ADVERTISEMENT

ಶಿಕ್ಷಣ ಗುಣಮಟ್ಟ: ರಾಜ್ಯಕ್ಕೆ 3ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 20:01 IST
Last Updated 30 ಸೆಪ್ಟೆಂಬರ್ 2019, 20:01 IST
   

ನವದೆಹಲಿ: ಶಾಲಾ ಶಿಕ್ಷಣದ ಒಟ್ಟಾರೆ ಗುಣಮಟ್ಟವನ್ನು ಕಾಯ್ದುಕೊಳ್ಳುವ ವಿಚಾರದಲ್ಲಿ ಕರ್ನಾಟಕವು ದೇಶದಲ್ಲಿ ಮೂರನೇ ಸ್ಥಾನವನ್ನು ಗಳಿಸಿದೆ. ಕೇರಳ ಮತ್ತು ರಾಜಸ್ಥಾನ ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿವೆ.

ನೀತಿ ಆಯೋಗವು ಸೋಮವಾರ ಇದೇ ಮೊದಲ ಬಾರಿಗೆ ‘ಶಾಲಾ ಶಿಕ್ಷಣ ಗುಣಮಟ್ಟ ಸೂಚ್ಯಂಕ’ವನ್ನು (ಎಸ್‌ಇಕ್ಯುಐ) ಬಿಡುಗಡೆ ಮಾಡಿದೆ.

ಶಾಲಾ ಶಿಕ್ಷಣ ಕ್ಷೇತ್ರದ ಕಲಿಕಾ ಫಲಿತಾಂಶ, ಮೂಲಸೌಲಭ್ಯ ಮುಂತಾದ ವಿಚಾರಗಳಲ್ಲಿ ಕರ್ನಾಟಕವು ಇತರ ರಾಜ್ಯಗಳಿಗಿಂತ ಮುಂದಿದೆ. ಆದರೆ, ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಮತ್ತು ಇನ್ನಷ್ಟು ಸುಧಾರಣೆಯನ್ನು ಮಾಡುವ ನಿಟ್ಟಿನಲ್ಲಿ ನೀತಿ ನಿರೂಪಿಸುವವರು ಮತ್ತು ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸ ಇನ್ನೂ ಬಹಳಷ್ಟಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ADVERTISEMENT

ಗುಣಮಟ್ಟ ಸುಧಾರಣೆಗಾಗಿ ನಿಗದಿಮಾಡಿದ ಮಾನದಂಡಗಳ ಪ್ರಗತಿಯಲ್ಲಿ ಕರ್ನಾಟಕದ ಸ್ಥಾನ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. 2015–16ರಲ್ಲಿ ನೀತಿ ಆಯೋಗವು ನಡೆಸಿದ ಸಮೀಕ್ಷೆಯಲ್ಲಿ ಶೇ 56.6ರಷ್ಟು ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದ್ದ ಕರ್ನಾಟಕವು, 2016–17ನೇ ಸಾಲಿನಲ್ಲಿ ಶೇ 52.9 ಅಂಕಗಳೊಂದಿಗೆ 13ನೇ ಸ್ಥಾನಕ್ಕೆ ಕುಸಿದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಶಿಕ್ಷಣಕ್ಕಾಗಿ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆಯಡಿ (ಯು–ಡೈಸ್‌) ಸಂಗ್ರಹಿಸಲಾದ ಮಾಹಿತಿಯ ಆಧಾರದಲ್ಲಿ ನೀತಿ ಆಯೋಗವು ಈ ಮೌಲ್ಯಮಾಪನ ಮಾಡಿ, ಶ್ರೇಯಾಂಕ ನಿರ್ಧರಿಸಿದೆ. ನೀತಿ ಆಯೋಗ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ವಿಶ್ವಬ್ಯಾಂಕ್‌ಗಳು ಜೊತೆಯಾಗಿ ಈ ವರದಿಯನ್ನು ಬಿಡುಗಡೆ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.