ADVERTISEMENT

ಮಹಾಮಳೆ: ನಲುಗಿದ ನಾಡು; 10 ಲಕ್ಷಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ಬೆಳೆ ನಾಶ

ಬರದ ನಾಡಲ್ಲೂ ಮಳೆ ಸುಗ್ಗಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 19:33 IST
Last Updated 22 ನವೆಂಬರ್ 2021, 19:33 IST
ಬೆಳೆ ನಾಶ
ಬೆಳೆ ನಾಶ   

ಬೆಂಗಳೂರು: ಮುಗಿಲೇ ಅಪ್ಪಳಿಸಿ ನೆಲಕ್ಕೆ ಬೀಳುವಂತೆ ಸುರಿಯುತ್ತಿರುವ ಅಕಾಲಿಕ ಮಳೆಗೆ ಅರ್ಧ ರಾಜ್ಯ ಕಂಗಾಲಾಗಿದೆ.

ಅಪರೂಪಕ್ಕೆ ನೀರಿನ ಹನಿಯುವಿಕೆಯನ್ನು ಕಾಣುತ್ತಾ ಬರದ ನಾಡೆಂದು ಅಡ್ಡನಾಮ ಪಡೆದಿದ್ದ ಬಯಲುಸೀಮೆ ಜಿಲ್ಲೆಗಳು ಈ ಬಾರಿ ವರುಣನ ಕೃಪೆಯಿಂದ ನಳನಳಿಸಿವೆ. ಆದರೆ ಕೈಗೆ ಹತ್ತಬೇಕಾಗಿದ್ದ ಬೆಳೆ ಅನಿರೀಕ್ಷಿತ ಮಳೆಯಿಂದಾಗಿ ಹಾನಿಗೊಳಗಾಗಿರುವುದು ಅನ್ನದಾತನ ಚಿಂತೆಗೆ ಕಾರಣವಾಗಿದೆ.

ಅತಿವೃಷ್ಟಿಯಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳ 10 ಲಕ್ಷಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಾಶವಾಗಿವೆ. ಬಯಲುಸೀಮೆ ಜಿಲ್ಲೆಗಳ ಪ್ರಮುಖ ಬೆಳೆಯಾದ ರಾಗಿ ಕೊಳೆಯುವ ಸ್ಥಿತಿಗೆ ತಲುಪಿದ್ದರೆ, ತೆನೆಕಟ್ಟಿ ನಿಂತಿರುವ ಬೆಳೆಗಳುನೆಲಕ್ಕೆ ಬಿದ್ದು ಮೊಳಕೆಯೊಡೆಯುತ್ತಿವೆ. ಮಲೆನಾಡು ಪ್ರದೇಶದಲ್ಲಿ ಭತ್ತ, ಅಡಿಕೆ ಸೇರಿದಂತೆ ಹಲವು ಬೆಳೆಗಳು ನೆಲಕಚ್ಚಿವೆ.

ADVERTISEMENT

ನವೆಂಬರ್‌ ತಿಂಗಳಲ್ಲಿ ಅಪರೂಪಕ್ಕೆ ಮಳೆ ಸುರಿಯುವ ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳ ಜನರನ್ನು, ಹೊಲಗಳನ್ನು ಮಳೆ ನಡುಗಿಸುತ್ತಿದೆ. ಈ ಜಿಲ್ಲೆಗಳಲ್ಲಿ ವಾಡಿಕೆ ಮಳೆಗಿಂತಲೂ 150ರಿಂದ 250 ಪಟ್ಟು ಹೆಚ್ಚು ಮಳೆಯಾಗಿದೆ.

ವಾಡಿಕೆಯಂತೆ ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ವಾರ್ಷಿಕ 700 ಮಿಲಿ ಮೀಟರ್‌ ಮಳೆಯಾಗುತ್ತದೆ. ಆದರೆ, ಈ ಬಾರಿ ಇದುವರೆಗೆ 1,500ಮಿ.ಮೀ. ಮಳೆಯಾಗಿದೆ. ಬೆಂಗಳೂರಿನ ಜಿಕೆವಿಕೆ ಕೇಂದ್ರದಲ್ಲಿ ವಾರ್ಷಿಕ 920 ಮಿ.ಮೀ. ವಾಡಿಕೆ ಮಳೆ ದಾಖಲಾಗುತ್ತದೆ. ಈ ಬಾರಿ ಇದುವರೆಗೆ 1,300 ಮಿ.ಮೀ. ಮಳೆ ದಾಖಲಾಗಿದೆ. ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ನವೆಂಬರ್‌ ತಿಂಗಳಲ್ಲಿ 25 ಮಿ.ಮೀ.ನಿಂದ 60 ಮಿ.ಮೀ. ವಾಡಿಕೆ ಮಳೆಯಾಗುತ್ತದೆ. ಆದರೆ, ಈ ಬಾರಿ 300 ಮಿ.ಮೀ. ಮಳೆಯಾಗಿದೆ.

‘ವಾಯುಭಾರ ಕುಸಿತ ಮತ್ತು ಹವಾಮಾನ ವೈಪರೀತ್ಯದಿಂದಾಗಿ ವಾತಾವರಣದಲ್ಲಿ ಏರುಪೇರುಗಳಾಗುತ್ತಿವೆ. ಇದರಿಂದ, ಮಳೆ ಸುರಿಯುವ ಸಮಯದಲ್ಲೂ ವ್ಯತ್ಯಾಸಗಳಾಗುತ್ತಿವೆ. ಮಳೆಗಾಲದ ಅವಧಿ ಮುಂದಕ್ಕೆ ಹೋಗುತ್ತಿದೆ. ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಸುರಿಯಬೇಕಾದಷ್ಟು ಮಳೆ ಅಕ್ಟೋಬರ್ ಮತ್ತು ನವೆಂಬರ್‌ ತಿಂಗಳುಗಳಲ್ಲಿ ಆಗುತ್ತಿದೆ. ಬಯಲುಸೀಮೆ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗುತ್ತಿದೆ. ಹವಾಮಾನ ಬದಲಾವಣೆಯಿಂದ ಬೇಸಿಗೆಯಲ್ಲಿ ಹೆಚ್ಚು ಬಿಸಿಲು, ಚಳಿಗಾಲದಲ್ಲಿ ಹೆಚ್ಚು ಚಳಿ, ಮಳೆಗಾಲದಲ್ಲಿ ಹೆಚ್ಚು ಮಳೆಯಾಗುತ್ತಿದೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಹವಾಮಾನ ತಜ್ಞ ಡಾ. ಶ್ರೀನಿವಾಸಪ್ಪ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.