ADVERTISEMENT

ಪ್ರಾಚೀನ ಕಾವ್ಯಕ್ಕೆ ಆಧುನಿಕ ಸ್ಪರ್ಶ:ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಡಿಜಿಟಲೀಕರಣ

ವರುಣ ಹೆಗಡೆ
Published 18 ಜನವರಿ 2026, 1:31 IST
Last Updated 18 ಜನವರಿ 2026, 1:31 IST
ಡಿಜಿಟಲೀಕರಣಗೊಂಡ ಕೃತಿಗಳು
ಡಿಜಿಟಲೀಕರಣಗೊಂಡ ಕೃತಿಗಳು   

ಬೆಂಗಳೂರು: ನೂರಾರು ವರ್ಷಗಳ ಹಿಂದಿನ ಕನ್ನಡದ ಪ್ರಾಚೀನ ಕಾವ್ಯಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಆಧುನಿಕ ಸ್ಪರ್ಶ ನೀಡುತ್ತಿದೆ. ‍ಪಂಪನ ‘ವಿಕ್ರಮಾರ್ಜುನ ವಿಜಯ’, ರನ್ನನ ‘ಗದಾಯುದ್ಧ’ ಮೊದಲಾದ ಕೃತಿಗಳು ಡಿಜಿಟಲ್ ವೇದಿಕೆಗಳ ನೆರವಿನಿಂದ ಬೆರಳ ತುದಿಯಲ್ಲಿಯೆ ಲಭ್ಯವಾಗಲಿದ್ದು, ವಿವಿಧ ಕಾವ್ಯಗಳ ಸಾಲುಗಳನ್ನು ಓದುವ ಜತಗೆ ಕೇಳಿಸಿಕೊಳ್ಳಬಹುದಾಗಿದೆ. 

‘ನಾಡೋಜ’ ಶೀರ್ಷಿಕೆಯಡಿ ಅಕಾಡೆಮಿಯು ಪ್ರಾಚೀನ ಮಹಾಕಾವ್ಯಗಳು ಹಾಗೂ ಮೌಲ್ಯಯುತ ಕೃತಿಗಳನ್ನು ಡಿಜಿಟಲೀಕರಣಗೊಳಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಪ್ರಾಚೀನ ಕೃತಿಗಳು ಕನ್ನಡಿಗರಿಗೆ ಸುಲಭವಾಗಿ ದೊರೆಯುವ ಜತೆಗೆ, ಶಾಶ್ವತವಾಗಿ ಉಳಿಯಬೇಕೆಂಬ ಉದ್ದೇಶದಿಂದ ಅಕಾಡೆಮಿ ಈ ಯೋಜನೆ ರೂಪಿಸಿದೆ. ಈಗಾಗಲೆ 26 ಕೃತಿಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಈ ಕೃತಿಗಳು ಶೀಘ್ರದಲ್ಲಿಯೇ ಅಕಾಡೆಮಿ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿವೆ. 

ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಕಥೆಗಾರ ಶ್ರೀಹರ್ಷ ಸಾಲಿಮಠ ಅವರ ಸಂಪಾದಕತ್ವದಲ್ಲಿ ಡಿಜಿಟಲೀಕರಣ ಪ್ರಕ್ರಿಯೆ ನಡೆಯುತ್ತಿದೆ. ಆಯ್ಕೆ ಮಾಡಿಕೊಂಡ ಮಹಾಕಾವ್ಯಗಳ ಪುಟಗಳನ್ನು ಸ್ಕ್ಯಾನ್‌ ಮಾಡುವ ಬದಲು, ಓದುಗರ ದೃಷ್ಟಿಯಿಂದ ಯೂನಿಕೋಡ್ ತಂತ್ರಜ್ಞಾನ ಬಳಸಿಕೊಂಡು ಹೊಸದಾಗಿ ಟೈಪ್ ಮಾಡಲಾಗುತ್ತಿದೆ. ಇದರಿಂದಾಗಿ ನಿಗದಿತ ಕೃತಿಗನ್ನು ಒಮ್ಮೆಲೆಯೇ ಸಂಪೂರ್ಣವಾಗಿ ಅಥವಾ ಪುಟವಾರು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಇಲ್ಲವಾದಲ್ಲಿ, ನಿರ್ದಿಷ್ಟ ಸಾಲುಗಳನ್ನು ಅಕ್ಷರ ಶೈಲಿಯಲ್ಲಿಯೂ ಓದಬಹುದಾಗಿದೆ. 

ADVERTISEMENT

20 ಸಾವಿರ ಪುಟ: ಈಗಾಗಲೇ 26 ಕೃತಿಗಳಿಂದ ಸುಮಾರು 20 ಸಾವಿರ ಪುಟಗಳನ್ನು ಡಿಜಿಟಲೀಕರಣಕ್ಕೆ ಒಳಪಡಿಸಲಾಗಿದೆ. ಈ ಪ್ರಕ್ರಿಯೆ 2025ರ ಅಕ್ಟೋಬರ್‌ನಲ್ಲಿ ಪ್ರಾರಂಭವಾಗಿದ್ದು, ನೂರು ವರ್ಷಗಳಿಗಿಂತ ಹಳೆಯದಾದ ಹಾಗೂ ಹಕ್ಕುಸ್ವಾಮ್ಯ ಹೊಂದಿರದ ಕೃತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಈ ಯೋಜನೆಯಡಿ ಜಾನಪದ ಕಾವ್ಯಗಳನ್ನೂ ಪರಿಗಣಿಸಲಾಗಿದೆ. ಮಂಟೇಸ್ವಾಮಿ, ಮಲೆಮಹದೇಶ್ವರ ಮೊದಲಾದ ಕಾವ್ಯಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಕಾವ್ಯದ ಲಭ್ಯತೆ ಆಧರಿಸಿ ಈ ಪ್ರಕ್ರಿಯೆಯನ್ನು ನಿರಂತರ ಮುಂದುವರಿಸಲು ಅಕಾಡೆಮಿ ನಿರ್ಧರಿಸಿದೆ. 

‘ಯೋಜನೆಯಡಿ ಪುಸ್ತಕಗಳ ಡಿಜಿಟಲೀಕರಣ ಪ್ರಕ್ರಿಯೆ ನಿರಂತರ ನಡೆಯಲಿದೆ. ಡಿಜಿಟಲೀಕರಣಗೊಂಡ ಪುಸ್ತಕಗಳನ್ನು ಅಕಾಡೆಮಿ ವೆಬ್‌ಸೈಟ್‌ಗೆ ಅಳವಡಿಸಲಾಗುತ್ತದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯ ಆ್ಯಪ್‌ಗಳ ನೆರವಿನಿಂದ ಸುಲಭವಾಗಿ ಓದಲು ಹಾಗೂ ಕೇಳಲು ಸಾಧ್ಯ. ಹೀಗಾಗಿ, ಅಂಧರನ್ನು ಕೂಡ ಈ ಕೃತಿಗಳು ತಲುಪಲಿವೆ. ಕಾವ್ಯದಲ್ಲಿನ ನಿರ್ದಿಷ್ಟ ಸಾಲು ಹಾಗೂ ಪದಗಳನ್ನು ಹುಡುಕುವ ಅವಕಾಶವನ್ನೂ ಒದಗಿಸಲಾಗಿದೆ’ ಎಂದು ಶ್ರೀಹರ್ಷ ಸಾಲಿಮಠ ವಿವರಿಸಿದರು. 

ಕನ್ನಡದ ಅಮೂಲ್ಯ ಕೃತಿಗಳು ಎಲ್ಲ ಕನ್ನಡಿಗರಿಗೆ ತಲುಪಬೇಕು. ಪ್ರಪಂಚದ ಯಾವುದೇ ಭಾಗದಲ್ಲಿದ್ದರೂ ಲಭ್ಯವಾಗಬೇಕು. ಈ ಉದ್ದೇಶದಿಂದ ಡಿಜಿಟಲೀಕರಣ ಪ್ರಕ್ರಿಯೆ ನಡೆಯುತ್ತಿದೆ
ಎಲ್.ಎನ್. ಮುಕುಂದರಾಜ್ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ

ಯಾವೆಲ್ಲ ಕೃತಿಗಳ ಡಿಜಿಟಲೀಕರಣ?

  • ಪಂಪನ ‘ವಿಕ್ರಮಾರ್ಜುನ ವಿಜಯ’

  • ರನ್ನನ ‘ಗದಾಯುದ್ಧ’ 

  • ಶ್ರೀವಿಜಯನ ‘ಕವಿರಾಜಮಾರ್ಗ’ 

  • ಆಂಡಯ್ಯನ ‘ಕಬ್ಬಿಗರ ಕಾವಂ’ 

  • ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ 

  • ಜನ್ನನ ‘ಯಶೋಧರ ಚರಿತೆ’ 

  • ಲಕ್ಷ್ಮೀಶನ ‘ಜೈಮಿನಿ ಭಾರತ’ 

  • ಕನಕದಾಸರ ‘ನಳ ಚರಿತ್ರೆ’ ‘ರಾಮಧಾನ್ಯ ಚರಿತ್ರೆ’ 

  • ಫಲ್ಕುರಿಕೆ ಸೋಮನಾಥನ ‘ಸೋಮೇಶ್ವರ ಶತಕ’ 

  • ಹರಿಹರನ ‘ಪಂಪಾಶತಕ’ ‘ರಕ್ಷಾ ಶತಕ’ 

  • ಮುದ್ದಣನ ‘ರಾಮಾಶ್ವಮೇಧಂ’

ಸೇರಿ 26 ಕಾವ್ಯಗಳನ್ನು ಈಗಾಗಲೇ ಡಿಜಿಟಲೀಕರಣ ಮಾಡಲಾಗಿದೆ. ಗಳಗನಾಥ ಮೊದಲಾದವರ ಕೃತಿಗಳ ಡಿಜಿಟಲೀಕರಣ ಪ್ರಕ್ರಿಯೆ ನಡೆಯುತ್ತಿದೆ.  ‘ಕನ್ನಡಿಗರಿಗೆ ಕನ್ನಡ ಕಾವ್ಯಗಳನ್ನು ತಲುಪಿಸಲು ಈ ಯೋಜನೆ ಸಹಕಾರಿಯಾಗಲಿದೆ. ಮುದ್ರಣ ಮಾಧ್ಯಮದ ಜತೆಗೆ ಡಿಜಿಟಲ್ ಮಾಧ್ಯಮಕ್ಕೂ ಅಕಾಡೆಮಿ ತೆರೆದುಕೊಂಡಿದೆ. ಈಗಾಗಲೇ ಡಿಜಿಟಲೀಕರಣಗೊಂಡ ಕಾವ್ಯಗಳನ್ನು ಶೀಘ್ರದಲ್ಲಿಯೇ ಅಕಾಡೆಮಿ ವೆಬ್‌ಸೈಟ್‌ಗೆ ಅಳವಡಿಸಿ ಜನಾರ್ಪಣೆ ಮಾಡಲಾಗುವುದು’ ಎಂದು ಎಲ್‌.ಎನ್. ಮುಕುಂದರಾಜ್ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.