ADVERTISEMENT

ಕರ್ನಾಟಕದ ಶಾಲೆಗಳಲ್ಲಿಯೂ 'ವಾಟರ್‌ ಬೆಲ್‌' ಮೊಳಗಿಸಲು ಚಿಂತನೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 10:15 IST
Last Updated 3 ಡಿಸೆಂಬರ್ 2019, 10:15 IST
   

ಬೆಂಗಳೂರು: ಶಾಲಾ ಅವಧಿಯಲ್ಲಿ ಮಕ್ಕಳು ನೀರು ಕುಡಿಯುವುದನ್ನು ನೆನಪಿಸಲು ಕೇರಳದ ತ್ರಿಶೂರ್‌ ಜಿಲ್ಲೆಯ ಸೇಂಟ್‌ ಜೋಸೆಫ್‌ ಪ್ರಾಥಮಿಕ ಶಾಲೆಯಲ್ಲಿ 'ವಾಟರ್‌ ಬೆಲ್‌' ವ್ಯವಸ್ಥೆಜಾರಿಗೊಳಿಸಿದ ಸುದ್ದಿ ದೇಶದ ಗಮನ ಸೆಳೆದಿತ್ತು. ಇದೀಗ ಕರ್ನಾಟಕ ಮತ್ತು ತೆಲಂಗಾಣ ಸರ್ಕಾರಗಳೂ ಶಾಲೆಗಳಲ್ಲಿ ವಾಟರ್ ಬೆಲ್ ಮೊಳಗಿಸಲು ಗಂಭೀರ ಚಿಂತನೆ ನಡೆಸುತ್ತಿವೆ.

ಅನೌಪಚಾರಿಕವಾಗಿ ಕರ್ನಾಟಕ, ತಮಿಳುನಾಡು, ತೆಲಂಗಾಣ, ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ವಾಟರ್‌ ಬೆಲ್ ಮೊಳಗಿಸುವ ಪದ್ಧತಿ ಆರಂಭವಾಗಿದೆ.ದಕ್ಷಿಣ ಕನ್ನಡ, ರಾಯಚೂರು ಜಿಲ್ಲೆಯ ಹಲವು ಶಾಲೆಗಳಲ್ಲಿ ಪ್ರತಿದಿನ ನಿಗದಿತ ಅವಧಿಯ ಅಂತರದಲ್ಲಿಕಡ್ಡಾಯವಾಗಿ ಮಕ್ಕಳಿಗೆ ನೀರು ಕುಡಿಸಲಾಗುತ್ತಿದೆ.

ಯೋಜನೆಗೆ ಮುಖ್ಯಮಂತ್ರಿ, ಸಚಿವರ ಮೆಚ್ಚುಗೆ

ಕೇರಳದಲ್ಲಿ ಜಾರಿಗೊಳಿಸಲಾಗಿರುವ ‘ವಾಟರ್‌ ಬೆಲ್‌’ ಯೋಜನೆ ಬಗ್ಗೆ ಇಲ್ಲಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಟ್ವಿಟರ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೇರಳ ಮಾದರಿಯಲ್ಲಿ ರಾಜ್ಯದ ಶಾಲೆಗಳಲ್ಲೂ ‘ನೀರಿನ ಗಂಟೆ’ ಅಳವಡಿಕೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು ಎಂದು ಹೇಳಿದ್ದರು.

ಕೇರಳ ಮಾದರಿ

ತ್ರಿಶೂರ್‌ ಜಿಲ್ಲೆಯ ಸೇಂಟ್‌ ಜೋಸೆಫ್‌ ಪ್ರಾಥಮಿಕ ಶಾಲೆಯಲ್ಲಿಪ್ರತಿದಿನ ಬೆಳಿಗ್ಗೆ 11:45, ಮಧ್ಯಾಹ್ನ 2.45ಕ್ಕೆ ‘ನೀರಿನ ಗಂಟೆ’ ಮೊಳಗುತ್ತದೆ. ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ನೀರು ಕುಡಿಯುತ್ತಾರೆ.

‘ಮಕ್ಕಳು ಊಟದ ವೇಳೆ ಹೊರತುಪಡಿಸಿ ನೀರು ಕುಡಿಯುವುದಿಲ್ಲ. ನೀರಿನ ಕೊರತೆಯಿಂದ ಮೂತ್ರದ ಸೋಂಕು, ಮೂತ್ರಪಿಂಡದಲ್ಲಿ ಕಲ್ಲು, ನಿರ್ಜಲೀಕರಣ ಮುಂತಾದ ಆರೋಗ್ಯ ಸಮಸ್ಯೆಗಳ ಬರುತ್ತವೆ. ಹಾಗಾಗಿ ಪ್ರತಿದಿನ ಶಾಲಾ ಅವಧಿಯಲ್ಲಿ ಎರಡು ಬಾರಿ ಎಲ್ಲ ಮಕ್ಕಳೂ ಒಟ್ಟಾಗಿನೀರು ಕುಡಿಯವ ವ್ಯವಸ್ಥೆ ಮಾಡಿದ್ದೇವೆ’ ಎಂದು ಶಾಲೆಯ ಪ್ರಾಚಾರ್ಯರು ಹೇಳಿದ್ದರು.

ನೀರು ಕುಡಿಯುವುದು ಏಕೆ ಅವಶ್ಯಕ?

ನೀರು ಬಾಯಾರಿಕೆ ದಣಿವನ್ನು ನಿವಾರಿಸುವುದಲ್ಲದೆ, ದೇಹದ ಸಮತೋಲನವನ್ನು ಸೂಕ್ತ ಮಟ್ಟದಲ್ಲಿ ಕಾಪಾಡಿಕೊಳ್ಳುತ್ತದೆ. ಶರೀರದ ಉಷ್ಣತೆಯನ್ನು ಕಾಯ್ದುಕೊಳ್ಳುವಲ್ಲಿ, ಚರ್ಮದ ಸೌಂದರ್ಯವನ್ನು ಕಾಪಾಡುವಲ್ಲಿ, ಸ್ನಾಯುಗಳ ಶಕ್ತಿಯನ್ನು ವೃದ್ಧಿಸುವಲ್ಲಿ, ರಕ್ತ ಸಂಚಾರ ಸರಾಗಗೊಳಿಸುವಲ್ಲಿ ಹೀಗೆ ಶರೀರದ ಎಲ್ಲಾ ಚಯಾಪಚಯ ಕ್ರಿಯೆಗಳನ್ನು ಉಲ್ಲಾಸಗೊಳಿಸಿ ವ್ಯಕ್ತಿಯನ್ನು ಕ್ರಿಯಾಶೀಲನನ್ನಾಗಿಸಲು ಸಹಕಾರಿಯಾಗಿದೆ. ನೀರು ಮಕ್ಕಳ ಏಕಾಗ್ರತೆ, ಗಮನವ್ಯಾಪ್ತಿ ಮತ್ತು ನಡವಳಿಕೆಯನ್ನು ಪರಿಣಾಮಕಾರಿಯಾಗಿ ಸುಧಾರಿಸುತ್ತದೆ ಎಂಬ ಅರಿಕೆಯೊಂದಿಗೆ ಮಕ್ಕಳಲ್ಲಿ ನೀರಿನ ಅವಶ್ಯಕತೆಯ ಅರಿವು ಮೂಡಿಸಿ, ಮಕ್ಕಳನ್ನು ನೀರು ಕುಡಿಯುವಂತೆ ಪ್ರೇರೇಪಿಸಿದೆ.

ಯೋಜನೆಗೆ ಉತ್ತಮ ಪ್ರತಿಕ್ರಿಯೆ
ಸಾಮಾಜಿಕ ಜಾಲತಾಣಗಳಲ್ಲಿ‘ವಾಟರ್‌ ಬೆಲ್‌’ ಯೋಜನೆ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಟ್ವಿಟರ್‌ನಲ್ಲಿ#waterbell ಹ್ಯಾಷ್‌ಟ್ಯಾಗ್‌ ಅಡಿಯಲ್ಲಿಟ್ರೆಂಡ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.