ಹುಬ್ಬಳ್ಳಿ: ಧಾರವಾಡ, ಬಳ್ಳಾರಿ, ವಿಜಯನಗರ, ಗದಗ ಜಿಲ್ಲೆಯಲ್ಲಿ ಬುಧವಾರ ಮಧ್ಯರಾತ್ರಿಯಿಂದ ಗುರುವಾರ ನಸುಕಿನವರೆಗೆ ವ್ಯಾಪಕ ಮಳೆಯಾಗಿದೆ. ಇದರ ಪರಿಣಾಮ ಬಹುತೇಕ ಕಡೆ ಭತ್ತದ ಬೆಳೆ ನಾಶವಾಗಿದೆ. ಕಟಾವಿಗೆ ಬಂದ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಸಿಡಿಲು ಬಡಿದು ಬೆಂತುರ ರಸ್ತೆಯಲ್ಲಿ ಏಳು ಕುರಿಗಳು ಸಾವನ್ನಪ್ಪಿವೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನಲ್ಲಿ ಸುರಿದ ಮಳೆಗೆ ಪುಣಬಗಟ್ಟಿ ಗ್ರಾಮದಲ್ಲಿ ಕೆರೆ ಕೋಡಿ ಬಿದ್ದು, 200ಕ್ಕೂ ಅಧಿಕ ಎಕರೆ ಭತ್ತದ ಬೆಳೆ ನಾಶವಾಗಿದೆ. ಕುರೆಮಾಗನಹಳ್ಳಿಯಲ್ಲಿ ಚೆಕ್ ಡ್ಯಾಂ ಭರ್ತಿಯಾಗಿದೆ. ಉಚ್ಚಂಗಿದುರ್ಗ-ಅರಸೀಕೆರೆ ರಸ್ತೆ ಜಲಾವೃತ ಆಗಿದೆ. ಜಂಗಮ ತುಂಬಿಗೆರೆಯಲ್ಲಿ ಹಳ್ಳ ಭರ್ತಿಯಾಗಿ ಕೋಡಿ ಬಿದ್ದಿದೆ. ಕೂಡ್ಲಿಗಿ ಭಾಗದಲ್ಲಿ ಮಳೆಯಿಂದ ಅಗ್ರಹಾರ ಗ್ರಾಮದ ಬಳಿ ಮೆಕ್ಕೆಜೋಳ ಹೊಲಕ್ಕೆ ನೀರು ನುಗ್ಗಿದೆ. ಹೊಸಪೇಟೆ, ಮರಿಯಮ್ಮನಹಳ್ಳಿ, ಕಮಲಾಪುರದಲ್ಲೂ ಮಳೆಯಾಗಿದೆ.
ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಹೋಬಳಿಯ ಕೆಲ ಗ್ರಾಮಗಳು, ಎಂ.ಸೂಗೂರು, ನಡವಿ, ನಿಟ್ಟೂರು, ಉಡೇಗೋಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುರಿಧ ಭಾರಿ ಮಳೆಯಿಂದ ಭತ್ತದ ಗದ್ದೆಗಳಲ್ಲಿ ನೀರು ನಿಂತು, ಕೊಯ್ಲಿಗೆ ಬಂದಿದ್ದ ಬೆಳೆ ನೆಲಕಚ್ಚಿದೆ. ‘ಭತ್ತ ನೆಲಕ್ಕೆ ಬಿದ್ದಲ್ಲಿ ಮೊಳಕೆ ಒಡೆಯುವ ಸಾಧ್ಯತೆ ಇದ್ದು, ಒಂದೆರಡು ದಿನ ಬಿಸಿಲು ಬಂದರೆ ಮಾತ್ರ ಕೊಯ್ಯಲು ಸಾಧ್ಯವಾಗುತ್ತದೆ ಇಲ್ಲದಿದ್ದರೆ ಇನ್ನೂ ಹೆಚ್ಚಿನ ನಷ್ಟವಾಗುತ್ತದೆ’ ಎಂದು ರೈತರು ತಿಳಿಸಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣ ಸೇರಿ ತಾಲ್ಲೂಕಿನ ವಿವಿಧೆಡೆ ಬುಧವಾರ ರಾತ್ರಿಯಿಂದ ಸುರಿದ ಭಾರಿ ಮಳೆಗೆ ಗೋವಿನಜೋಳದ ಹೊಲದಲ್ಲಿ ನೀರು ನಿಂತಿದ್ದು, ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ.
ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲ್ಲೂಕಿನ ಭದ್ರಾಪುರ ಗ್ರಾಮದಲ್ಲಿ ಎಂಟು ಮನೆಗಳು ಕುಸಿದಿವೆ. ಅಣ್ಣಿಗೇರಿ ಪಟ್ಟಣದ ಸುರಕೋಡ ಬಡಾವಣೆ, ರಾಜರಾಜೇಶ್ವರಿ ನಗರ, ಅಂಬೇಡ್ಕರ್ ನಗರದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದೆ. ಹುಬ್ಬಳ್ಳಿ ನಗರದಲ್ಲಿ ಮಳೆಯಾಗಿದೆ.
ಕೊಪ್ಪಳ ವರದಿ: ಒಂದು ವಾರದ ಬಿಡುವಿನ ಬಳಿಕ ಜಿಲ್ಲೆಯಲ್ಲಿ ಉತ್ತಮವಾಗಿ ಮಳೆ ಸುರಿದಿದೆ. ಕೊಪ್ಪಳ ಜಿಲ್ಲಾ ಕೇಂದ್ರ, ಕನಕಗಿರಿ, ಕಾರಟಗಿಯಲ್ಲಿ ಬುಧವಾರ ಮಧ್ಯರಾತ್ರಿಯಿಂದ ಗುರುವಾರ ಬೆಳಿಗ್ಗೆ ತನಕ ಮಳೆ ಬಂದಿದೆ.
ದಾವಣಗೆರೆ: ಜಿಲ್ಲೆಯಲ್ಲಿ ಗುರುವಾರ ನಸುಕಿನವರೆಗೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು ಹಳ್ಳಗಳು ತುಂಬಿ ಹರಿದಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ನಾಲ್ಕು ಮನೆಗಳಿಗೆ ಹಾನಿಯಾಗಿದೆ. ಬುಧವಾರ ರಾತ್ರಿ ಆರಂಭವಾದ ಮಳೆ ಗುರುವಾರ ನಸುಕಿನವರೆಗೆ ಸುರಿಯಿತು. ಮಧ್ಯರಾತ್ರಿ ಆರ್ಭಟಿಸಿದ ವರುಣ ಬಳಿಕ ಸೋನೆಯಂತೆ ಸರಿಯಿತು. ಮೆಕ್ಕೆಜೋಳ ರಾಗಿ ಸೇರಿದಂತೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹಾನಿ ಉಂಟಾಗಿದೆ. ಹರಿಹರ ತಾಲ್ಲೂಕಿನ ಮಲೇಬೆನ್ನೂರು ಹೋಬಳಿ ವ್ಯಾಪ್ತಿಯಲ್ಲಿ ಹಳ್ಳ ಉಕ್ಕಿ ಹರಿದು ಗುಳದಹಳ್ಳಿ- ಸಂಕ್ಲೀಪುರ ಗ್ರಾಮಗಳ ಸಂಪರ್ಕ ಕಡಿತವಾಗಿತ್ತು. ದೇವರಬೆಳಕೆರೆ ಪಿಕಪ್ ಜಲಾಶಯ ಭೋರ್ಗರೆಯುತ್ತಿದೆ. ಭತ್ತದ ಗದ್ದೆ ತೋಟಗಳು ಜಲಾವೃತವಾಗಿವೆ. ದಾವಣಗೆರೆಯ ಸರಸ್ವತಿ ನಗರ ದೇವರಾಜ ಅರಸು ಬಡಾವಣೆ ನಿಟುವಳ್ಳಿ ಸೇರಿದಂತೆ ಅನೇಕ ಕಡೆ ಮನೆಗಳಿಗೆ ನೀರು ನುಗ್ಗಿತ್ತು. ದಾವಣಗೆರೆ ಮತ್ತು ಜಗಳೂರು ತಾಲ್ಲೂಕುಗಳಲ್ಲಿ ತಲಾ 4 ಸೆಂ.ಮೀ ಚನ್ನಗಿರಿ ಹರಿಹರ ತಾಲ್ಲೂಕಿನಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ.
ಹಾಸನ: ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಹೆತ್ತೂರು ಹೋಬಳಿ ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಸಾವೆ ಹೋಬಳಿಯಲ್ಲಿ ಗುರುವಾರ ಧಾರಾಕಾರ ಮಳೆ ಸುರಿದಿದ್ದು ಅರೇಬಿಕಾ ಕಾಫಿಗೆ ಹೊಡೆತ ಬಿದ್ದಿದೆ. ರೊಬಸ್ಟಾ ಕಾಫಿಗೆ ಕೊಳೆ ರೋಗ ಬರುತ್ತಿದೆ. ‘ಮಳೆಯು ಕಾಫಿ ಬೆಳೆಗೆ ಮಾರಕವಾಗಿದೆ. ಕಳೆದ ವಾರದ ಬಿಸಿಲಿಗೆ ಅರೇಬಿಕಾ ಕಾಯಿ ಬಲಿತಿತ್ತು. ಈಗ ಮಳೆಯಾಗಿದ್ದರಿಂದ ಕೂಡಲೇ ಹಣ್ಣಾಗುತ್ತದೆ. ಮಳೆ ಮುಂದುವರಿದರೆ ಕೊಯ್ಲಿಗೆ ಕಷ್ಟವಾಗುತ್ತದೆ’ ಎನ್ನುತ್ತಾರೆ ಕಾಫಿ ಬೆಳೆಗಾರ ಎಚ್.ಬಿ ಪವನ್. ಹಿರೀಸಾವೆ ಹೋಬಳಿಯಲ್ಲಿ ಬುಧವಾರ ರಾತ್ರಿ 9 ಗಂಟೆಯಿಂದ 11ರವರೆಗೆ ಹದ ಮಳೆಯಾಗಿದ್ದು ಚರಂಡಿ ವ್ಯವಸ್ಥೆ ಸರಿ ಇಲ್ಲದೆ ಮನೆಯೊಂದಕ್ಕೆ ನೀರು ನುಗ್ಗಿದೆ. ತೋಟ ಹೊಲಗಳಲ್ಲಿ ನೀರು ನಿಂತಿದೆ. ಜಾನುವಾರುಗಳಿಗೆ ಮೇವು ಸಿಗಲಿದೆ ಎನ್ನುವುದು ರೈತರ ನಿರೀಕ್ಷೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.