡದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಯ ಒಂದೆರಡು ಕಡೆ ಗಂಟೆಗೆ 50ರಿಂದ 60 ಕಿ.ಮೀ. ವೇಗದಲ್ಲಿ ಗಾಳಿ ಸಹಿತ ಭಾರಿ ಮಳೆಯಾಗುವ ಸಂಭವವಿದೆ. ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿಯೂ ಇದೇ ವೇಗದಲ್ಲಿ ಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡಿನಲ್ಲಿ ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ಹಾಸನ ಮತ್ತು ತುಮಕೂರು ಜಿಲ್ಲೆಯಲ್ಲಿ ಗಂಟೆಗೆ 50ರಿಂದ 60 ಕಿ.ಮೀ. ವೇಗದಲ್ಲಿ ಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಯ ಹಲವೆಡೆ ಭಾರಿ ಗಾಳಿ ಸಹಿತ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ.
ಶನಿವಾರದವರೆಗೂ ರಾಜ್ಯದ ಎಲ್ಲ ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದ್ದು, ಭಾರಿ ಗಾಳಿ ಸಹಿತ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ. 20ರವರೆಗೂ ಮಳೆ ಮುಂದುವರಿಯುವ ಬಗ್ಗೆ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.