ADVERTISEMENT

ಆಂಧ್ರದ ಆಮಿಷ ನಡೆಯದು: ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 15:22 IST
Last Updated 16 ಜುಲೈ 2025, 15:22 IST
ಎಂ.ಬಿ ಪಾಟೀಲ
ಎಂ.ಬಿ ಪಾಟೀಲ   

ಬೆಂಗಳೂರು: ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಿರುಷ್ಟು ಜಮೀನು ರಾಜ್ಯದಲ್ಲಿದೆ. ಎಲ್ಲ ಉದ್ಯಮಿಗಳಿಗೂ ಜಮೀನು ದೊರಕಿಸಲು ರಾಜ್ಯ ಸರ್ಕಾರ ಶಕ್ತವಾಗಿದೆ. ಆಂಧ್ರಪ್ರದೇಶದ ಆಮಿಷಕ್ಕೆ ಒಳಗಾಗಿ ಯಾವ ಉದ್ಯಮಿಯೂ ರಾಜ್ಯ ತೊರೆಯುವುದಿಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಅತ್ಯಾಧುನಿಕ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್‌ ಸ್ಥಾಪನೆಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ 13 ಗ್ರಾಮಗಳ ವ್ಯಾಪ್ತಿಯ 1,777 ಎಕರೆ ಜಮೀನಿನ ಸ್ವಾಧೀನವನ್ನು ರೈತರ ಹಿತಾಸಕ್ತಿಗಾಗಿ ಕೈಬಿಡಲಾಗಿದೆ. ಅಲ್ಲಿ ಸ್ಥಾಪಿಸಬೇಕಿದ್ದ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್‌ಗೆ ಬೇರೆ ಕಡೆ ಜಾಗ ನೀಡಲಾಗುವುದು. ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಹೇಳಿದ ತಕ್ಷಣ ಯಾರೂ ಆ ರಾಜ್ಯಕ್ಕೆ ಹೋಗುವುದಿಲ್ಲ. ಎಲ್ಲ ಉದ್ಯಮಗಳನ್ನೂ ಇಲ್ಲೇ ಉಳಿಸಿಕೊಳ್ಳುವ ಸಾಮರ್ಥ್ಯ ಈ ಪಾಟೀಲರಿಗೂ, ಕರ್ನಾಟಕಕ್ಕೂ ಇದೆ ಎಂದರು.

‘ವೈಮಾಂತರಿಕ್ಷ ವಲಯದಲ್ಲಿ ದೇಶದ ಶೇ 65ರಷ್ಟು ಪಾಲನ್ನು ಕರ್ನಾಟಕ ಹೊಂದಿದೆ. ಜಾಗತಿಕ ಮಟ್ಟದಲ್ಲಿ ನಮ್ಮದು ಮೂರನೇ ಅತ್ಯುತ್ತಮ ಕಾರ್ಯ ಪರಿಸರ ಇರುವ ರಾಜ್ಯ. ಉದ್ಯಮಗಳಿಗೆ ಜಮೀನು ಕೊಟ್ಟ ಮಾತ್ರಕ್ಕೆ ಅವರು ಅಲ್ಲಿಗೆ ಹೋಗುವುದಿಲ್ಲ. ಕಾರ್ಯ ಪರಿಸರವೂ ಮಹತ್ವದ ಪಾತ್ರ ವಹಿಸುತ್ತದೆ. ವೈಮಾಂತರಿಕ್ಷ ಮಾತ್ರವಲ್ಲ, ಕೃತಕ ಬುದ್ದಿಮತ್ತೆ, ಡೀಪ್-ಟೆಕ್ ತರಹದ ಉದ್ಯಮಗಳಿಗೂ ಜಮೀನು ನೀಡಲಾಗುವುದು. ಕೈಗಾರಿಕಾ ಪ್ರದೇಶಗಳಿಗೆ ತಮ್ಮ‌ ಪಾಲಿನ ನೀರು ಬಳಸಿಕೊಳ್ಳಲು ₹3,600 ಕೋಟಿ ವೆಚ್ಚದಲ್ಲಿ ಸಮಗ್ರ ಯೋಜನೆ ರೂಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ಬಿಜೆಪಿಯದು ದ್ವಿಮುಖ ನೀತಿ:  

‘ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ಯಮಿಗಳ ಪರ ಮಾತನಾಡುತ್ತಿದ್ದಾರೆ. ಸರ್ಕಾರ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದರೆ, ಆಗ ರೈತರ ಪರವಾಗಿ ಮಾತನಾಡುತ್ತಿದ್ದರು. ಅವರು ಏನಾದರೂ ಮಾತನಾಡಲಿ. ನಮಗೆ ರಾಜ್ಯದ ಹಿತಾಸಕ್ತಿ ಮುಖ್ಯ’ ಎಂದರು.

ರೋಲ್ಸ್‌ರಾಯ್ಸ್‌ ಜತೆ ಮಾತುಕತೆ:

ದೇವನಹಳ್ಳಿ ವ್ಯಾಪ್ತಿಯ ಭೂಸ್ವಾಧೀನ ಕೈಬಿಟ್ಟ ಮರು ದಿನವೇ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ರಕ್ಷಣೆ ಹಾಗೂ ವೈಮಾಂತರಿಕ್ಷ ವಲಯದಲ್ಲಿ ಹೆಸರು ಮಾಡಿರುವ ರೋಲ್ಸ್‌ರಾಯ್ಸ್‌ ಕಂಪನಿಯ ಉನ್ನತಮಟ್ಟದ ನಿಯೋಗದ ಜತೆ ಮಾತುಕತೆ ನಡೆಸಿದರು. ಹೂಡಿಕೆ-ವಿಸ್ತರಣೆ ಭವಿಷ್ಯದ ಯೋಜನೆಗಳು ಮತ್ತು ತಂತ್ರಜ್ಞಾನ ಸೌಲಭ್ಯ ಬೆಂಗಳೂರು ಘಟಕದ ವಿಸ್ತರಣೆ ಕುರಿತು ಕಂಪನಿಯ ಜಾಗತಿಕ ಮಟ್ಟದ ನಿರ್ದೇಶಕ ಫಿಲ್‌ಪ್ರೀಸ್ಟ್‌ ಭಾರತದಲ್ಲಿನ ವ್ಯವಹಾರಿಕ ಸೇವಾ ವಿಭಾಗದ ಮುಖ್ಯಸ್ಥ ಟಾಮ್‌ ಕ್ಯಾಂಡ್ರಿಕಾಲ್‌ ರಕ್ಷಣಾ ವಿಭಾಗದ ಭಾರತದ ಮುಖ್ಯಸ್ಥೆ ಗಾಯತ್ರಿ ಶರ್ಮಾ ಅವರು ಚರ್ಚೆ ನಡೆಸಿದರು. ʻರಾಜ್ಯದ ಕೈಗಾರಿಕಾ ಬೆಳವಣಿಗೆ ಅವಕಾಶಗಳು ಮತ್ತು ಇಲ್ಲಿನ ರಕ್ಷಣಾ ಕಾರ್ಯಪರಿಸರದ ಬಗ್ಗೆ ಮನದಟ್ಟು ಮಾಡಿಕೊಡಲಾಗಿದೆ. ಆಧುನಿಕ ತಾಂತ್ರಿಕ ಪರಿಸರ ದೂರದೃಷ್ಟಿ ಮತ್ತು ಪ್ರಗತಿಪರವಾಗಿರುವ ಕೈಗಾರಿಕಾ ನೀತಿಗಳನ್ನು ಕಂಪನಿ ಮೆಚ್ಚಿಕೊಂಡಿದೆ. ಸಹಭಾಗಿತ್ವ ಹೆಚ್ಚಿಸಿಕೊಳ್ಳಲು ಒಲವು ತೋರಿದೆ’ ಎಂದು ಸಚಿವ ಪಾಟೀಲ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.