ಸಾಂದರ್ಭಿಕ ಚಿತ್ರ
ಬೆಂಗಳೂರು: ಶಸ್ತ್ರಾಸ್ತ್ರ ತೊರೆದು ಶರಣಾದ ಆರು ಮಂದಿ ನಕ್ಸಲರನ್ನು ಬಿಗಿ ಭದ್ರತೆ ನಡುವೆ ಗುರುವಾರ ರಾತ್ರಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಪೊಲೀಸರು ಸ್ಥಳಾಂತರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರ ಎದುರು ಬುಧವಾರ ರಾತ್ರಿ ಶರಣಾದ ನಕ್ಸಲರಾದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಟಿ.ಎನ್. ಜಿಶಾ, ಕೆ.ವಸಂತ್, ಮಾರೆಪ್ಪ ಅರೋಲಿ ಅವರನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಡಿವೈಎಸ್‌ಪಿ ಬಾಲಾಜಿ ಸಿಂಗ್ ಅವರ ನೇತ್ವತ್ವದಲ್ಲಿ ನಗರದ ರಾಷ್ಟ್ರೀಯ ತನಿಖಾ ದಳದ(ಎನ್‌ಐಎ) ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ನ್ಯಾಯಾಲಯವು ಆರು ಮಂದಿಯನ್ನು ಜನವರಿ 30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಎಲ್ಲರನ್ನೂ ಜೈಲಿಗೆ ಕಳುಹಿಸಲಾಯಿತು. ಇದಕ್ಕೂ ಮೊದಲು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರು ಮಂದಿಯ ಆರೋಗ್ಯ ತಪಾಸಣೆ ನಡೆಸಲಾಯಿತು.
ಮುಖ್ಯಮಂತ್ರಿಯವರ ಗೃಹ ಕಚೇರಿಯಲ್ಲಿ ಶರಣಾದ ನಂತರ ನಕ್ಸಲರನ್ನು ಪೊಲೀಸರು ಬಂಧಿಸಿದ್ದರು. ನಾಲ್ವರು ಮಹಿಳೆಯರನ್ನು ಸಾಂತ್ವನ ಕೇಂದ್ರ ಹಾಗೂ ಇಬ್ಬರು ಪುರುಷರನ್ನು ಆಡುಗೋಡಿಯ ಎಫ್‌ಎಸ್‌ಎಲ್ ತಾಂತ್ರಿಕ ಕಚೇರಿಯಲ್ಲಿ ಬುಧವಾರ ರಾತ್ರಿ ಇರಿಸಿದ್ದರು.
ಗುರುವಾರ ಬೆಳಿಗ್ಗೆ ಆರು ಮಂದಿಯನ್ನೂ ತಾಂತ್ರಿಕ ಕೇಂದ್ರಕ್ಕೆ ಕರೆತಂದ ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಿದರು ಎಂದು ಗೊತ್ತಾಗಿದೆ.
‘ಶರಣಾದವರಿಂದ ನಕ್ಸಲ್ ಚಟುವಟಿಕೆ ನಡೆಸಿದ್ದ ಸ್ಥಳದ ಮಾಹಿತಿ ಪಡೆದುಕೊಳ್ಳಲಾಗಿದೆ. ಅಪರಾಧ ಪ್ರಕರಣಗಳ ಮಾಹಿತಿ ಹಾಗೂ ಶಸ್ತ್ರಾಸ್ತ್ರ ತೊರೆದು ಮುಖ್ಯವಾಹಿನಿಗೆ ಬಂದಿರುವ ಬಗ್ಗೆ ಅಧಿಕೃತವಾಗಿ ಸ್ವಯಂ ಹೇಳಿಕೆಗಳನ್ನು ಪಡೆಯಲಾಗಿದೆ. ಆರೋಪಿಗಳ ವಿರುದ್ಧ ಬಹುತೇಕ ಪ್ರಕರಣಗಳು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲೇ ಇರುವುದರಿಂದ ಅಲ್ಲಿನ ಡಿವೈಎಸ್‌ಪಿ ನೇತೃತ್ವದ ತಂಡ ಹಾಗೂ ನಗರದ ಭಯೋತ್ಫಾದನಾ ನಿಗ್ರಹ ಘಟಕ (ಎಟಿಎಸ್) ವಿಚಾರಣೆ ನಡೆಸಿತು’ ಎಂದು ಮೂಲಗಳು ತಿಳಿಸಿವೆ.
ಆರು ಮಂದಿ ನಕ್ಸಲರ ವಿರುದ್ಧವೂ ‘ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ’(ಯುಎಪಿಎ) ಅಡಿ ಪ್ರಕರಣ ದಾಖಲಾಗಿದೆ. ಹೀಗಾಗಿ, ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಜ.30ರ ಬಳಿಕ ಚಿಕ್ಕಮಗಳೂರು ಹಾಗೂ ಇತರೆ ಪೊಲೀಸ್ ಠಾಣೆಯ ಪೊಲೀಸರು ಬಾಡಿ ವಾರೆಂಟ್ ಮೇಲೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯಿದೆ.
‘ತನಿಖೆ ಪೂರ್ಣಗೊಂಡ ಬಳಿಕ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.