‘ಕೊಡೆಗಳಿಗೂ ಮಳೆ’: ಮಂಗಳೂರಿನಲ್ಲಿ ಸ್ಟೇಟ್‌ಬ್ಯಾಂಕ್ ಬಳಿ ಮಂಗಳವಾರ ಸುರಿವ ಮಳೆಯಲ್ಲಿಯೇ ಮಹಿಳೆಯರು ತಳ್ಳುವ ಗಾಡಿಗಳಲ್ಲಿ ಕೊಡೆಗಳ ಮಾರಾಟದಲ್ಲಿ ತೊಡಗಿದ್ದರು.
ಚಿತ್ರ: ಫಕ್ರುದ್ದೀನ್ ಎಚ್.
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಂಗಳವಾರವೂ ಧಾರಾಕಾರ ಮಳೆ ಸುರಿಯಿತು.
ಮಂಗಳೂರು ನಗರದಲ್ಲಿ ಇಡೀ ದಿನ ಮಳೆ ಮುಂದುವರಿದಿತ್ತು. ಭಾರಿ ಮಳೆಯ ಕಾರಣ ಉಳ್ಳಾಲ, ಬೆಳ್ತಂಗಡಿ ತಾಲ್ಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.
ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಕಾರ್ಕಳ, ಹೆಬ್ರಿ, ಬ್ರಹ್ಮಾವರ, ಕಾಪು ವ್ಯಾಪ್ತಿಲ್ಲಿ ಬಿರುಸಿನ ಮಳೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಭಾರಿ ಮಳೆಗೆ ಕಾರ್ಕಳದ ಅತ್ತೂರಿನ ಸೇಂಟ್ ಲಾರೆನ್ಸ್ ಚರ್ಚ್‌ನ ಆವರಣಗೋಡೆಯು ಭಾಗಶಃ ಕುಸಿದು ಬಿದ್ದಿದೆ.
ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5, ಉಡುಪಿ ಜಿಲ್ಲೆಯಲ್ಲಿ 7 ಸೆಂಟಿ ಮೀಟರ್ ಸರಾಸರಿ ಮಳೆಯಾಗಿದೆ ಎಂದು ಹವಾಮನ ಇಲಾಖೆ ತಿಳಿಸಿದೆ.
ಕೊಡಗಿನಲ್ಲಿ ಮಳೆ: ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿದಿದೆ. ಮಡಿಕೇರಿ ನಗರ, ನಾಪೋಕ್ಲು ವ್ಯಾಪ್ತಿಯಲ್ಲಿ ಮಂಗಳವಾರ ಎರಡೂವರೆ ಗಂಟೆಗೂ ಹೆಚ್ಚು ಕಾಲ ಭಾರಿ ಮಳೆಯಾಯಿತು.
ಭಾಗಮಂಡಲ, ಸಂಪಾಜೆಯಲ್ಲಿ ತಲಾ 5 ಸೆಂ.ಮೀ, ಮಡಿಕೇರಿ, ಶಾಂತಳ್ಳಿ, ಹುದಿಕೇರಿಯಲ್ಲಿ ತಲಾ 3 ಸೆಂ.ಮೀ. ಮಳೆ ಸುರಿದಿರುವುದು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.