ಬೆಂಗಳೂರು: ರಾಜ್ಯದ ಕಲಬುರ್ಗಿ, ಕೊಪ್ಪಳ, ಬೀದರ್, ಯಾದಗಿರಿ ಜಿಲ್ಲೆಗಳ ಹಲವೆಡೆ ಸೋಮವಾರ ಮಳೆಯಾಗಿದ್ದು, ಕೆಲವೆಡೆ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನಲ್ಲಿ ವಿಜಯನಗರ ನಾಲೆ ಒಡೆದು ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಕೆಲ ತಿಂಗಳ ಹಿಂದೆಯಷ್ಟೇ ಈ ನಾಲೆಯ ದುರಸ್ತಿ ಕಾಮಗಾರಿ ಹಮ್ಮಿಕೊಳ್ಳಲಾಗಿತ್ತು. ಕಲಬುರ್ಗಿ ನಗರದಲ್ಲಿ ಇಡೀ ದಿನ ಮಳೆ ಸುರಿದಿದೆ. ಜೇವರ್ಗಿ, ಬೀದರ್ ಜಿಲ್ಲೆ, ಯಾದಗಿರಿ ನಗರ ಸೇರಿದಂತೆ ಗುರುಮಠಕಲ್, ವಡಗೇರಾ, ಯರಗೋಳದಲ್ಲಿಯೂ ಮಳೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮಳೆ ಹೆಚ್ಚಾಗಿದ್ದು, ಕುಮಟಾ– ಶಿರಸಿ ನಡುವಿನ ರಾಜ್ಯ ಹೆದ್ದಾರಿ ಭಾರಿ ಮಳೆಗೆ ಮುಳುಗಿ ಹೋಗಿತ್ತು. ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ರಭಸ ತಗ್ಗಿದ್ದು, ಕೃಷ್ಣಾ ಹಾಗೂ ಉಪನದಿಗಳ ಹರಿವೂ ಕಡಿಮೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನಲ್ಲಿ ಭಂಡಿವಾಳ ರಸ್ತೆ ಕುಸಿದಿದೆ. ಬಡಗಣಿ ಹೊಳೆಯೂ ಉಕ್ಕಿ ಹರಿಯುತ್ತಿದ್ದು, ಈ ಪ್ರದೇಶದಲ್ಲಿ 50 ಮನೆಗಳು ಜಲಾವೃತವಾಗಿವೆ. ಹೊನ್ನಾವರ ತಾಲ್ಲೂಕಿನ ಗುಂಡಬಾಳಾ ನದಿ, ಭಾಸ್ಕೇರಿ ಹಳ್ಳದಲ್ಲಿ ನೆರೆ ಬಂದಿದ್ದು 12 ಗ್ರಾಮಗಳಿಗೆ ನೆರೆ ನೀರು ನುಗ್ಗಿದೆ. ಇಲ್ಲಿ 9 ಪರಿಹಾರ ಕೇಂದ್ರ ತೆರೆಯಲಾಗಿದ್ದು, 555 ಮಂದಿ ಆಶ್ರಯ ಪಡೆದಿದ್ದಾರೆ.
ಮೃತದೇಹ ಪತ್ತೆ: ಹಾವೇರಿ ಜಿಲ್ಲೆಯ ಇನಾಂಲಕಮಾಪುರ ಗ್ರಾಮದ ವರದಾ ನದಿಯಲ್ಲಿ ಶನಿವಾರ ನೀರು ಪಾಲಾಗಿದ್ದ ಯುವಕನ ಮೃತದೇಹ ಸೋಮಾಪುರ ಗ್ರಾಮದ ಹತ್ತಿರ ಸೋಮವಾರ ಪತ್ತೆಯಾಗಿದೆ.
ಕರಾವಳಿಯಲ್ಲಿ ಮಳೆ ಅಬ್ಬರ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸೇರಿದಂತೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಬೆಳ್ತಂಗಡಿ ತಾಲ್ಲೂಕಿನ ಮಿತ್ತಬಾಗಿಲು ಅರಣ್ಯ ಪ್ರದೇಶದಲ್ಲಿ ಸೋಮವಾರ ಭೂಕುಸಿತ ಸಂಭವಿಸಿದೆ. ಮಂಗಳೂರು ನಗರ, ಉಳ್ಳಾಲ ಸೇರಿದಂತೆ ಹಲವೆಡೆ ತಗ್ಗು ಪ್ರದೇಶದಲ್ಲಿರುವ ಕುಟುಂಬಗಳನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಉಡುಪಿ ಜಿಲ್ಲೆಯ ನಾವುಂದ, ಮರವಂತೆ, ನಾಡ, ಹಡವು ಗ್ರಾಮಗಳಲ್ಲಿ ನೆರೆ ಬಂದಿದೆ.
ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಉತ್ತಮ ಮಳೆಯಾಗಿದೆ. ಬೆಳೆ ಹಾನಿ ಸೇರಿ ನಷ್ಟದ ಅಂದಾಜು ಮತ್ತು ಸ್ವರೂಪಸಿದ್ಧಪಡಿಸಿ, ಈ ತಿಂಗಳ 20ರ ಒಳಗೆ ವರದಿ ಸಲ್ಲಿಸುವಂತೆ ಸಚಿವ ಈಶ್ವರಪ್ಪ ಸೂಚಿಸಿದ್ದಾರೆ. ದಾವಣಗೆರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.