ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ | ಮಕ್ಕಳಿಗೆ ನೋವಾಗುವಂತೆ ಮಾಡಬೇಡಿ: ಸುರೇಶ್ ಕುಮಾರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಆಗಸ್ಟ್ 2020, 2:54 IST
Last Updated 10 ಆಗಸ್ಟ್ 2020, 2:54 IST
ಸಚಿವ ಎಸ್‌. ಸುರೇಶ್ ಕುಮಾರ್ (ಸಂಗ್ರಹ ಚಿತ್ರ)
ಸಚಿವ ಎಸ್‌. ಸುರೇಶ್ ಕುಮಾರ್ (ಸಂಗ್ರಹ ಚಿತ್ರ)   

ಬೆಂಗಳೂರು: ಬೇರೆಯವರೊಂದಿಗೆ ಹೋಲಿಕೆ ಮಾಡಿ ಮಕ್ಕಳ ಮನಸ್ಸಿಗೆ ನೋವಾಗುವಂತೆ ಮಾಡಬೇಡಿ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್ ಸೋಮವಾರ ಬೆಳಿಗ್ಗೆ ಪೋಷಕರಲ್ಲಿ ಮನವಿ ಮಾಡಿದ್ದಾರೆ.

2019–20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಪೋಷಕರನ್ನು ಉದ್ದೇಶಿಸಿ ಫೇಸ್‌ಬುಕ್‌ನಲ್ಲಿ ಬರಹ ಪ್ರಕಟಿಸಿರುವ ಅವರು, ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದು ಹೇಳಿದ್ದಾರೆ.

‘ಆತ್ಮೀಯ ಪೋಷಕರೇ, ಇಂದು, (10-08-2020) ಮಧ್ಯಾಹ್ನ 3.30ರ ಹೊತ್ತಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗುತ್ತದೆ. ತಮ್ಮ ಮೊಬೈಲಿಗೆ ಫಲಿತಾಂಶ ಬರಲಿದೆ. ಕೊರೊನಾ ವಾತಾವರಣದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುವುದೇ ದೊಡ್ಡ ಸಾಧನೆ ಎಂಬುದು ತಮಗೆ ತಿಳಿದಿರಲಿ. ತಮ್ಮ ಮಕ್ಕಳ ಫಲಿತಾಂಶ ಎಷ್ಟೇ ಆಗಿರಲಿ ಅವರಿಗೆ ಹೇಳುವಾಗ ನಿಧಾನವಾಗಿ ಪ್ರೀತಿಯಿಂದ ತಿಳಿಸಿ. ಗಳಿಸಿದ ಅಂಕಗಳಿಗೆ ತೃಪ್ತಿ ಪಡುವಂತೆ ಮನವೊಲಿಸಿ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿ. ಅವರನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಿ ನೋವಾಗುವಂತೆ ಮಾಡಬೇಡಿ. ಅವರು ಯಾವ ಕೋರ್ಸನ್ನು ಆಯ್ಕೆ ಮಾಡಿದ್ದರೂ ಆ ಕೋರ್ಸಿಗೆ ಸೇರಿಸಿ ಮುಂದೆ ಚೆನ್ನಾಗಿ ಓದಲು ಹೇಳಿ ಹಾಗೂ ಒಂದು ವೇಳೆ ಅವರ ನಿರೀಕ್ಷೆಗಿಂತ ಯಾವುದಾದರೂ ವಿಷಯದಲ್ಲಿ ಕಡಿಮೆ ಅಂಕ ಬಂದಲ್ಲಿ ಮರು ಮೌಲ್ಯಮಾಪನ ಮತ್ತು ಮರು ಎಣಿಕೆಗೆ ಅವಕಾಶವಿರುತ್ತದೆ. ಮಗು ಮನೆಯ ಬೆಳಕು. ಆ ಬೆಳಕು ಸದಾ ಪ್ರಜ್ವಲಿಸಲಿ ಎಂಬುದೇ ನಮ್ಮೆಲ್ಲರ ಆಶಯ’ ಎಂದು ಫೇಸ್‌ಬುಕ್ ಬರಹದಲ್ಲಿ ಸಚಿವರು ಉಲ್ಲೇಖಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.